Pooja Gandhi: ಅನ್ಯ ರಾಜ್ಯದಿಂದ ಬಂದು ನಮ್ಮವರೆ ಆದ ಮಳೆ ಹುಡುಗಿ ಪೂಜಾ ಗಾಂಧಿಯ ಅದ್ಧೂರಿ ಕನ್ನಡ ರಾಜ್ಯೋತ್ಸವ
ನಾಡಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮವಿದೆ. ಇಡೀ ತಿಂಗಳು ನಾಡು ಅರಿಶಿಣ ಕುಂಕುಮದಿಂದ ಸಿಂಗಾರಗೊಳ್ಳಲಿದೆ. ನಾಡಿನ ಹಲವೆಡೆ ಅಬ್ಬರದಿಂದ ಕಾರ್ಯಕ್ರಮಗಳು ನಡೆಯುತ್ತಿವೆ. ಇದೇ ವೇಳೆ ಕನ್ನಡ ಚಿತ್ರರಂಗದ ನಟ ನಟಿಯರು ಕನ್ನಡದ ಹಬ್ಬವನ್ನು ಸಂಭ್ರಮಿಸಿದ್ದಾರೆ. ನಟಿ ಪೂಜಾ ಗಾಂಧಿ ಕೂಡ ತಮ್ಮ ಕನ್ನಡ ಪ್ರೇಮವನ್ನು ಅನಾವರಣಗೊಳಿಸಿದ್ದಾರೆ.
ಮಳೆ ಹುಡುಗಿ ಪೂಜಾ ಗಾಂಧಿ ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಉತ್ತರ ಪ್ರದೇಶದಿಂದ ಬಂದು ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರೂ ಕೂಡ ಆಕೆ ಕನ್ನಡದ ನಟಿ ಎಂದೇ ಗುರುತಿಸಿಕೊಳ್ಳುತ್ತಾರೆ. ಈಗ ಕನ್ನಡ ಭಾಷೆಯನ್ನು ಕಲಿತು ನಾಡಿನ ಬಗ್ಗೆ ಅತೀವ ಅಭಿಮಾನ ಬೆಳೆಸಿಕೊಂಡಿದ್ದಾರೆ.

ಕನ್ನಡ ರಾಜ್ಯೋತ್ಸವ ಆಚರಿಸಿದ ನಟಿ ಪೂಜಾ ಗಾಂಧಿ
ಕನ್ನಡ ನಾಡು, ನುಡಿಯ ಮೇಲೆ ಅಪಾರ ಅಭಿಮಾನ, ಗೌರವ ಇಟ್ಟುಕೊಂಡಿರುವ ಪೂಜಾ ಗಾಂಧಿ, ಈಗ ಪ್ರಬುದ್ಧ ಕನ್ನಡತಿಯಾಗಿದ್ದಾರೆ. ಕರ್ನಾಟಕದಲ್ಲಿ ಇರುವುದು, ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲದೇ ಕನ್ನಡ ಬರೆಯಲು, ಓದಲು ಕಲಿತು ಅನ್ಯ ಭಾಷಿಕರಿಗೆ ಮಾದರಿಯಾಗಿದ್ದಾರೆ.
ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಮ್ಮ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ನೆರೆಹೊರೆಯವರೊಂದಿಗೆ ಬೆರೆತು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ಎಂದು ಘೋಷಣೆಯನ್ನು ಕೂಗುತ್ತಾ, ಮಹಿಳೆಯರುಮ ಮಕ್ಕಳೊಂದಿಗೆ ಸಕತ್ ಸ್ಟೆಪ್ಸ್ ಹಾಕಿದ್ದಾರೆ.
ಕೆಂಪು ಸೀರೆಯಲ್ಲಿ ಮಹಿಳೆಯರ ಜೊತೆಗೆ ಹಲವು ಬಗೆಯ ನೃತ್ಯಗಳನ್ನು ಮಾಡಿರುವ ನಟಿ, ಡೋಲು ಬಾರಿಸುತ್ತಾ ಹೆಜ್ಜೆ ಹಾಕಿದ್ದಾರೆ. ತಮ್ಮ ನೆರಹೊರೆಯವರು, ಮಕ್ಕಳ ಜೊತೆಯಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜೈ ಹಿಂದ್, ಜೈ ಕರ್ನಾಟಕ ಮಾತೆ ಎಂದು ಘೋಷಣೆ ಕೂಗಿದ್ದಾರೆ.

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ನೆಲದ ಮೇಲೆ ಕೆಂಪು , ಹಳದಿ ಬಣ್ಣದಲ್ಲಿ ಅರಳಿದ್ದ ಕರ್ನಾಟಕ, ಅದರ ಪಕ್ಕ "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ಎಂದು ಬರೆದಿದ್ದಾರೆ. ಇದೇ ಮಾತನ್ನು ತಮ್ಮ ಸಂಗಡಿಗರ ಬಳಿಯಲಲ್ಲಿ ಹೇಳಿಸಿದ್ದಾರೆ. ನಟಿ ಪೂಜಾ ಗಾಂಧಿಯ ಕನ್ನಡ ಪ್ರೇಮಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.
ಹಲವು ಮಂದಿ ಕಾಮೆಂಟ್ ಮಾಡಿದ್ದು, ಕರ್ನಾಟಕ ಕನ್ನಡತಿ ಕುಮಾರಿ ಪೂಜಾ ಗಾಂಧಿ ಎಂದು ಹೊಗಳಿದ್ದಾರೆ. "ಮೇಡಂ ನಮ್ ಕರ್ನಾಟಕ ಎಷ್ಟು ಅದೃಷ್ಟ ಮಾಡಿತ್ತೋ... ಏನೋ ನಿಮ್ ಅನ್ನು ನಮ್ ಮನೆ ಮಗಳಾಗಿ ಪಡಯೋಕ್ಕೆ. ಕನ್ನಡ ರಾಜ್ಯೋತ್ಸವ ಶುಭಾಷಯಗಳು ಪೂಜಾ ಮೇಡಂ" ಎಂದಿದ್ದಾರೆ. ಮತ್ತೊಬ್ಬರು, "ನಮ್ ನಂದಿನಿ (ಪೂಜಾ) ಮಾಮ್ ಹೇಳಿದ ಮೇಲೆ ಮುಗಿದು ಜೈ ಕರ್ನಾಟಕ ಮಾತೆ" ಎಂದು ಮುಂಗಾರು ಮಳೆಯ ನಂದಿನಿ ಪಾತ್ರವನ್ನು ನೆನಪಿಸಿಕೊಂಡಿದ್ದಾರೆ.
ನಟಿ ಪೂಜಾ ಗಾಂಧಿ ಕನ್ನಡ ಭಾಷೆ ಕಲಿತು ಹಲವು ಪತ್ರಗಳನ್ನು ಬರೆದಿದ್ದಾರೆ. ಅಭಿಮಾನಿಗಳ ಬಳಿ ಹೇಳಿಕೊಳ್ಳಬೇಕಾದ ವಿಷಯಗಳನ್ನು ಕನ್ನಡದ ಕೈಬರಹದಲ್ಲಿ ಬರೆದು ಅದನ್ನು ಫೋಸ್ಟ್ ಮಾಡುತ್ತಾರೆ. ಕನ್ನಡ ನಾಡಿನ ಇತಿಹಾಸ, ಕನ್ನಡ ವ್ಯಾಕರಣ, ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಅಂಗನವಾಡಿಗಳ ಜೊತೆಗೂ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











