200 ಕಾಲೇಜುಗಳಲ್ಲಿ 'ವಾಸ್ಕೋಡಗಾಮ'ನ ಟ್ರೈಲರ್
ನಟ ಕಿಶೋರ್ ಯಾರಿಗೆ ಗೊತ್ತಿಲ್ಲ ಹೇಳಿ ಇಡೀ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ತಮ್ಮ ಅಭಿನಯ ಕೌಶಲ್ಯವನ್ನು ಪಸರಿಸಿರುವ ಕಿಶೋರ್ ಕನ್ನಡದ 'ವಾಸ್ಕೋಡಗಾಮ' ಚಿತ್ರದಲ್ಲಿ ಮತ್ತೊಮ್ಮೆ ಪೂರ್ಣ ಪ್ರಮಾಣದ ನಟನಾಗಿ, ನಾಯಕಿ ಪಾರ್ವತಿ ನಾಯರ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.
ನಿರ್ದೇಶಕ ಮಧುಚಂದ್ರ ಆಕ್ಷನ್-ಕಟ್ ಹೇಳಿರುವ 'ವಾಸ್ಕೋಡಗಾಮ' ಚಿತ್ರದಲ್ಲಿ ಬಹಳಷ್ಟು ವಿಶೇಷಗಳಿವೆ. ಅದೇನಪ್ಪಾ ಅಂದ್ರೆ, 'ವಾಸ್ಕೋಡಗಾಮ' ಚಿತ್ರದಲ್ಲಿ ನಾಯಕ ಕಿಶೋರ್ ಅವರು ಕನ್ನಡ ಮೇಷ್ಟ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಶೇಷವಾಗಿ ಈ ಚಿತ್ರದ ಟ್ರೈಲರನ್ನು ಕರ್ನಾಟಕದಾದ್ಯಂತ ಸುಮಾರು 200 ಕಾಲೇಜುಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಕನ್ನಡ ಚಿತ್ರರಂಗದಲ್ಲಿ, ಒಂದೇ ಬಾರಿಗೆ ಕರ್ನಾಟಕದಾದ್ಯಂತ ಹಲವಾರು ಸ್ಥಳಗಳಲ್ಲಿ ಟ್ರೈಲರ್ ಬಿಡುಗಡೆಯಾಗುತ್ತಿರುವುದು, ಇದೇ ಮೊದಲಂತೆ.
ಅಲ್ಲದೇ ನಿರ್ದೇಶಕ ಮಧುಚಂದ್ರ ಅವರು ವಿಶೇಷವಾಗಿ ಟ್ರೈಲರ್ ಬಿಡುಗಡೆಗೆ 'ಉಗ್ರಂ' ಖ್ಯಾತಿಯ ಶ್ರೀಮುರಳಿ ಅವರನ್ನು ಆಹ್ವಾನಿಸಿದ್ದಾರಂತೆ. ಆಗಸ್ಟ್ 6ಕ್ಕೆ ರಾಜ್ಯಾದ್ಯಂತ 'ವಾಸ್ಕೋಡಗಾಮ' ಟ್ರೈಲರ್ ಬಿಡುಗಡೆಯಾಗುತ್ತಿದೆ.
ಚಿತ್ರದ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಬಾಲಿವುಡ್ ನಾಯಕ ಕಿಂಗ್ ಖಾನ್, ಶಾರುಖ್ ಖಾನ್ ಜೊತೆ ಹೆಜ್ಜೆ ಹಾಕಿದ್ದ ಅಜಿಷಾ ಷಾ ಅವರು ಕಿಶೋರ್ ಜೊತೆ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಸತೀಶ್ ನಿನಾಸಂ ಅವರ 'ಲೂಸಿಯಾ' ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ, ಪೂರ್ಣಚಂದ್ರ ತೇಜಸ್ವಿ ಅವರು 'ವಾಸ್ಕೋಡಗಾಮ'ನ ಸುಂದರ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಒಟ್ನಲ್ಲಿ ಯಾವಾಗ್ಲೂ ಖಡಕ್ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದ ಕಿಶೋರ್ 'ವಾಸ್ಕೋಡಗಾಮ' ಚಿತ್ರದಲ್ಲಿ ಮೃದು ಸ್ವಭಾವದ ಕನ್ನಡ ಮೇಷ್ಟ್ರರಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಚಿತ್ರ ತೆರೆ ಕಾಣಲು ಕೊಂಚ ಟೈಮ್ ಇರೋದ್ರಿಂದ ಅಲ್ಲಿಯವರೆಗೂ ನೀವು ಕಾಯಲೇಬೇಕು.


Click it and Unblock the Notifications











