'ನಾನು ಮತ್ತು ವರಲಕ್ಷ್ಮಿ' ಸ್ಯಾಂಡಲ್ ವುಡ್ ನ ಮೊದಲ ಬೈಕ್ ರೇಸಿಂಗ್ ಸಿನಿಮಾ..!
ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಅವರು ಚೊಚ್ಚಲ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 'ನಾನು ಮತ್ತು ವರಲಕ್ಷ್ಮಿ' ಚಿತ್ರದ ಕೊನೆಯ ಹಂತದ ಶೂಟಿಂಗ್ ನವೆಂಬರ್ 23 ರಿಂದ ಆರಂಭವಾಗಲಿದೆ.
ನಿರ್ದೇಶಕ ಪ್ರೀತಂ ಗುಬ್ಬಿ ಆಕ್ಷನ್-ಕಟ್ ಹೇಳುತ್ತಿರುವ 'ನಾನು ಮತ್ತು ವರಲಕ್ಷ್ಮಿ' ಚಿತ್ರ ಕನ್ನಡ ಚಿತ್ರರಂಗದ ಮೊದಲ ಬೈಕ್ ರೇಸಿಂಗ್ ಕಥೆಯಾಧರಿತ ಸಿನಿಮಾವಾಗಿದೆ. ಅಲ್ಲದೇ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬೈಕ್ ರೇಸರ್ ಕೋಚ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ದೇಶಕ ಪ್ರೀತಂ ಗುಬ್ಬಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಬಹುನಿರೀಕ್ಷಿತ ಚಿತ್ರ 'ಬಾಕ್ಸರ್' ಈ ವಾರ (ನವೆಂಬರ್ 20) ತೆರೆ ಕಾಣುತ್ತಿದೆ. ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಲೀಡ್ ರೋಲ್ ನಲ್ಲಿ ಮಿಂಚುತ್ತಿರುವ 'ಬಾಕ್ಸರ್' ಚಿತ್ರದ ಕಡೆ ನಿರ್ದೇಶಕರು ಹೆಚ್ಚಿನ ಗಮನ ಹರಿಸಿದ್ದು, ಅದಕ್ಕಾಗಿ 'ನಾನು ಮತ್ತು ವರಲಕ್ಷ್ಮಿ' ಶೂಟಿಂಗ್ ಗೆ ಸ್ವಲ್ಪ ಬ್ರೇಕ್ ನೀಡಿದ್ದಾರೆ.

ಇದುವರೆಗೆ ಬೈಕ್ ರೇಸಿಂಗ್ ಕಥೆಯಾಧರಿತ ಚಿತ್ರಗಳು ಕನ್ನಡದಲ್ಲಿ ಮೂಡಿಬಂದಿಲ್ಲವಂತೆ, ಇದೀಗ ನಿರ್ದೇಶಕ ಪ್ರೀತಂ ಗುಬ್ಬಿ ಅವರು 'ನಾನು ಮತ್ತು ವರಲಕ್ಷ್ಮಿ' ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಮೋಟಾರು ಬೈಕ್ ರೇಸಿಂಗ್ ಕಥೆಯಾಧರಿತ ಸಿನಿಮಾವನ್ನು ಗಾಂಧಿನಗರಕ್ಕೆ ಹೊತ್ತು ತಂದಿದ್ದಾರೆ.
ಇನ್ನು ಚಿತ್ರಕ್ಕೆ ಮೋಟಾರ್ ಸ್ಟಂಟ್ಸ್ ಗಳನ್ನು ಕೋಲಾರದ ರಿಯಲ್ ಮೋಟೋ-ಕ್ರಾಸ್ ರೇಸಿಂಗ್ ಟ್ರ್ಯಾಕ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಕರ್ನಾಟಕದ ಖ್ಯಾತ, ಮೋಟಾರ್ ರೇಸರ್ ಕನ್ನಡಿಗ ಸಿ.ಎಸ್ ಸಂತೋಷ್ ಅವರ ಸಹಾಯ ಪಡೆದುಕೊಳ್ಳಲಾಗಿದೆ.
ಊಟಿ ಸುತ್ತಮುತ್ತ ಚಿತ್ರದ ಮೊದಲನೇ ಹಂತದ ಚಿತ್ರೀಕರಣ ನಡೆದಿದ್ದು, ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಟ್ಟಿರುವ ನಟ ಪೃಥ್ವಿ ಅವರಿಗೆ ನಾಯಕಿಯಾಗಿ ಮಾಳವಿಕಾ ಮೋಹನ್ ಅವರು ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ಚಿತ್ರಕ್ಕೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಹರ್ಷ ಅವರು ನೃತ್ಯ ನಿರ್ದೇಶನ ಮಾಡಿದ್ದು, ಫೈಟ್ ಮಾಸ್ಟರ್ ರವಿವರ್ಮಾ ಸಾಹಸ ಸಂಯೋಜನೆ ಮಾಡಿದ್ದಾರೆ.


Click it and Unblock the Notifications