ಆಲ್ಬಂ ಹಾಡಿನ ಸೋಲು: ಹೊಸ ದಾರಿ ಹಿಡಿದ ಚಂದನ್ ಶೆಟ್ಟಿ!
ಚಂದನ್ ಶೆಟ್ಟಿ ಆಲ್ಬಂ ಹಾಡುಗಳು, ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಅಷ್ಟೇ ಯಾಕೆ ಪತ್ನಿ ನಿವೇದಿತಾ ಅವರ ಜೊತೆಗೆ ಸಾಕಷ್ಟು ತುಂಟಾಟದ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಚಂದನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲೂ ಕೂಡ ಸಿಕ್ಕಾಪಟ್ಟೆ ಫೇಮಸ್.
Recommended Video
ಚಂದನ್ ಶೆಟ್ಟಿ ಸದಾ ಒಂದಲ್ಲಾ ಒಂದು ಹೊಸ ಸಾಹಸಕ್ಕೆ ಕೈ ಹಾಕುತ್ತಲಿರುತ್ತಾರೆ. ಸಿನಿಮಾ ಹಾಡುಗಳ ಸಂಗೀತ ಮತ್ತು ಆಲ್ಬಂ ಹಾಡುಗಳು ಕೂಡ ಒಂದಕ್ಕಿಂತ ಒಂದು ವಿಭಿನ್ನ. ಪತ್ನಿ ನಿವೇದಿತಾ ಅವರಿಗಾಗಿ ಪ್ರತ್ಯೇಕವಾಗಿ ಹಾಡು ಕಂಪೋಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ ಚಂದನ್ ಶೆಟ್ಟಿ.
ಇಷ್ಟು ದಿನ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದ ಚಂದನ್ ಶೆಟ್ಟಿ ಅವರು ಈಗ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಹೌದು ಚಂದನ್ ಶೆಟ್ಟಿ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದು ಬಿಟ್ಟಿದ್ದಾರೆ. ಅವರ ಸಿನಿಮಾ ದ ಟೈಟಲ್ ಮತ್ತು ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ.

ಸದ್ದು ಮಾಡಲಿಲ್ಲ ಹೊಸ ವರ್ಷದ ಆಲ್ಬಂ ಹಾಡು!
ಚಂದನ್ ಶೆಟ್ಟಿ, ಆಲ್ಬಂ ಹಾಡುಗಳನ್ನು ಮಾಡಲು ಆರಂಭಿಸಿದಾಗಿನಿಂದಲೂ ಹೊಸ ವರ್ಷಕ್ಕೆ ಒಂದಲ್ಲಾ ಒಂದು ಹಾಡು ರಿಲೀಸ್ ಮಾಡ್ತಾರೆ. ಹೊಸ ವರ್ಷದ ಪಾರ್ಟಿ ರಂಗು ಹೆಚ್ಚಿಸಲೆಂದೇ ಚಂದನ್ ಶೆಟ್ಟಿ ಹೊಸ ಹಾಡು ಮಾಡಿ ರಿಲೀಸ್ ಮಾಡ್ತಾರೆ. ಹೀಗೆ ಬಂದ ಹಲವು ಹಾಡುಗಳು ಹಿಟ್ ಆಗಿವೆ. 3 ಪೆಗ್, ಟಕೀಲಾ, ಪಾರ್ಟಿ ಫ್ರೀಕ್ ಹಾಡುಗಳು ರಿಲೀಸ್ ಆಗಿ ವೈರಲ್ ಲಿಸ್ಟ್ ಸೇರಿವೆ ಕೂಡ. ಆದರೆ ಈ ವರ್ಷದ ಹಾಡು ಚಂದನ್ ಅವರಿಗೆ ಅಷ್ಟೇನು ಖ್ಯಾತಿ ತಂದು ಕೊಡಲಿಲ್ಲ. ಹೊಸ ವರ್ಷಕ್ಕೆ ಬಂದ ಈ ಹಾಡು ಜನ ಮನಗೆಲ್ಲುವಲ್ಲಿ ವಿಫಲ ಆಗಿದೆ. ಹಾಗಾಗಿ ಚಂದನ್ ಈಗ ಹೊಸ ದಾರಿ ಹಿಡಿದಿದ್ದಾರೆ.
ಹೀರೋ ಆಗ್ತಿದ್ದಾರೆ ಚಂದನ್ ಶೆಟ್ಟಿ!
ಇಷ್ಟು ದಿನ ನಟನೆಯಿಂದ ದೂರ ಉಳಿದಿದ್ದ ಚಂದನ್ ಶೆಟ್ಟಿ ಈಗ ಸಿನಿಮಾದಲ್ಲಿ ನಟನೆ ಮಾಡಲು ಮುಂದಾಗಿದ್ದಾರೆ. ಚಂದನ್ ಶೆಟ್ಟಿ ಅವರು ರೆಟ್ರೋ ಲುಕ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಂದನ್ ಶೆಟ್ಟಿ ಅವರ ಲುಕ್‌ನ ಫೋಟೊ ರಿವೀಲ್ ಆಗಿದ್ದು, ಚಂದನ್ ವಿಭಿನ್ನವಾಗಿ ಕಾಣಿಸಕೊಂಡಿದ್ದಾರೆ. ಅವರ ಮೊದಲ ಸಿನಿಮಾದಲ್ಲಿ ಚಂದನ್ ಶೆಟ್ಟಿ ಇದೇ ಅವರತಾರದಲ್ಲಿ ಅಭಿನಯಿಸಲಿದ್ದಾರೆ.
ಎಲ್ರ ಕಾಲೆಳೆಯುತ್ತೆ ಕಾಲ ಎಂದ ಚಂದನ್ ಶೆಟ್ಟಿ!
ಚಂದನ್ ಶೆಟ್ಟಿ ಅಭಿನಯದ ಈ ಚಿತ್ರಕ್ಕೆ 'ಎಲ್ರ ಕಾಲೆಳುತ್ತೆ ಕಾಲ' ಎನ್ನುವ ಟೈಟಲ್ ಇಡಲಾಗಿದೆ. ಸದ್ಯ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಬೆಟ್ಟ- ಗುಡ್ಡ ಪರಿಸರದ ನಡುವೆ ಬಸ್ ಒಂದು ಸಾಗುತ್ತಿರುವ ಚಿತ್ರಣ ಪೋಸ್ಟರ್‌ನಲ್ಲಿ ಇದೆ. ಈ ಪೋಸ್ಟರ್ ಸಿನಿಮಾ ಒಂದು ಜರ್ನಿಯಲ್ಲಿ ಸಾಗುವ ಕತೆ ಎನ್ನುವ ಸುಳಿವು ಕೊಟ್ಟಿದೆ. ಈ ಚಿತ್ರವನ್ನು ಗೋಕುಲ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಉಷಾ ಗೋವಿಂದರಾಜು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಚಂದನ್ ಶೆಟ್ಟಿ ಹೇಗೆ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ.

ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ ನಿರ್ದೇಶನ!
ಕನ್ನಡದ ಹಾಸ್ಯ ನಟ ಸುಜಯ್ ಶಾಸ್ತ್ರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಕೂಡ ಹಾಸ್ಯ ಪ್ರಧಾನ ಸಿನಿಮಾ ಆಗಿದೆ. ಚಂದನ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕಾಮಿಡಿ ಜಾನರ್‌ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಸೃಷ್ಟಿ ಆಗಿದೆ. ಈ ಚಿತ್ರದ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಆದರೆ ಚಂದನ್ ಲುಕ್ ಮತ್ತು ಟೈಟಲ್ ಸಿನಿಮಾದ ಮೇಲೆ ಕುತೂಹಲ ಮೂಡಿಸಿದೆ.


Click it and Unblock the Notifications











