ತೆರೆಗೆ ಬರಲು ಸಜ್ಜಾಗಿದೆ 'ತರ್ಲೆ ವಿಲೇಜ್'
'ತಿಥಿ' ಖ್ಯಾತಿಯ ಕಲಾವಿದರು ಅಭಿನಯಿಸಿರುವ ಹೊಸ ಚಿತ್ರ 'ತರ್ಲೆ ವಿಲೇಜ್' ತೆರೆಗೆ ಬರಲು ಸಜ್ಜಾಗಿದೆ. ಯಶಸ್ವಿಯಾಗಿ ಶೂಟಿಂಗ್ ಮುಗಿಸಿರುವ 'ತರ್ಲೆ ವಿಲೇಜ್' ಈ ವಾರ ಸೆನ್ಸಾರ್ ಅಧಿಕಾರಿಗಳ ಎದುರು ಬರಲಿದ್ದು, ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆಯುವ ನಿರೀಕ್ಷೆಯಲ್ಲಿದೆ.
ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ, 'ತಿಥಿ' ಚಿತ್ರದಂತೆ ಮೋಡಿ ಮಾಡುವ ಭರವಸೆಯಲ್ಲಿದೆ. ಈ ಸಿನಿಮಾ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಸುತ್ತುತ್ತದೆ. ಹಳ್ಳಿಯ ಜನರ ಪ್ರೀತಿ-ಪ್ರೇಮ, ಗದ್ದಲ-ಗಲಾಟೆ, ಹಾಸ್ಯ, ನ್ಯಾಯ, ಪಂಚಾಯಿತಿ ಎಲ್ಲವನ್ನೂ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಟ್ರೈಲರ್ ನಲ್ಲಿ ಗಡ್ಡಪ್ಪನ ಮ್ಯಾನರಿಸಂ ಹಾಗೂ ಸೆಂಚುರಿಗೌಡರ ಪೋಲಿ ಮಾತುಗಳು ಪ್ರೇಕ್ಷಕರನ್ನ ನಕ್ಕು ನಗಿಸುತ್ತಿದೆ.[ಮೈಸೂರಿನಲ್ಲಿ ತಲೆ ಎತ್ತಿದ 'ತರ್ಲೆ ವಿಲೇಜ್' ಪೊಲೀಸ್ ಠಾಣೆ]

'ತರ್ಲೆ ವಿಲೇಜ್' ಚಿತ್ರದಲ್ಲಿ 'ತಿಥಿ' ಖ್ಯಾತಿಯ ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಇವರ ಜೊತೆಗೆ ಹರ್ಷಿತಾ, ಭಾಗ್ಯಶ್ರೀ, ಸೋಮು, ಸೇರಿದಂತೆ ಸುಮಾರು 70 ಕಲಾವಿದರು ಬಣ್ಣ ಹಚ್ಚಿದ್ದಾರೆ. 'ತಿಥಿ' ಚಿತ್ರದ ಗಡ್ಡಪ್ಪ ಅವರು ಈ ಚಿತ್ರದಲ್ಲಿ ಊರಿನ ಯಜಮಾನನ ಪಾತ್ರದಲ್ಲಿ ಅಭಿನಯಿಸಿದ್ದು, ತಮ್ಮಣ್ಣ ಅವರು ದನಗಳ ವ್ಯಾಪಾರ ಮಾಡುವ ದಲ್ಲಾಳಿಯ ಪಾತ್ರ ನಿರ್ವಹಿಸಿದ್ದಾರೆ.[ 'ತಿಥಿ' ನಾಯಕರ ಕಾಲ್ ಶೀಟ್ ಕಷ್ಟ: 'ಏನ್ ನಿನ್ ಪ್ರಾಬ್ಲಮ್ಮು']

ಅಂದ್ಹಾಗೆ, 'ತರ್ಲೆ ವಿಲೇಜ್' ಚಿತ್ರವನ್ನ ನಿರ್ದೇಶನ ಮಾಡಿರುವುದು ಕೆ ಎಂ ರಘು. 'ಜೀವಿತಾ ಲಾಂಛನ'ದಲ್ಲಿ ಶಿವು ಎಸ್ ಬಿ ನಿರ್ಮಾಣ ಮಾಡಿದ್ದಾರೆ. ವೀರ್ ಸಮರ್ಥ ಅವರ ಸಂಗೀತ ಈ ಚಿತ್ರಕ್ಕಿದೆ. ಸಿದ್ದೇಗೌಡ ಚಿತ್ರಕ್ಕೆ ಕಥೆ ಬರೆದಿದ್ದು, ನಿರ್ದೇಶಕ ರಘು ಚಿತ್ರಕಥೆ ಮಾಡಿದ್ದಾರೆ.

ಮೈಸೂರಿನ ಬಳಿ 'ತರ್ಲೆ ವಿಲೇಜ್' ಎಂಬ ಹಳ್ಳಿಯ ಸೆಟ್ ನಿರ್ಮಾಣ ಮಾಡಿ, ಮೈಸೂರು ಸುತ್ತಾಮುತ್ತಾ ಚಿತ್ರೀಕರಣ ಮಾಡಿದ್ದಾರೆ. ಸದ್ಯ, ಕಂಪ್ಲೀಟ್ ಶೂಟಿಂಗ್ ಮುಗಿಸಿರುವ 'ತರ್ಲೆ ವಿಲೇಜ್' ಈಗ ರಿಲೀಸ್ ಗೆ ರೆಡಿಯಾಗಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ 'ತಿಥಿ' ನಾಯಕರ ಮತ್ತೊಂದು ಮನರಂಜನೆ ತೆರೆ ಮೇಲೆ ಅಬ್ಬರಿಸಲಿದೆ.


Click it and Unblock the Notifications











