ಅವನು ಹೀರೋ ಆಗಿ ಬಂದ, ಇಂಡಸ್ಟ್ರಿಯಲ್ಲಿ ಉದ್ಧಾರ ಆಗಲಿಲ್ಲ- ಚೇತನ್ ಅಹಿಂಸಾ ಜನ್ಮ ಜಾಲಾಡಿದ ಸಾರಾ ಗೋವಿಂದು...!
ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂ. ಆರೇಳು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಮೀಟೂ ಅಭಿಯಾನದಡಿ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು. ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಇತ್ಯಾದಿ ಇತ್ಯಾದಿ ಆರೋಪಗಳೆಲ್ಲವೂ ಬಣ್ಣದ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು.

ಆದರೆ ಆ ನಂತರ ಈ ಅಭಿಯಾನ ಕಹಳತಪ್ಪಿದ ಎಲ್ಲ ಲಕ್ಷಣಗಳೂ ಕೂಡ ಕಂಡು ಬಂದಿದ್ದವು. ಬೇರೆ ಬೇರೆ ಭಾಷೆಯಲ್ಲಿ ಈ ಅಭಿಯಾನವನ್ನೇ ಕೆಲವರು ಅಸ್ತ್ರವನ್ನಾಗಿಸಿಕೊಂಡು ಪ್ರಚಾರವನ್ನು ಪಡೆದರು. ಇದರ ನಡುವೆ ಸ್ಯಾಂಡಲ್‌ವುಡ್ಡಿಗೂ ಈ ಮೀಟೂ ಅಮರಿಕೊಂಡಿತ್ತು. ವಾದ ವಿವಾದದ ಅಲೆಯೆಲ್ಲ ಎದ್ದು ಆ ಕಾಲಕ್ಕೆ ಕನ್ನಡ ಚಿತ್ರರಂಗದ ಮಾನ ಮರ್ಯಾದೆಯನ್ನೂ ಕೂಡ ಹರಾಜು ಹಾಕಿತ್ತು.
ಈಗ ಹೇಮಾ ಆಯೋಗದ ವರಿಯ ಬೆನ್ನಲ್ಲಿಯೇ ಮತ್ತೊಮ್ಮೆ ಮೀಟೂ ಕಿಡಿ ಹೊತ್ತಿಕೊಂಡಿದೆ. ಮಲಯಾಳಂ ಚಿತ್ರರಂಗಕ್ಕೆ ಅಂಟಿಕೊಂಡ ಬೆಂಕಿ ಕನ್ನಡ ಚಿತ್ರರಂಗದತ್ತ ಕೂಡ ಹಬ್ಬುತ್ತಿದೆ. ಆ ಕಾಲದಲ್ಲಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ (ಫೈರ್) ಮೂಲಕ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ಖಂಡಿಸಿ, ಧ್ವನಿ ಎತ್ತಿದ್ದ ಚೇತನ್ ಅಹಿಂಸಾ ಈಗ ಇನ್ನೊಮ್ಮೆ ತಮ್ಮ ಧ್ವನಿಯನ್ನೆತ್ತಿದ್ದಾರೆ. ಮಲಯಾಳಂನಂತೆ ಇಲ್ಲಿಯೂ ಕೂಡ ಸಮಿತಿ ರಚನೆಯಾಗಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಶ್ರುತಿ ಹರಿಹರನ್, ನೀತು ಅವರ ಜೊತೆ ತೆರಳಿ ಮನವಿ ಪತ್ರವನ್ನೂ ಸಲ್ಲಿಸಿ ಬಂದಿದ್ದಾರೆ. ಇವರ ಈ ಮನವಿಗೆ ಎಷ್ಟರ ಮಟ್ಟಿಗೆ ಮನ್ನಣೆ ಸಿಗುತ್ತೆ ಅನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯಕ್ಕೆ ಪುರಾತನ ಕಾಲದ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನವನ್ನು ಹಿಂದೆಯೆಲ್ಲ ಅಲಂಕರಿಸಿರುವ ಸಾ.ರಾ.ಗೋವಿಂದು ಚೇತನ್ ಅಹಿಂಸಾ ವಿರುದ್ಧ ಹರಿಹಾಯ್ದಿದ್ದಾರೆ.

ಹೌದು, ಪತ್ರಕರ್ತ ಕಂ ನಟ ಯತಿರಾಜ್ ನಿರ್ದೇಶನದ ಸಂಜು ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಶ್ರೀಯುತ ಸಾ.ರಾ.ಗೋವಿಂದು, ಅದೆಲ್ಲಿಯೋ ಕೇರಳದಲ್ಲಿ ಆಗಿದೆ ಎಂದರೆ ಇಲ್ಲಿಯೂ ಆಗಿದೆ ಎಂದು ಅರ್ಥಾನಾ ಎಂದಿದ್ದಾರೆ. ಮಾಡೋಕೆ ಕೆಲಸ ಇಲ್ಲ, ದೊಡ್ಡ ಹೀರೋ ಆಗೋದಕ್ಕೆ ಇದೆಲ್ಲ ಮಾಡ್ತಿದ್ದಾನೆ ಎಂದಿರುವ ಸಾರಾ ಗೋವಿಂದು ಎಲ್ಲ ಹಂಚ್ಕೊಂಡಾಯ್ತು ಈಗ ಇದನ್ನು ಹಂಚ್ಕೊಂಡಿದ್ದಾನೆ ಎಂದು ಹೇಳಿದ್ದಾರೆ. ನಮ್ಮ ಕನ್ನಡ ಚಿತ್ರರಂಗಕ್ಕೆ 90 ವರ್ಷ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಕರಣ ನಡೆದಿದ್ದರೆ ಇಷ್ಟು ವರ್ಷ ಚಿತ್ರರಂಗ ಇರ್ತಾನೇ ಇರಲಿಲ್ಲ ಎಂದು ಕೂಡ ಹೇಳಿದ್ದಾರೆ.
ಏನೋ ಕಿತ್ತಾಕುವಂತೆ ಥರ ಮಾತಾಡ್ತಾ ಅವ್ನೇ ಸಮಯ ಬಂದಾಗ ನಾವೂ ಮಾತಾಡ್ತೀವಿ ಎಂದಿರುವ ಸಾರಾ ಗೋವಿಂದು, ಈಗೀಗ ಸಿನಿಮಾ ಮಾಡೋಕೆ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ. ಸಂಭಾವನೆ ಕಡಿಮೆ ನೀಡಿದ್ದಾರೆಂದೋ ಅಥವಾ ಮನಸ್ತಾಪದಿಂದಾಗಿಯೋ ಯಾರಾದರೂ ಹೀರೋಯಿನ್ ಬಂದು ನನಗೆ ಹಂಗೆ ಮಾಡಿದಾರೆ, ಹಿಂಗೆ ಮಾಡಿದಾರೆ ಅಂತ ಹೇಳಿದರೆ ಗತಿ ಏನು ಎನ್ನುವ ಪ್ರಶ್ನೆ ಮಾಡಿದ್ದಾರೆ. ಪಿಕ್ಚರ್ ಹೇಗೆ ಮಾಡೋದು ಎಂದಿದ್ದಾರೆ.

ಮುಂದುವರೆದು ಕನ್ನಡ ಚಿತ್ರರಂಗವನ್ನು ತುಂಬಾ ಜನ ಮಹಾನ್ ಪುರುಷರು ಆಳಿ ಹೋಗಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಷ್ ಹೀಗೆ ಎಂತೆಂಥವರು ಆಳಿ ಹೋಗಿದ್ಧಾರೆ. ಹೀಗೆಲ್ಲ ಇದ್ದಿದ್ದರೆ ಚಿತ್ರರಂಗ ಇಷ್ಟು ಬೆಳೆಯುತ್ತಿತ್ತಾ ಎಂದಿರುವ ಸಾರಾ ಗೋವಿಂದು ಒಬ್ಬರು ನಟಿ ಬಂದು ಇದನ್ನು ದೊಡ್ಡ ವಿಚಾರವನ್ನಾಗಿ ಮಾಡ್ತಿದ್ದಾರೆ ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡ್ತೇವೆ ಎಂದು ಹೇಳಿದ್ದಾರೆ. ಚೇತನ್‌ದು ಚಿಕ್ಕ ಚರಿತ್ರೆಯನ್ನೂ ಕೇಳಿ ಹೇಳ್ತೀನಿ ಎಂದು ಹೇಳಿದ್ದಾರೆ.
ಈಗ ಮೀಟೂ, ಫೈರ್ ಅಂತ ಯಾರು ತಲೆ ಮೇಲೆ ಇಟ್ಕೊಂಡು ಓಡಾಡ್ತಾ ಇದಾನೋ, ಆ ಚೇತನ್ ಅನ್ನೋ ನಟಂದು ಚೂರು ಚರಿತ್ರೆ ಹೇಳ್ತೀನಿ ಕೇಳಿ ಎಂದಿರುವ ಸಾರಾ ಗೋವಿಂದು, ಅವ್ನು ಕಲಾವಿದನಾಗಿ ಬಂದ. ಇಂಡಸ್ಟ್ರಿನಲ್ಲಿ ಉದ್ಧಾರ ಆಗ್ಲಿಲ್ಲ. ಏನೋ ಮಾಡಬೇಕು ಅಂತ ಹೊರಟಿದಾನೆ ಎಂದಿರುವ ಸಾರಾ ಗೋವಿಂದು ಅದೊಂದು ದಿನ ಎಂ.ಜಿ.ರೋಡ್‌ನಲ್ಲಿ ನಡುರಾತ್ರಿ 2 ಘಂಟೆ ಸುಮಾರಿಗೆ ನಾಲ್ಕೈದು ಜನ ಹುಡುಗಿಯರು ಕುಡಿಯುತ್ತಾ ಕುಂತಿರುತ್ತಾರೆ, ಆಗ ಅಲ್ಲಿ ಪೊಲೀಸ್‌ನವರು ಬಂದು ಆ ಹೆಣ್ಣು ಮಕ್ಕಳನ್ನ ಕಳಿಸೋಕೆ ನೋಡ್ತಾರೆ. ಆದ್ರೆ, ಆ ಹೆಣ್ಣು ಮಕ್ಳು ತುಂಬಾ ಗಲಾಟೆ ಮಾಡಿದ್ರಿಂದ ಅವ್ರನ್ನ ಸ್ಟೇಷನ್‌ಗೆ ಕರ್ಕೊಂಡು ಹೋಗ್ತಾರೆ. ಆಮೇಲೆ ಈ ಚೇತನ್ ಅನ್ನೋ ವ್ಯಕ್ತಿ ಅವ್ರನ್ನ ಬಿಡಿಸಿ ಕರೆದುಕೊಂಡು ಹೋಗ್ತಾನೆ. ಅಷ್ಟೇ ಅಲ್ಲ ಆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಸ್ಪೆಂಡ್ ಆಗೋವರೆಗೂ ಈ ವ್ಯಕ್ತಿ ಬಿಡ್ಲಿಲ್ಲ ಎಂದು ಹೇಳಿದ್ಧಾರೆ. ಇದು ಇವನ ಹಿನ್ನೆಲೆ ಇವನು ಮೀಟೂ ಬಗ್ಗೆ ಮಾತಾಡ್ತಾನೇ ಎಂದು ಕಿಡಿ ಕಾರಿದ್ದಾರೆ. ಕೊನೆಗೆ ಆ ಸಬ್ ಇನ್ಸ್‌ಪೆಕ್ಟರ್‌ನಾ ಅದೇ ಸ್ಥಾನಕ್ಕೆ ನಾನು ಕರೆದುಕೊಂಡು ಹೋಗಿ ಕೂರಿಸಿದೆ ಎಂದು ಹೇಳಿದ್ದಾರೆ ಸಾರಾ ಗೋವಿಂದು. ಸಾರಾ ಗೋವಿಂದು ಅವರ ಈ ಮಾತುಗಳಿಗೆ ಚೇತನ್ ಯಾವ ರೀತಿಯ ಉತ್ತರ ಕೊಡ್ತಾರೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











