ಲಂಡನ್ ಚಿತ್ರೋತ್ಸವಕ್ಕೆ ಆಯ್ಕೆಯಾದ ರಿಷಬ್ ಶೆಟ್ಟಿಯ 'ಪೆಡ್ರೋ'
ಇತ್ತೀಚಿಗಷ್ಟೆ ದಕ್ಷಿಣ ಕೊರಿಯಾದ ಪ್ರಖ್ಯಾತ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದ 'ಪೆಡ್ರೋ' ಸಿನಿಮಾ ಈಗ ಇನ್ನೊಂದು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ವಿಚಾರ ಹೊರಬಿದ್ದಿದೆ.
ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ಲಂಡನ್ ಚಲನಚಿತ್ರೋತ್ಸವದಲ್ಲಿ ಪೆಡ್ರೋ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಸಂತಸ ಸುದ್ದಿಯನ್ನು ಸ್ವತಃ ರಿಷಬ್ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''Our #PEDRO is now selected for prestigious @BFI ಪೆಡ್ರೋನ ಹೆಜ್ಜೆ ಈಗ ಲಂಡನ್ ಕಡೆಗೆ.. ನಮ್ಮ ನಿರ್ಮಾಣದ ಚಿತ್ರ 'ಪೆಡ್ರೋ' ಇದೀಗ ಪ್ರತಿಷ್ಠಿತ ಲಂಡನ್ ಚಲನಚಿತ್ರೋತ್ಸವಕ್ಕೆ ಆಯ್ಕೆಗೊಂಡಿದ್ದು ಸಂತಸ ತಂದಿದೆ. ನಿರ್ದೇಶಕ ನಟೇಶ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು.'' ಎಂದು ಪೋಸ್ಟ್ ಹಾಕಿದ್ದಾರೆ.
ಇದಕ್ಕೂ ಮುಂಚೆ ದಕ್ಷಿಣ ಕೊರಿಯಾದ ಪ್ರಖ್ಯಾತ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪೆಡ್ರೋ ಸಿನಿಮಾ ಆಯ್ಕೆಯಾಗಿತ್ತು. BIFF (Busan International Film Festival) ಗೆ ಆಯ್ಕೆಯಾದ ಮೊಟ್ಟ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಟೇಶ್ ಹೆಗ್ಡೆ ಈ ಚಿತ್ರ ನಿರ್ದೇಶನ ಮಾಡಿದ್ದು, ನಟ-ನಿರ್ದೇಶಕ ರಿಷಬ್ ಶೆಟ್ಟಿ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ಪೆಡ್ರೋ ಸಿನಿಮಾ ಬುಸಾನ್ ಚಿತ್ರೋತ್ಸವಕ್ಕೆ ಆಯ್ಕೆಯಾದಾಗಲೂ ರಿಷಬ್ ಶೆಟ್ಟಿ ಟ್ವಿಟ್ಟರ್‌ನಲ್ಲಿ ಖುಷಿ ಹಂಚಿಕೊಂಡಿದ್ದರು.
''ನಟೇಶ್ ಹೆಗಡೆ ಅವರ ಚೊಚ್ಚಲ ನಿರ್ದೇಶನ ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣದಲ್ಲಿ ತಯಾರಾದ #Pedro ಸಿನೆಮಾ ಇದೀಗ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪ್ರಥಮ ಕನ್ನಡ ಚಿತ್ರ ಇದಾಗಿದ್ದು 'new current section'ನಲ್ಲಿ World primier ಆಗಲಿದೆ'' ಎಂದು ರಿಷಬ್ ಶೆಟ್ಟಿ ಪೋಸ್ಟ್ ಹಾಕಿದ್ದರು.
2019ರಲ್ಲಿ 'ಪೆಡ್ರೋ' ಸಿನಿಮಾ ಎನ್‌ಎಫ್‌ಡಿಸಿ ಫಿಲ್ಮ್ ಬಜಾರ್‌ನ ವರ್ಕ್ ಇನ್ ಪ್ರೊಗ್ರೆಸ್ ಲ್ಯಾಬ್‌ಗೆ ಆಯ್ಕೆಯಾಗಿತ್ತು. ಈ ವಿಭಾಗದಲ್ಲಿ ಪ್ರಶಸ್ತಿ ಸಹ ಪಡೆದುಕೊಂಡಿದೆ. ಮಧ್ಯವಯಸ್ಕ ಎಲೆಕ್ಟ್ರಿಷಿಯನ್ ತನ್ನ ತಾಯಿ ಮತ್ತು ಸಹೋದರನ ಜೊತೆ ದೂರದ ಹಳ್ಳಿಯಲ್ಲಿ ವಾಸಿಸುತ್ತಿದ್ದು, ಆಕಸ್ಮಿಕವಾಗಿ ಅವಮಾನಕರ ಕೃತ್ಯವನ್ನು ಎಸಗುತ್ತಾನೆ. ಆ ಘಟನೆ ಬಳಿಕ ಗ್ರಾಮಸ್ಥರು ಅನಿರೀಕ್ಷಿತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಈ ಘಟನೆ ಆಧರಿಸಿ ಪೆಡ್ರೋ ಸಿನಿಮಾ ತಯಾರಾಗಿದೆ.
ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಬ್ಯುಸಿ
ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರುವ 'ಕಾಂತಾರ' ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ನಾಯಕನಾಗಿಯೂ ನಟಿಸುತ್ತಿದ್ದಾರೆ. ಆಗಸ್ಟ್ 6 ರಂದು 'ಕಾಂತಾರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಆಗಸ್ಟ್ 27 ರಂದು ಚಿತ್ರದ ಮುಹೂರ್ತ ನಡೆದಿದ್ದು, ಅಂದಿನಿಂದಲೇ ಚಿತ್ರೀಕರಣವೂ ಶುರುವಾಗಿದೆ. ಕುಂದಾಪುರ ಸುತ್ತಮುತ್ತಾ ಚಿತ್ರೀಕರಣ ನಡೆಯಲಿದೆ. ಕಾಂತಾರ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. 25 ವರ್ಷದ ನಂತರ 'ಒಂದು ಮುತ್ತಿನ ಕಥೆ' ಚಿತ್ರದ ನಟಿ ಅರ್ಚನಾ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.


Click it and Unblock the Notifications











