ಕಣ್ಣೇ ಹೋಗುತ್ತಿತ್ತು ; ಗೋವಾ ಗಲಾಟೆಯ ಬಗ್ಗೆ ಹೇಳಿದ್ದೇನು ನಿರ್ಮಾಪಕ ಎ. ಗಣೇಶ್..?
ಕನ್ನಡದ ಖ್ಯಾತ ನಿರ್ಮಾಪಕರೆಲ್ಲ ಮೊನ್ನೆ ಗೋವಾದಲ್ಲಿ ಮಾಡಿದ ರಂಪ-ರಾಮಾಯಣ ನಿಮಗೆ ಗೊತ್ತೇ ಇರಬೇಕು. ಯಾಕೆಂದರೆ.. ಕನ್ನಡ ಚಿತ್ರರಂಗದ ಕಡು ಕಷ್ಟಕರ ಕಥೆಯನ್ನ ಆಲಿಸುವ ಬದಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಎನ್.ಎಂ.ಸುರೇಶ್ ತಮ್ಮ ಪಟಾಲಂ ಸಮೇತ ಗೋವಾಕ್ಕೆ ಹೋದ ವಿಚಾರ ಅನೇಕರನ್ನ ಕೆರಳಿಸಿತ್ತು. ಟೀಕೆ ಟಿಪ್ಪಣಿ ವ್ಯಕ್ತವಾಗಿತ್ತು. ಟಿವಿ ಮಾಧ್ಯಮಗಳಲ್ಲಿ ಕೂಡ ಕನ್ನಡ ನಿರ್ಮಾಪಕರ ಹೊಡಿ-ಬಡಿ ಆಟದ ಇಂಚಿಂಚೂ ಮಾಹಿತಿ ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಪ್ರಸಾರವಾಗಿತ್ತು. ಸದ್ಯದ ಸಮಾಚಾರ ಏನೆಂದರೆ ತಮ್ಮ ಮೇಲೆ ಹಲ್ಲೆ ನಡೆದಿದ್ದು ಯಾಕೆ..? ಹಲ್ಲೆ ನಡೆದಿದ್ದು ಹೇಗೆ..? ಅನ್ನುವ ವಿವರವನ್ನ ಹಲ್ಲೆಗೊಳಗಾದ ನಿರ್ಮಾಪಕ ಎ ಗಣೇಶ್ ಹೇಳಿದ್ದಾರೆ.
ಹೌದು, ಗೋವಾದಿಂದ ಮರಳಿ ಬಂದ ಎ ಗಣೇಶ್ ಗೋವಾಗೆ ನಾವೆಲ್ಲ ಹೋಗಿದ್ದು ಮೋಜು ಮಸ್ತಿ ಮಾಡಲು ಅಲ್ಲ ಬದಲಿಗೆ ಸಿನಿ 90 ಕಾರ್ಯಕ್ರಮದ ರೂಪರೇಷೆಯನ್ನು ಸಿದ್ದ ಪಡಿಸಲು ಹೋಗಿದ್ವಿ ಎಂದಿದ್ದಾರೆ. ಇನ್ನೂ ಈ ಗಂಭೀರ ಚರ್ಚೆಯ ಸಮಯದಲ್ಲಿ ಸತೀಶ್ ಆರ್ಯ ಹಾಗೂ ರಥಾವರ ಮಂಜು ನಡುವೆ ಗಲಾಟೆ ಶುರುವಾಯ್ತು ಹೀಗಾಗಿ ನಾನು ಇಬ್ಬರ ಜಗಳ ಬಿಡಿಸಲು ಮುಂದಾದೆ ಎಂದಿರುವ ಎ ಗಣೇಶ್, ಸಿನಿಮಾ ಶೈಲಿಯಲ್ಲಿಯೇ ಫೋರ್ಕ್ ಸ್ಪೂನ್ ಯಿಂದ ಸತೀಶ್ ನನ್ನ ಕಣ್ಣಿನ ಭಾಗದ ಕಡೆ ಚುಚ್ಚಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಚೂರು ಆಚೀಚೆ ಆಗಿದ್ದರು ಕೂಡ ಕಣ್ಣೇ ಹೋಗ್ತಿತ್ತು ಎಂದಿದ್ದಾರೆ.

ಇನ್ನೂ ಕಣ್ಣಿನ ಭಾಗದಲ್ಲಿ ರಕ್ತ ಸುರಿಯುತ್ತಿದ್ದರೂ ಎಣ್ಣೆಯ ಅಮಲಿನಲ್ಲಿ ಡ್ಯಾನ್ಸ್ ಮಾಡಿ ವಿಕೃತಿಯನ್ನೂ ಸತೀಶ್ ಮೆರೆದಿದ್ದಾರೆ ಎಂದಿರುವ ಎ ಗಣೇಶ್, ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಾಸ್ಸಾದೆ ಎಂದಿದ್ದಾರೆ. ಇಲ್ಲಿ ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತಗೊಂಡೆ ಎಂದು ಹೇಳಿದ್ದಾರೆ. ರಥಾವರ ಮಂಜುನಾಥ್ ಗೆ ಗಂಭೀರ ಗಾಯ ಆಗಿದೆ ಎಂದಿರುವ ಗಣೇಶ್ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಎನ್.ಎಂ.ಸುರೇಶ್ ಅವರ ತುಟಿಗೂ ಗಾಯ ಆಗಿದೆ ಎಂದಿದ್ದಾರೆ
ಅಂದ್ಹಾಗೇ ಗೋವಾದ ಈ ಜಾಲಿ ಟ್ರಿಪ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ದುಡ್ಡು ಬಳಿಸಿದ್ದು ಎಷ್ಟು ಸರಿ ಅನ್ನುವ ಪ್ರಶ್ನೆ ಎದ್ದಿತ್ತು. ಇದಕ್ಕೆ ಉತ್ತರವನ್ನೂ ಕೂಡ ನೀಡಿರುವ ಎ ಗಣೇಶ್ ಗೋವಾ ಕಾರ್ಯಕ್ರಮದ ಸಂಪೂರ್ಣ ಖರ್ಚು-ವೆಚ್ಚ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಎನ್.ಎಂ.ಸುರೇಶ್ ಅವ್ರದ್ದೇ ಆಗಿತ್ತು ಎಂದಿದ್ದಾರೆ.


Click it and Unblock the Notifications










