ಕನ್ನಡ ಚಿತ್ರಗಳಿಗೆ ಡಬ್ಬಿಂಗ್ ಭೂತದ ಕಾಟ!
ಕನ್ನಡ ಚಿತ್ರ ರಂಗದಕ್ಕೆ ದಶಕಗಳ ಇತಿಹಾಸ ಇದೆ. ಮೊದಲಿನಿಂದಲೂ ಕನ್ನಡ ಚಿತ್ರರಂಗ ಡಬ್ಬಿಂಗ್‌ಗೆ ವಿರೋಧ ಮಾಡುತ್ತಲೇ ಬಂದಿದೆ. ಡಬ್ಬಿಂಗ್ ವಿರೋಧಿಸಲು ಪ್ರಮುಖ ಕಾರಣಗಳು ಇದ್ದವು. ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಸಿನಿಮಾರಂಗದ ಕೊಡುಗೆ ಕೂಡ ಇರುತ್ತದೆ. ಹಾಗಾಗಿ ಕನ್ನಡ ನೆಲದಲ್ಲಿ ಪರಭಾಷಿಗರ ಹಾವಳಿ ತಡೆಯಲು ಡಬ್ಬಿಂಗ್‌ಗೆ ವಿರೋಧ ಮಾಡಲಾಗುತ್ತಿತ್ತು.
ಕೇವಲ ಡಬ್ಬಿಂಗ್ ತಡೆಯಲು ಸಾಕಷ್ಟು ಚಳುವಳಿಗಳು ಕೂಡ ಕನ್ನಡದಲ್ಲಿ ಆಗಿವೆ. ಸಾಕಷ್ಟು ಸ್ಟಾರ್ ನಟ ನಟಿಯರೂ ಕೂಡ ಡಬ್ಬಿಂಗ್ ವಿರೋಧಿಸುತ್ತಲೇ ಬಂದಿದ್ದಾರೆ. ಅದೇ ಕಾರಣಕ್ಕೆ ಈಗ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸಿನಿಮಾಗಳು ಪರಭಾಷೆಯ ಹಾವಳಿ ಇಲ್ಲದೆ ಉಳಿದುಕೊಳ್ಳಲು ಸಾಧ್ಯವಾಗಿತ್ತು. ಜೊತೆಗೆ ಕನ್ನಡದ ಹಲವು ಹೊಸ ಪ್ರತಿಭೆಗಳಿಗೆ ಕನ್ನಡದಲ್ಲಿ ವೇದಿಕೆ ಸಿಕ್ಕಿತು.
ಆದರೆ ಈಗ ಪರಿಸ್ಥಿತಿ ಬದಲಾಗುವಂತೆ ಕಾಣುತ್ತಿದೆ. ಯಾಕೆಂದರೆ ಈಗ ಎಲ್ಲೆಡೆ ಈ ಪ್ಯಾನ್ ಇಂಡಿಯಾ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಒಂದೇ ಸಿನಿಮಾವನ್ನು ಹಲವು ಭಾಷೆಗಳಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವುದು ಕೂಡ ಈಗ ಸರಳವಾಗಿದೆ.

ಕನ್ನಡ ಚಿತ್ರಗಳಿಗೆ ಡಬ್ಬಿಂಗ್‌ನಿಂದ ಹೊಡೆತ ಬೀಳಲಿದೆಯಾ?
ಕನ್ನಡಕ್ಕೆ ಹೋಲಿಸಿದರೆ ತಮಿಳು, ತೆಲುಗು, ಬಾಲಿವುಡ್ ಚಿತ್ರರಂಗ ಬಹಳ ದೊಡ್ಡವು. ಅಂದರೆ ಮಾರ್ಕೆಟ್‌ನಲ್ಲಿ ಕೊಂಚ ಹೆಚ್ಚು ಬೇಡಿಕೆ ಇದೆ. ಹೀಗಿರುವಾಗ ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆದರೆ ಇಲ್ಲಿನ ಕೆಲವು ಚಿತ್ರಗಳಿಗೆ ಹೊಡೆತ ಬೀಳುವುದು ಪಕ್ಕಾ. ಎನ್ನುವ ಚರ್ಚೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ. ಇದು ಕನ್ನಡ ಚಿತ್ರರಂಗದ ಸಿನಿಮಾಗಳನ್ನೂ ಮೂಲೆ ಗುಂಪು ಮಾಡಬಾರದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕನ್ನಡದ ಸದಭಿರುಚಿ ಚಿತ್ರಗಳ ಗತಿ ಏನು!
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಮಾಸ್ ಸಿನಿಮಾಗಳಿಗೆ ಎಲ್ಲೆಡೆ ರೆಡ್ ಕಾರ್ಪೆಟ್ ಸ್ವಾಗತ ಇರುತ್ತೆ. ದೊಡ್ಡ ಬ್ಯಾನರ್, ದೊಡ್ಡ ಬಜೆಟ್ ಸಿನಿಮಾಗಳು ರೆಡ್ ಕಾರ್ಪೆಟ್ ತಾವೆ ಹಾಕಿಕೊಳ್ಳುತ್ತವೆ. ಇಂಥಹ ಸಿನಿಮಾಗಳಿಗೆ ಕರ್ಮಷಿಯಲ್ ಆಗಿ ಹಿಟ್ ಆಗುವುದು ಕಷ್ಟಕರವಲ್ಲ. ಆದರೆ ಇನ್ನೂ ಕೆಲವು ಸಿನಿಮಾಗಳು ಸ್ಟಾರ್ ಕಾಸ್ಟ್ ಮೇಲೆ ನಿಲ್ಲದೆ. ಚಿತ್ರದ ಕಥೆಯ ಮೇಲೆ ನಿಂತಿರುತ್ತವೆ. ಒಂದಷ್ಟು ವಿಚಾರಗಳನ್ನು ಸಮಾಜಕ್ಕೆ ಸಾರಲು ಸದಭಿರುಚಿ ಚಿತ್ರಗಳು ನಿರ್ಮಾಣ ಆಗುತ್ತವೆ. ಇಂತಹ ಸಿನಿಮಾಗಳು ನಿಧಾನವಾಗಿ ಸಿನಿಪ್ರೇಕ್ಷಕರನ್ನು ತಲುಪುತ್ತವೆ. ಆದರೆ ಸಾಲು ಸಾಲಾಗಿ ಕನ್ನಡದ ಸೋ ಕಾಲ್ಡ್ ಕಮರ್ಷಿಯಲ್ ಚಿತ್ರಗಳ ಜೊತೆಗೆ ಪರಭಾಷೆಯ ಹಾವಳಿ ಶುರುವಾದರೆ ಈ ಚಿತ್ರಗಳಿಗೆ ನೆಲೆ ಸಿಗುವುದು ಕಷ್ಟ ಆಗ ಬಹುದು.

ಕನ್ನಡಕ್ಕೆ ಡಬ್ ಆಗಿವೆ RRR, ಪುಷ್ಪ, 83!
ಇನ್ನು ಭಾರತ ಬಹುನಿರೀಕ್ಷೆಯ ಸಿನಿಮಾಗಳಾದ RRR, ಅಲ್ಲು ಅರ್ಜುನ್ ಅಭಿನಯದ ಪುಷ್ಪ, ರಣ್ವೀರ್ ಸಿಂಗ್ ಅವರ 83 ಚಿತ್ರಗಳು ಸದ್ಯ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಈ ಚಿತ್ರಗಳು ಮೂಲ ಭಾಷೆಯ ಜೊತೆಗೆ ಕನ್ನಡದಲ್ಲೂ ಕರ್ನಾಟಕದಲ್ಲಿ ತೆರೆ ಕಾಣುತ್ತವೆ. ಹಾಗಾಗಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಕಡಿಮೆ ಆಗಬಹುದು ಎನ್ನುವ ಆತಂಕ ಮನೆ ಮಾಡಿದೆ. ಆದರೆ ಇತ್ತೀಚೆಗೆ ಕನ್ನಡದ ಚಿತ್ರಗಳು ಕೂಡ ಪರಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಆದರೂ ಕೂಡ ಕನ್ನಡ ಚಿತ್ರಗಳಿಗೆ ಪರಭಾಷೆಯ ಹೊಡೆತ ಬೀಳಲಿದೆ ಎನ್ನುವುದು ಸದ್ಯದ ತಲೆ ನೋವಿನ ವಿಚಾರ. ಯಾಕೆಂದರೆ ಈ ಚಿತ್ರಗಳ ಹಾವಳಿ ನಡುವೆ ಕನ್ನಡದ ಹಲವು ಸಿನಿಮಾಗಳಿಗೆ ರಿಲೀಸ್ ದಿನಾಂಕ ಹೊಂದಾಣಿಗೆ ಮಾಡುವುದೇ ದೊಡ್ಡ ಕಷ್ಟ ಆಗಲಿದೆ.

ಡಬ್ಬಿಂಗ್ ಹಾವಳಿ ಬಗ್ಗೆ ಶ್ರೀಮುರಳಿ ಮಾತು!
ಇನ್ನು ನಟ ಶ್ರೀಮುರಳಿ ಡಬ್ಬಿಂಗ್ ಕುರಿತಾಗಿ ಮಾತನಾಡಿದ್ದಾರೆ. ''ಡಬ್ಬಿಂಗ್ ಯಾವತ್ತಿದ್ದರೂ ಅಪಾಯಕಾರಿಯೇ, ನಮ್ಮ ಸಿನಿಮಾಗಳು ಚೆನ್ನಾಗಿರಬೇಕು. ನಮ್ಮ ಅಡುಗೆ ಚೆನ್ನಾಗಿದ್ದರೆ ನಾವು ಬೇರೆಯವರದ ಬಗ್ಗೆ ತಲೆ ಕೆಡಿಸಿಕೊಳ್ಳವ ಅವಶ್ಯಕತೆ ಇಲ್ಲ. ನಾವು ಒಳ್ಳೆಯ ಸಿನಿಮಾಗಳನ್ನು ನೀಡುತ್ತಾ, ನಮ್ಮ ಅಭಿಮಾನಿಗಳನ್ನು ಉಳಿಸಿಕೊಂಡರೆ ಯಾವ ಡಬ್ಬಿಂಗ್ ಬಂದರೂ ಏನೂ ಪರಿಣಾಮ ಆಗುವುದಿಲ್ಲ'' ಎಂದಿದ್ದಾರೆ ಶ್ರೀಮುರಳಿ.


Click it and Unblock the Notifications











