"KGF ಎಫೆಕ್ಟ್, ಎಲ್ರೂ ದಾಡಿ ಬಿಡ್ತಿದ್ದಾರೆ", ಯಶ್ ಗಡ್ಡದ ಬಗ್ಗೆ ಕಾಲೆಳೆದ ನಾದಬ್ರಹ್ಮ
ಕನ್ನಡ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಸಕ ಹಂಸಲೇಖ. ತಮ್ಮ ಸಂಗೀತದಿಂದ ದಶಕಗಳ ಕಾಲ ಚಿತ್ರರಂಗವನ್ನು ಕುಣಿಸಿದ ನಾದಬ್ರಹ್ಮ. ಇತ್ತೀಚಿನ ವರ್ಷಗಳಲ್ಲಿ ಹಂಸಲೇಖ ತಮ್ಮ ಸಂಗೀತದಿಂದ ಮಾತ್ರವಲ್ಲದೇ ಹೇಳಿಕೆಗಳಿಂದಲೂ ಬಹಳ ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿರುವ ಹಂಸಲೇಖ ಬದಲಾದ ಸಿನಿಮಾ ಬಣ್ಣಗಳ ಬಗ್ಗೆ ವಿವರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಹಂಸಲೇಖ, "ಇಂಡಿಯಾದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು, ದೊಡ್ಡ ದೊಡ್ಡ ಸ್ಟಾರ್‌ಗಳು, ದೊಡ್ಡ ದೊಡ್ಡ ನಿರ್ದೇಶಕರು ಕೈಯಲ್ಲಿ ಮಚ್ಚುಗಳನ್ನು ಬಿಟ್ಟಿಲ್ಲ. ದೊಡ್ಡ ದೊಡ್ಡ ರಿವಾಲ್ವರ್‌ಗಳು, ಎಕೆ 47 ಗಳನ್ನು ಬಿಟ್ಟಿಲ್ಲ. ಹಿಂಸೆಗೆ ಏನೇನೋ ಬೇಕೋ ಎಲ್ಲಾ ರೀತಿಯ ವಿಚಿತ್ರವಾದ ಆಯುಧಗಳನ್ನು ಯಾರು ಬಿಟ್ಟಿಲ್ಲ. ಎಲ್ಲರೂ ಮಚ್ಚುಗಳು, ಗನ್ನುಗಳಲ್ಲೇ ಹೊಡೆಯುತ್ತಿದ್ದಾರೆ. 'ಅಮರಶಿಲ್ಪಿ ಜಕಣಾಚಾರಿ' ಚಿತ್ರ ಬರೋವರೆಗೂ ಇಡೀ ಕನ್ನಡ ನಾಡು ಈ ರೀತಿಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾಗಳನ್ನೇ ನೋಡುತ್ತಿತ್ತು. ಜೀವನದಲ್ಲಿ ಎಲ್ಲಿ ನೋಡಿದರೆ ಬಣ್ಣಗಳನ್ನು ನೋಡುತ್ತಿದ್ದ ಕಾಲದಲ್ಲಿ ಸಿನಿಮಾ ಥಿಯೇಟರ್‌ಗೆ ಹೋದ್ರೆ ಬರೀ ಕಪ್ಪು-ಬಿಳುಪು ಸಿನಿಮಾಗಳು ಇರ್ತಿದ್ದವು. ನಮಗೆಲ್ಲರಿಗೂ ಕಲರ್ ಬ್ಲೈಂಡ್ ಆಗಿತ್ತು. ಚಿತ್ರಗಳನ್ನ ನಾವು ಕಲರ್ ಬ್ಲೈಂಡ್‌ನಲ್ಲೇ ನೋಡ್ತಿದ್ದೆವು. ಸುಮಾರು ವರ್ಷಗಳ ಕಾಲ ಸಿನಿಮಾಗಳನ್ನು ಹಾಗೇ ನೋಡಿದ್ದೆವು. ಆಮೇಲೆ ಬಣ್ಣಗಳು ಬಂದಿದ್ದವು. ಆದರೆ ಬಣ್ಣದ ಸಿನಿಮಾಗಳು ಬಂದಾಗ ನಮಗೆ ಅವುಗಳು ಡಿಸ್ಟರ್ಬ್ ಮಾಡುತ್ತಿದ್ದವು.

ಬ್ಲ್ಯಾಕ್ ಅಂಡ್ ವೈಟ್ ಸಿನಿಮಾಗಳೇ ಚೆನ್ನಾಗಿತ್ತು. ಬ್ಲ್ಯಾಕ್ ಆಂಡ್ ವೈಟ್ ಅನ್ನೋದು ಸತ್ಯ ಮತ್ತು ಸುಳ್ಳುಗಳನ್ನು ಪ್ರತಿಬಿಂಬಿಸುತ್ತಿತ್ತು. ನಮಗೆ ನಾಟಕ ಕೂಡ ಅದನ್ನೇ ಹೇಳುತ್ತಿತ್ತು. ಸಿನಿಮಾ ಕೂಡ ಅದನ್ನೇ ಹೇಳ್ತಿತ್ತು. ಅದಕ್ಕೆ ಅಭ್ಯಾಸವಾಗಿದ್ದವು. ಕಲರ್ ಬಂದ ನಂತರ ಎಲ್ಲಾ ಬದಲಾಗಿತ್ತು. ಹೊರಗಡೆ ಬದುಕು ಕೂಡ ಹಾಗೆ ಇರ್ತಿತ್ತು. ಸಿನಿಮಾ ಕೂಡ ಹಾಗೆ ಇರ್ತಿತ್ತು. ಯಾವ ವ್ಯತ್ಯಾಸಗಳೂ ಇರ್ತಿರಲಿಲ್ಲ.
ಟೆಕ್ನಾಲಜಿ ಬೆಳೆದು ಏನೋನೋ ಆಗಿ ಈಗ ಸಿನಿಮಾಗಳಲ್ಲಿ ಕೂಡ ಹೆಚ್ಚು ಬೆಳಕೇ ಇರೋದಿಲ್ಲ. ಬರೀ ಕತ್ತಲು. ಕಣ್ಣು, ದಾಡಿ, ಮೂಗು, ಕಿವಿ, ಕೈ, ರಕ್ತ ಮಾತ್ರ ಕಾಣುತ್ತಿದೆ. ಯಾರಿಗೂ ಬಣ್ಣಗಳೇ ಇಷ್ಟ ಇಲ್ಲ. ಎಲ್ಲಾ ಕತ್ತಲಲ್ಲೇ ಮುಳುಗಿ ಹೋಗಿದೆ. ಯಾವ ಸಿನಿಮಾ ಬೇಕಾದ್ರೂ ನೋಡಿ. ಇತ್ತೀಚೆಗೆ ಒಂದು ಹಾಲಿವುಡ್ ಸಿನಿಮಾ ನೋಡಿದೆ.. ಇಡೀ ಸಿನಿಮಾ ಕತ್ತಲೆ. ಅಂದ್ರೆ ಮನುಷ್ಯ ಗೊತ್ತಿಲ್ಲದ ಹಾಗೆ ಕತ್ತಲ ಕಡೆ ಹೋಗ್ತಾ ಇದ್ದಾನೆ. ಕಲಾರಂಗಕ್ಕೆ ಕತ್ತಲು ಕವಿಯುತ್ತಿದೆ ಎನ್ನುವ ಅರ್ಥ ಇದು ಹಂಸಲೇಖ ವಿವರಿಸಿದ್ದಾರೆ.

ವೇದಿಕೆಯಲ್ಲಿ ಮಾತನಾಡುವ ವೇಳೆ ಜೊತೆಯಲ್ಲಿ ಕೂತಿದ್ದ ವ್ಯಕ್ತಿಯೊಬ್ಬರನ್ನು ನೋಡಿದ ಹಂಸಲೇಖ ನೀನು ಯಾಕೆ ದಾಡಿ ಬಿಟ್ಟಿದ್ದೀಯಪ್ಪ ಎಂದು ಕೇಳಿದ್ದಾರೆ. ಕೂಡಲೇ ಎಲ್ಲರೂ ನಕ್ಕಿದ್ದಾರೆ. ಬಳಿಕ ನಗುತ್ತಲೇ ಹಂಸಲೇಖ "ಕೆಜಿಎಫ್ ಎಫೆಕ್ಟ್. ಕನ್ನಡ ಸಿನಿಮಾದಲ್ಲಿ ಎಲ್ಲಿ ಬೇಕಾದ್ರೂ ನೋಡಿ, ಕ್ಯಾಮೆರಾಮೆನ್ ಕೂಡ ದಾಡಿ ಬಿಟ್ಟಿರ್ತಾನೆ. ಡೈರೆಕ್ಟರ್, ಕೊರಿಯೋಗ್ರಾಫರ್, ಡೈರೆಕ್ಟರ್ ಕೊನೆಗೆ ಎಲ್ಲಾ ಗೊತ್ತಾಗಿ ಪ್ರೊಡ್ಯೂಸರ್ ಕೂಡ ದಾಡಿ ಬಿಟ್ಟಿರ್ತಾನೆ. ಎಡಿಟರ್ ಕೂಡ" ಎಂದು ನಕ್ಕಿದ್ದಾರೆ.
"ಮೊದಲೆಲ್ಲಾ ಮನೆಯಲ್ಲಿ ಬೈಯುತ್ತಿದ್ದರು, ಏನಾದ್ರೂ ತಪ್ಪು ಮಾಡಿದ್ರೆ, 'ಏನಾಗಿದ್ಯೋ ನಿಂಗೆ ದಾಡಿ' ಅಂತಾ ಬೈಯ್ತಾ ಇದ್ರು. ಆದರೆ, ಈಗ ಇಡೀ ಇಂಡಸ್ಟ್ರಿಗೆ ಹೇಳಬೇಕು ಏನಾಗಿದೆ ದಾಡಿ ಅಂತ. ದಾಡಿಯೇ ಫ್ಯಾಶನ್ ಆಗಿದೆ ಎಂದಿದ್ದಾರೆ. ನನಗೆ ಈ ಸಿನಿಮಾದ ಹೀರೋ ಹೆಸರು ಅಜಿತ್ ಅಂತಾ ಗೊತ್ತಿತ್ತು. ಯಾವಾಗ ಯಶ್‌ಜಿತ್ ಆಯ್ತು ಅಂತಾ ಗೊತ್ತಿಲ್ಲ. ಯಶ್ ಸ್ಟಾರ್ ಆದ ಮೇಲೆ ಹೆಸರು ಬದಲಿಸಿಕೊಂಡಿರ್ಬೇಕು ಅಂತಾ ಹಂಸಲೇಖ ಕಿಚಾಯಿಸಿದ್ದಾರೆ.
ನಿರ್ದೇಶಕನಿಗೆ ಕಮಾಂಡ್ ಇರಬೇಕೆಂದರೆ, ಆತನ ಸಿನಿಮಾದ ಕಥೆ ಗಟ್ಟಿಯಾಗಿರಬೇಕು. ಗಟ್ಟಿಯಾದ ಕಥೆಗಳನ್ನ ಯಾವ ನಿರ್ದೇಶಕ ಇಟ್ಟುಕೊಂಡಿರ್ತಾನೋ, ಅವನಿಗೆ ತನ್ನ ಕೆಲಸದ ಮೇಲೆ ಕಮಾಂಡ್ ಇರುತ್ತೆ. ಯಾವ ಸೂಪರ್ ಸ್ಟಾರ್‌ನ ಹಾಕಿಕೊಂಡ್ರೂ ಆ ಕಥೆಯೇ ಅವನನ್ನು ನಿರ್ದೇಶಿಸುತ್ತೆ. ಅದೇ ಕಾರಣಕ್ಕಾಗಿ ಹಾಲಿವುಡ್‌ನಲ್ಲಿ ಒಂದು ದೊಡ್ಡ ಬೋರ್ಡ್ ಹಾಕಿದ್ದಾರೆ. ಅದರಲ್ಲಿ 'ಡೋಂಟ್ ಟ್ರಸ್ಟ್ ದ ಸ್ಟಾರ್ಸ್, ಟ್ರಸ್ಟ್ ದ ಟೇಲ್ ಅಂತಾ'. ಅಂದ್ರೆ, ಕಥೆಯನ್ನು ನಂಬಿ, ಸೂಪರ್ ಸ್ಟಾರ್‌ಗಳನ್ನು ನಂಬಬೇಡಿ, ಕಥೆಗಳನ್ನು ನಂಬಿ ಮುಂದುವರಿ ಎಂದು ಹೊಸ ನಿರ್ದೇಶಕರಿಗೆ ನಾದಬ್ರಹ್ಮ ಸಲಹೆ ನೀಡಿದ್ದಾರೆ. ಎರಡು ವಾರಗಳ ಹಿಂದೆ ಹಂಸಲೇಖ ಮಾತನಾಡಿದ್ದ ಮಾತುಗಳು ಈಗ ವೈರಲ್ ಆಗುತ್ತಿದೆ.


Click it and Unblock the Notifications











