"ಮಾರುತಿ ಕಾರಲ್ಲಿ ಹೋಗೋನಿಗೆ ಒಂದು, ಲ್ಯಾಂಬೊರ್ಗಿನಿಯಲ್ಲಿ ಹೋಗೋನಿಗೆ ಒಂದು ನ್ಯಾಯ ಅಲ್ಲ"; ಉಮಾಪತಿ
ಸ್ಯಾಂಡಲ್‌ವುಡ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಆಡೋ ಮಾತುಗಳು ಮುಟ್ಟಿ ನೋಡಿಕೊಳ್ಳುವ ಹಾಗಿರುತ್ತೆ. ಈ ಹಿಂದೆ ದರ್ಶನ್ " ಲೇ ತಗಡೆ.." ಅನ್ನೋ ಪದ ಬಳಸಿದಾಗಲೂ ತುಂಬಾ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿದ್ದರು. ಈಗಲೂ ಅದೇ ತಾಳ್ಮೆಯಿಂದ ಈ ಪ್ರಕರಣದ ಬಗ್ಗೆ ಮಾತಾಡಿದ್ದಾರೆ.
ದರ್ಶನ್‌ಗಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ 'ರಾಬರ್ಟ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಗಾಢವಾಗಿ ಬೆಳೆದಿತ್ತು. ಆದರೆ, ಒಂದು ವಿಷಯಕ್ಕೆ ಇಬ್ಬರ ನಡುವೆ ಮನ:ಸ್ತಾಪ ಬೆಳೆದಿತ್ತು. ಆ ವೇಳೆ ಕೂಡ ಉಮಾಪತಿ ಗೌಡ ಅಷ್ಟೇ ತಾಳ್ಮೆಯಿಂದ ದರ್ಶನ್‌ರನ್ನು ಎದುರಿಸಿದ್ದರು. ದರ್ಶನ್ ಬಂಧನದ ಬಳಿಕ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಸ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಪೋಸ್ಟ್‌ಗಳನ್ನು ಶೇರ್ ಮಾಡಿದ್ದರು.

ಆ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ ಉಮಾಪತಿ ಶ್ರೀನಿವಾಸ್ ಗೌಡ ಪವರ್ ಟಿವಿಗೆ ಸಂದರ್ಶನ ನೀಡಿದ್ದರು. ಇದರಲ್ಲಿ ಎಲ್ಲಿಯೂ ದರ್ಶನ್ ಹೆಸರನ್ನು ಎತ್ತದೆ, ಪ್ರತಿಕ್ರಿಯೆ ನೀಡಿದ್ದಾರೆ. ಆ ಸಂದರ್ಶನದ ಪ್ರಮುಖ ಅಂಶಗಳು ಹೀಗಿವೆ.
ನಮ್ಮ ಬೆರಳು ನಮಗೆ ಚುಚ್ಚಿದರೂ ನೋವಾಗುತ್ತೆ
ದರ್ಶನ್ ಪ್ರಕರಣದ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬುದ್ಧಿವಂತಿಕೆಯ ಉತ್ತರ ಕೊಟ್ಟಿದ್ದಾರೆ. ತಮ್ಮ ವಿರುದ್ಧ ದರ್ಶನ್ ಮಾತಾಡಿದ ಸಂದರ್ಭವನ್ನು ನೆನಪಿಸಿಕೊಂಡು ಉತ್ತರ ಕೊಟ್ಟಿದ್ದಾರೆ. "ಪಬ್ಲಿಕ್ ಲೈಫ್‌ಗೆ ಬಂದ್ಮೇಲೆ ಕಾಲು ಎಳೆಯೋರು ಇರಬೇಕು. ಬೆನ್ನು ತಟ್ಟೋರು ಇರಬೇಕು. ನಾವು ಏನು ಅಂದುಕೊಳ್ಳುತ್ತೇವೆ. ನಮ್ಮ ಬೆರಳು ಇನ್ನೊಬ್ಬರ ಕಣ್ಣಿಗೆ ಚುಚ್ಚಿದರೆ ನೋವಾಗುತ್ತೆ. ಹಾಗೇ ನಮ್ಮ ಬೆರಳು ನಮ್ಮ ಕಣ್ಣಿಗೆ ಚುಚ್ಚಿದರೂ ನಮಗೆ ನೋವಾಗುತ್ತದೆ ಅಷ್ಟೇ ನಾನು ಹೇಳೋದು" ಎಂದು ಹೇಳಿದ್ದಾರೆ.
ಹಾಗೇ ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ನಡೆದುಕೊಂಡ ರೀತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಈಗ ಕಾನೂನಿ ಚೌಕಟ್ಟಿನಲ್ಲಿ ಏನಾಗಬೇಕೋ ಅದು ಆಗುತ್ತಿದೆ. ನಿಜವಾಗಲೂ ರಾಜ್ಯ ಸರ್ಕಾರಕ್ಕೆ ಹ್ಯಾಂಡ್ಸ್ ಹಾಫ್ ಹೇಳಬೇಕು. ಮುಂಚೆಯಿಂದಾನೂ ಅಷ್ಟೇ ಪೊಲೀಸ್ ಇಲಾಖೆ ಬಗ್ಗೆ ತುಂಬಾನೇ ಗೌರವ ಇಟ್ಟುಕೊಂಡವನು. ನಮ್ಮ ತಂದೆಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಅಂತ ಬಹಳ ಆಸೆಯಿತ್ತು. ಕಾರಣಾಂತರಗಳಿಂದ ಆಗಲಿಲ್ಲ. ಈಗ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಿಗೆ ಗೌರವ ಬಂದಿದೆ. ಭಯ ಭಕ್ತಿ ಬಂದಿದೆ." ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.

ಹಾಗೇ ಕಾನೂನು ಎಲ್ಲರಿಗೂ ಒಂದೇನೆ. ಅಂಬೇಡ್ಕರ್ ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡೇ ಸಂವಿಧಾನ ರಚನೆ ಮಾಡಿದ್ದರು. ಈ ಕಾರಣಕ್ಕೆ ಎಲ್ಲರಿಗೂ ಒಂದೇ ನ್ಯಾಯ ಎಂದಿದ್ದಾರೆ. "ಒಂದು ತಲೆಯಲ್ಲಿ ಇಟ್ಕೊಳ್ಳಿ, ಮಾರುತಿ ಕಾರಲ್ಲಿ ಹೋಗುವವನಿಗೆ ಒಂದು ನ್ಯಾಯ. ಲ್ಯಾಂಬೊರ್ಗಿನಿಯಲ್ಲಿ ಹೋಗುವವನಿಗೆ ಒಂದು ನ್ಯಾಯ ಅಂತ ಯಾವತ್ತೂ ಇರಬಾರದು" ಎಂದಿದ್ದಾರೆ.
ಇದೇ ವೇಳೆ ತಾನೇಕೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾನು ಹಿಂದೆನೂ ಹೇಳಿದ್ದೆ, ತಿಮ್ಮ ಸಾಯಿಲಿ, ತಿಮ್ಮ ಸಾಯಿಲಿ ಅಂದರೆ, ದೇವರಿಗೆ ತಮ್ಮ ಸಾಯಿಲಿ ತಮ್ಮ ಸಾಯಿಲಿ ಅಂತ ಕೇಳಿಸುತ್ತೆ. ನಾನು ಹೆಸರು ಕೇಳುವುದಕ್ಕೆ ಹೋಗುವುದಿಲ್ಲ. ಎ2ಗೆ ಏನು ಸಮಸ್ಯೆ ಆಗಿದೆ, ಅವರು ಆ ಕೆಲಸ ಮಾಡುವಾಗ ಒಂದೇ ಒಂದು ಕ್ಷಣ ಯೋಚನೆ ಮಾಡಿದ್ದರೆ ಸಾಕಿತ್ತು. ಇವತ್ತು ನಾನು ಹಾಕಿದ ಪೋಸ್ಟ್ ಯಾರಿಗೋ ಒಬ್ಬ ವ್ಯಕ್ತಿಗಾಗಿ ಹಾಕಿಲ್ಲ. ತಾಳ್ಮೆಯಿಂದ ಕಾದರೆ ಏನಾಗುತ್ತೆ? ಅನ್ನೋದಕ್ಕೆ ಈ ಪೋಸ್ಟ್ ಹಾಕಿದ್ದೆ. ಯಾವುದೋ ಒಬ್ಬ ವ್ಯಕ್ತಿಗೆ ಮುಟ್ಟಬೇಕು. ಒಬ್ಬ ವ್ಯಕ್ತಿ ಹಳ್ಳಕ್ಕೆ ಬಿದ್ದಿದ್ದಾನೆ. ಆಳಿಗೆ ಒಂದೊಂದು ಕಲ್ಲು ಅನ್ನೋ ಗುಂಪಿಗೆ ಸೇರಿದ ವ್ಯಕ್ತಿ ನಾನಲ್ಲ" ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.


Click it and Unblock the Notifications











