''ನನ್ನ ಕನಸು ಈಡೇರುವ ತನಕ 'ಕುರುಕ್ಷೇತ್ರ' ತೆರೆ ಮೇಲೆ ಬರಲ್ಲ'' ಎಂದ ಮುನಿರತ್ನ!
Recommended Video

'ದಿ ವಿಲನ್' ಸಿನಿಮಾದ ರಿಲೀಸ್ ಡೇಟ್ ನಾಳೆ ಅನೌನ್ಸ್ ಆಗುತ್ತಿದೆ. 'ಕೆ ಜಿ ಎಫ್' ಚಿತ್ರದ ಬಿಡುಗಡೆಯ ದಿನಾಂಕ ಸಪ್ಟೆಂಬರ್ 17ಕ್ಕೆ ನಿಗದಿ ಆಗುತ್ತದೆ. ಆದರೆ, 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಆಗುವುದು ಯಾವಾಗ?.
ಹೌದು, ಕನ್ನಡ ಸಿನಿಮಾ ಪ್ರೇಮಿಗಳು ಈ ವರ್ಷ ನೋಡಲೇಬೇಕು ಎಂದು ಕಾಯುತ್ತಿರುವ ಚಿತ್ರಗಳು ಪೈಕಿ 'ಕುರುಕ್ಷೇತ್ರ' ಪ್ರಮುಖವಾಗಿದೆ. ಆದರೆ ಈ ಸಿನಿಮಾ ದರ್ಶನ್ ಅಭಿಮಾಗಳನ್ನು ಸತಾಯಿಸುತ್ತಿದೆ. ಆಗ ಬರುತ್ತೆ.. ಈಗ ಬರುತ್ತೆ.. ಎಂದು ಫ್ಯಾನ್ಸ್ ಕಾದು ಕಾದು ಬೇಸರಗೊಂಡಿದ್ದಾರೆ.
ಒಂದು ಕಡೆ ರಿಲೀಸ್ ಮುಂದಕ್ಕೆ ಹೋಗುತ್ತಿದೆ. ಅದರ ಜೊತೆಗೆ ಚಿತ್ರದ ಮೇಲೆ ಕೆಲ ಗಾಸಿಪ್ ಗಳು ಬೇರೆ ಇವೆ. ದರ್ಶನ್ ಹಾಗೂ ನಿಖಿಲ್ ಕುಮಾರ್ ಅಸಮಾಧಾನ, ನಿರ್ದೇಶಕ ನಾಗಣ್ಣ ಬೇಸರ ಹೀಗೆ ಸಾಕಷ್ಟು ಸುದ್ದಿಗಳು ಚಿತ್ರದ ಬಗ್ಗೆ ಇವೆ. ಇದೀಗ ಈ ಎಲ್ಲ ಗಾಸಿಪ್ ಗಳಿಗೆ ನಿರ್ಮಾಪಕ ಮುನಿರತ್ನ ಸ್ಪಷ್ಟ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಸಿನಿಮಾ ತಡ ಆಗಲು ಏನು ಕಾರಣ?
''ಕುರುಕ್ಷೇತ್ರ' ಒಂದು ಪೌರಾಣಿಕ ಸಿನಿಮಾ. ಈ ಚಿತ್ರದಲ್ಲಿ ಸಿಜಿ (Computer Generated) ವರ್ಕ್ ತುಂಬ ಇದೆ. ಅದು ನಾನು ಅಂದುಕೊಂಡ ಹಾಗೆ ಬರುತ್ತಿಲ್ಲ. ಅದಕ್ಕೆ ಪದೇ ಪದೇ ರೀ ವರ್ಕ್ ಮಾಡುತ್ತಿದ್ದೇವೆ. ಒಮ್ಮೆ ಮಾಡಿ ಮುಗಿಸಿದ್ದ ಕೆಲಸ ನಮಗೆ ಇಷ್ಟ ಆಗಲಿಲ್ಲ. ಇದು ಸಿನಿಮಾದ ಬಿಡುಗಡೆ ತಡ ಆಗಲು ದೊಡ್ಡ ಕಾರಣ'' ಎಂದು ಮುನಿರತ್ನ ಹೇಳಿಕೊಂಡಿದ್ದಾರೆ.

ಕಥೆ ಪಾತ್ರದ ಅವಧಿಯನ್ನು ನಿರ್ಧಾರ ಮಾಡುತ್ತದೆ
ದರ್ಶನ್ ಹಾಗೂ ನಿಖಿಲ್ ಕುಮಾರ್ ಪಾತ್ರದ ಅವಧಿಯಿಂದ ಮನಸ್ತಾಪ ಬಂದಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ, '' ಈ ಚಿತ್ರದಲ್ಲಿ ಪಾತ್ರದ ಅವಧಿ ಬಗ್ಗೆ ಯಾರಿಗೂ ಮನಸ್ತಾಪವಿಲ್ಲ. ಯಾರ ಪಾತ್ರ ಎಷ್ಟಿರಬೇಕು ಎಂಬದನ್ನು ಕಥೆ ನಿರ್ಧಾರ ಮಾಡುತ್ತದೆ. 'ಕುರುಕ್ಷೇತ್ರ' ಚಿತ್ರದಲ್ಲಿ ಎಲ್ಲರಿಗೂ ಮಹತ್ವ ಇದೆ.'' ಎಂದಿದ್ದಾರೆ.

ನಾಗಣ್ಣ ಅವರನ್ನು ದೂರ ಮಾಡಿಲ್ಲ
''ನಿರ್ದೇಶಕ ನಾಗಣ್ಣ ಅವರನ್ನು ನಾವು ದೂರ ಮಾಡಿಲ್ಲ. ಇದು ದೊಡ್ಡ ಸಿನಿಮಾ. ದೊಡ್ಡ ಚಿತ್ರದಲ್ಲಿ ಎಲ್ಲರೂ ಕೆಲಸ ಮಾಡುತ್ತಾರೆ. ಅದೇ ರೀತಿ ನಿರ್ದೇಶನ ವಿಭಾಗದಲ್ಲಿ ಕೂಡ ಹಾಗೆ ಆಗಿದೆ. 'ಕುರುಕ್ಷೇತ್ರ' ನಾಗಣ್ಣ ನಿರ್ದೇಶನದ ಚಿತ್ರ. ಅವರ ಕೆಲಸ ಅವರು ಮಾಡಿದ್ದಾರೆ.'' - ಮುನಿರತ್ನ, ನಿರ್ಮಾಪಕ.

ಡಬ್ಬಿಂಗ್ ಮಾಡುವುದಕ್ಕೆ ನಿಖಿಲ್ ರೆಡಿ
''ಡಬ್ಬಿಂಗ್ ಮಾಡುವುದಕ್ಕೆ ನಿಖಿಲ್ ಕುಮಾರ್ ಬರುತ್ತಿಲ್ಲ ಎಂಬ ಸುದ್ದಿಯಲ್ಲಿ ಯಾವ ಸತ್ಯವೂ ಇಲ್ಲ. ಡಬ್ಬಿಂಗ್ ಮಾಡುವುದಕ್ಕೆ ನಿಖಿಲ್ ರೆಡಿ ಇದ್ದಾರೆ. ಈಗಾಗಲೇ ಬಹುತೇಕ ಮುಗಿಸಿದ್ದೇವೆ. ದರ್ಶನ್ ಹಾಗೂ ನಿಖಿಲ್ ಕುಮಾರ್ ನಡುವೆ ಮನಸ್ತಾಪ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. - ಮುನಿರತ್ನ, ನಿರ್ಮಾಪಕ.

ನನ್ನ ಕನಸು ಈಡೇರುವ ತನಕ ಚಿತ್ರ ತೆರೆಗೆ ಬರಲ್ಲ
''ಕೋಟಿ ಕೋಟಿ ಹಾಕಿ ಸಿನಿಮಾ ಮಾಡಿರುವುದು ಡಬ್ಬಾದಲ್ಲಿಟ್ಟು ಪೂಜೆ ಮಾಡುವುದಕ್ಕೆ ಅಲ್ಲ. ಜನಕ್ಕೆ ಸಿನಿಮಾವನ್ನು ತೋರಿಸಬೇಕು. ಅದನ್ನು ಯಾವ ಕ್ವಾಲಿಟಿಯಲ್ಲಿ ತೋರಿಸಬೇಕೋ ಎನ್ನುವ ಕನಸು ನನಗಿದೆ. ಅದು ಈಡೇರುವ ತನಕ 'ಕುರುಕ್ಷೇತ್ರ' ತೆರೆ ಮೇಲೆ ಬರಲ್ಲ.'' - ಮುನಿರತ್ನ, ನಿರ್ಮಾಪಕ.


Click it and Unblock the Notifications











