ಬಾಯ್ತಪ್ಪಿ ಆಡಿದ ಮಾತಿಗೆ ಕ್ಷಮೆ ಕೋರಿದ ನಾದಬ್ರಹ್ಮ ಹಂಸಲೇಖ
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇತ್ತೀಚೆಗೆ ತಮ್ಮ ಹೇಳಿಕೆಗಳಿಗೆ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಅನುಭವಿ ಸಂಗೀತ ನಿರ್ದೇಶಕರು ಸಭೆ, ಸಮಾರಂಭಗಳಲ್ಲಿ ಮಾತನಾಡುವ ಮಾತುಗಳು ಸಾಕಷ್ಟು ಚರ್ಚೆ ಹುಟ್ಟಾಕುತ್ತಿವೆ. ಈ ಹಿಂದೆ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತುಗಳು ವಿವಾದಕ್ಕೀಡಾಗಿತ್ತು.
ಇತ್ತೀಚೆಗೆ ಮತ್ತೊಂದು ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಬಗ್ಗೆ ಹಂಸಲೇಖ ನೀಡಿದ್ದ ಹೇಳಿಕೆ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಕ್ಷಮೆಗೆ ಆಗ್ರಹಿಸಲಾಗಿತ್ತು. ಇದೀಗ ಆ ಬಗ್ಗೆ ವೀಡಿಯೋ ಮಾಡಿ ನಾದಬ್ರಹ್ಮ ಕ್ಷಮೆ ಕೇಳಿದ್ದಾರೆ.

"ಮಹನೀಯರೆ..ದಯಮಾಡಿ ಕ್ಷಮಿಸಿ. ನಾನು ಯಾವತ್ತೂ ಅದರ ವಿರುದ್ಧ ಮಾತನಾಡಬೇಕು ಎಂದು ಯೋಚನೆ ಮಾಡಿದವನಲ್ಲ. ಆ ಪದವನ್ನು ಬಳಕೆ ಮಾಡಬೇಕು ಎಂದು ಕೂಡ ನಾನು ಅಂದುಕೊಂಡಿಲ್ಲ. ನಾನಿದ್ದ ಜಾಗದಲ್ಲಿ ಎಲ್ಲರೂ ಎಳೆದಾಡುತ್ತಿದ್ದರು. ಅವರಿಗೆ ಗದರೋಕೆ ಹೋಗಿ ಈಕಡೆ ಬಂದೆ. ಆ ಮಾತು ಬಂದಿದ್ದು ತಪ್ಪಾಯ್ತು. ಇನ್ನು ಎಂದಿಗೂ ಆ ಮಾತನ್ನು ಆಡಲ್ಲ"
"ನಾನು ಪಂಪನ ದಾಸಾನು ದಾಸ. ಕನ್ನಡ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿದ್ದೇನೆ. ಇದನ್ನು ದಯಮಾಡಿ ಬೆಳೆಸಬೇಡಿ. ಪತ್ರದಲ್ಲಿ ಬರೆದು ಪೋಸ್ಟ್ ಮಾಡಿ ಕ್ಷಮೆ ಕೇಳಿದ್ದೇನೆ. ಅದೇ ನನ್ನ ಧ್ವನಿ ಎಂದುಕೊಳ್ಳಿ" ಎಂದಿದ್ದಾರೆ ಅವರು.

ಇನ್ನು ಹಂಸಲೇಖ ಬರೆದ ಪತ್ರದಲ್ಲಿ ಏನಿದೆ? ಎನ್ನುವುದನ್ನು ನೋಡುವುದಾದರೆ "ನನ್ನ ಪಂಪನಾಣೆ, ಕ್ಷಮೆಇರಲಿ. ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ. ತ್ಯಾಗ ಮತ್ತು ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸಮುದಾಯಕ್ಕೆ ಶಿರಬಾಗಿ ಕ್ಷಮೆ ಕೋರುತ್ತೇನೆ"
"ಪ್ರಿಯ ಮಾಧ್ಯಮಗಳೇ, ದಯಮಾಡಿ. ನಾನು ದುಡುಕಿ ಮಾತಾಡಿದ ಆ "BULLSHIT" ಪದವನ್ನು DELETE ಮಾಡಿ. ಕನ್ನಡದ ಕಾವ್ಯಪರಂಪರೆಯ ಬೇರು ಕಾಂಡಗಳಾಗಿರುವ ಜೈನಕವಿ ಮುನಿ ಪರಂಪರೆಗೆ ಆಗಿರುವ ಗಾಯವನ್ನು ವಾಸಿಮಾಡಲು ಈ ಮೂಲಕ ಕೋರುತ್ತಿದ್ದೇನೆ. ಆಡು ಮಾತುಗಳನ್ನು COIN ಮಾಡುವ ನನ್ನಂತ ಸಿನಿಮಾ ರೈಟರ್‌ಗಳಿಗೆ ಇದು ಶಾಸ್ತಿ ಮತ್ತು ಶಾಪ ಎಂದು ನಾನು ಭಾವಿಸಿದ್ದೇನೆ"
"ಆ 'ಮಾತು' ನನ್ನ ಬಾಯಿಂದ ಅಲ್ಲಿ ಹೊರಟ ಹಿನ್ನೆಲೆ ಹೀಗಿದೆ-ಆ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ. channel ನವರು Individual byte ಗಳಿಗಾಗಿ ಕೈ ಹಿಡಿದು ಎಳೆದಾಡಿದರು. ಆಗ ಸಿಟ್ಟು ತಡೆದುಕೊಂಡು ಹೊರಬಂದೆ. ನನ್ನ ಸಹಾಯಕ, ನನ್ನನ್ನ ಹೊಗಳಿದ - 'ಸಿಟ್ಟು ತಡೆಯಲಾಗಲಿಲ್ಲ ಆದರೂ ತಡೆದುಕೊಂಡಿದ್ದು ಒಳ್ಳೆದಾಯ್ತು ಸಾರ್" - ಎಚಿದ. ಆಗ ನಾನು ಆತನಿಗೆ "ಸಿಟ್ಟು, ಹೋಗಿ ಬರೋ ಬುಲೆಟ್ಟು " ಎಂದು ನಗಿಸಿದೆ. ನಾನು ಇನ್ನೂ ಮುಂದುವರೆದು ಸಿಟ್ಟು ಒಂದು ಬುಲ್ಶಿಟ್ಟು" ಎಂದೆ. ಆದರೆ ಆ ಪದ ಅಲ್ಲಿ ಬರಬಾರದಿತ್ತು. ಇಷ್ಟೆ ನಡೆದಿದ್ದು. ದಯವಿಟ್ಟು ಕ್ಷಮಿಸಿ" ಎಂದು ಬರೆದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ "ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್‌ಶಿಟ್" ಎಂದಿದ್ದರು. ಬಳಿಕ ಈ ಬಗ್ಗೆ ಸಾಕಷ್ಟು ವಿರೋಧ ಶುರುವಾಗಿತ್ತು. ದೊಡ್ಡ ಧರ್ಮವೊಂದನ್ನು ಹಂಸಲೇಖ ಟೀಕಿಸಿದ್ದು ಸರಿಯಲ್ಲ. ಕ್ಷಮೆ ಕೇಳಲೇಬೇಕು ಎಂದು ಹಲವರು ಪಟ್ಟು ಹಿಡಿದಿದ್ದರು. ಇದೀಗ ಕ್ಷಮೆ ಕೋರಿದ್ದಾರೆ.


Click it and Unblock the Notifications











