''ಒಂದೇ ರೂಮ್‌ನಲ್ಲಿ ಸಂಸಾರ ಆರಂಭಿಸಿದಾಗಲೇ ಎಲ್ಲವೂ ಗೊತ್ತಾಗೋದು''- ಚಂದನ್ ಶೆಟ್ಟಿ..!
ಸಿನಿಮಾ ತಾರೆಯರ ಡೇಟಿಂಗು .. ಬ್ರೇಕಪ್ಪು .. ಲವ್ವು- ಡವ್ವುಗಳಿಗೇನೂ ಕಡಿಮೆ ಇಲ್ಲ. ನಿನ್ನೆ ಮೊನ್ನೆ ಜೊತೆ ಜೊತೆಯಲ್ಲಿ ಓಡಾಡಿದರೂ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರೂ ಮೂರನೇ ದಿನ ಮದುವೆಯ ಸುದ್ದಿಯನ್ನು ಹರಿಬಿಡುತ್ತಾರೆ. ಇನ್ನೂ ಆದರ್ಶ ದಂಪತಿಗಳಂತೆ ಫೋಸು ಕೊಟ್ಟವರು ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇವೆಲ್ಲವೂ ಸೆಲೆಬ್ರೆಟಿಗಳ ಪರ್ಸನಲ್ ಜೀವನದಲ್ಲಿ ಕಾಮನ್ನು. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸದ್ಯದ ತಾಜಾ ಉದಾಹರಣೆ.
ಮನ:ಪೂರ್ವಕವಾಗಿ ಮದುವೆಯಾಗಿ ಮನ:ಪೂರ್ವಕವಾಗಿಯೇ ದೂರವಾದ ಇಬ್ಬರು ಈಗ ತಮ್ಮ ತಮ್ಮ ಬದುಕಿನ ಸಂತೆಯಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ವಿಚ್ಚೇದನದ ನಂತರ ನಿವೇದಿತಾ ಗೌಡ ರೀಲ್ಸು ಪಾಲ್ಸು ಎಂದು ಮತ್ತೆ ಬ್ಯುಸಿಯಾದರೆ, ಚಂದನ್ ಶೆಟ್ಟಿ ಸಂಗೀತ-ಸಾಹಿತ್ಯ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಇದರ ನಡುವೆ ಸಮಯ ಬಿಡುವು ಮಾಡಿಕೊಂಡು ಫಿಲ್ಮಿಬೀಟ್ ಕನ್ನಡ ಜೊತೆ ಮನ ಬಿಚ್ಚಿ ಮಾತನಾಡಿದ್ದಾರೆ. ಬದುಕು ಹೀಗೆ ಎಂದು ಹೇಳಲು ಸಾಧ್ಯ ಇಲ್ಲವೆಂದಿದ್ದಾರೆ.

ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ ಎಲ್ಲರಿಗೂ ಇರುವಂತೆ ಒಳ್ಳೆ ಚೆನ್ನಾಗಿರುವ ಹುಡುಗಿ ಜೊತೆ ಮದ್ವೆಯಾಗುವ ಕನಸು ನನಗೂ ಇತ್ತು ಎಂದಿರುವ ಚಂದನ್ ಶೆಟ್ಟಿ, ಅದೇ ರೀತಿ ಹುಡುಗಿ ಸಿಕ್ಕಿದ್ದರು ಆದರೆ ಕಾರಣಾಂತರದಿಂದ ಹೀಗಾಯ್ತು ಅಂದಿದ್ದಾರೆ. ಲೈಫ್ ಅಂದರೆನೇ ಹಾಗೆ ಸಮುದ್ರ ತರಹ. ಕೆಲವು ಸಲ ಚಿಕ್ಕ ಅಲೆ ಬರುತ್ತದೆ, ಕೆಲವು ಸಹ ದೊಡ್ಡ ಅಲೆ ಬರುತ್ತದೆ, ಕೆಲವು ಸಲ ಸುನಾಮಿ ಬರುತ್ತದೆ. ಅದು ಯಾವಾಗ ಆಗುತ್ತದೆಯೋ..? ಹೇಗೆ ಆಗುತ್ತದೆಯೋ..? ಗೊತ್ತಾಗುವುದಿಲ್ಲ ಎಂದು ಕೂಡ ಹೇಳಿದ್ದಾರೆ ಚಂದನ್ ಶೆಟ್ಟಿ
ಮುಂದುವರೆದು ಮಾತನಾಡಿರುವ ಚಂದನ್ ಶೆಟ್ಟಿ, ಪ್ರತಿಯೊಬ್ಬರ ಜೀವನದಲ್ಲೂ ನೋವು ಇದ್ದೆ ಇರುತ್ತದೆ. ಕೆಟ್ಟ ನೆನಪು ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಇರುತ್ತದೆ ಎಂದಿದ್ದಾರೆ. ಕೆಲವರು ಕೆಲವರನ್ನು ಕಳೆದುಕೊಳ್ಳುತ್ತಾರೆ. ಸಾವುಗಳಾಗುತ್ತದೆ ಅದು ಅವರಿಗೆ ಕೆಟ್ಟ ನೆನಪಾಗುತ್ತದೆ. ನನ್ನ ಜೀವನದಲ್ಲಿ ಇದು ಕೆಟ್ಟ ನೆನಪಾಗಿದೆ ಅಷ್ಟೇ ಎಂದು ಚಂದನ್ ಶೆಟ್ಟಿ ತಮ್ಮ ವಿಚ್ಛೇದನದ ಬಗ್ಗೆ ಹೇಳಿದ್ದಾರೆ.

ಇನ್ನೂ.. ಲವ್ ಮಾಡುವ ಸಂದರ್ಭದಲ್ಲಿ ಇಬ್ಬರೂ ಕೂಡ ಬೇರೆ ಬೇರೆಯಾಗಿಯೇ ಇರುತ್ತಾರೆ. ಆಗ ಪ್ರೀತಿಯಲ್ಲಿ ಬಿದ್ದಿರುತ್ತಾರೆ ಹೊರತು ಮದುವೆಯಾಗಿರುವುದಿಲ್ಲ. ಆದರೆ ಲವ್ ಅನ್ನೋದೆ ಬೇರೆ. ಮದುವೆಯೇ ಬೇರೆ ಎಂದಿರುವ ಚಂದನ್ ಶೆಟ್ಟಿ, ಕೆಲವರು ಅಂದುಕೊಳ್ಳಬಹುದು ಲವ್ ಮಾಡುವಾಗ ಒಬ್ಬರ ಬಗ್ಗೆ ಒಬ್ಬರಿಗೆ ಗೊತ್ತಿರ್ಲಿಲ್ವಾ ಅಂತ. ಆದ್ರೆ ಮದುವೆಯಾಗಿ ಒಂದೇ ರೂಂನಲ್ಲಿ ಸಂಸಾರ ಮಾಡುತ್ತಾರಲ್ವಾ ಅದೇ ಬೇರೆ. ಅದು ಮದುವೆಯಾದವರಿಗೆ ಮಾತ್ರ ಗೊತ್ತಿರುತ್ತೆ ಎಂದು ಲವ್ ಮತ್ತು ಅರೇಂಜ್ ಮ್ಯಾರೇಜ್ ಬಗ್ಗೆ ಮಾತನಾಡಿದ್ದಾರೆ.
ಜೀವನದಲ್ಲಿ ಬೇರೆ ರೀತಿಯ ಸವಾಲಗಳು ತುಂಬಾ ಇರುತ್ತಾವೆ ಎಂದಿರುವ ಚಂದನ್, ಇಬ್ಬರೂ ಕೂಡ ಒಂದೇ ಇಂಡಸ್ಟ್ರೀಯಲ್ಲಿ ಇರುವಾಗ ಅವರು ಬ್ಯುಸಿ ಇರ್ತಾರೆ, ನಾನು ಬ್ಯುಸಿ ಇರ್ತೀನಿ ಅಂದಿದ್ದಾರೆ. ಇದೆಲ್ಲ ತಕ್ಕಡಿಯಲ್ಲಿನ ಮುಳ್ಳಿನಂತೆ, ಸಮವಾಗಿ ತೂಗುವುದೇ ಇಲ್ಲ. ಅದು ಮೇಲೆ ಕೆಳಗೆ ತೂರಾಡುತ್ತಲೇ ಇರುತ್ತದೆ. ಹಾಗಾಗಿ ಕೊನೆ ಕ್ಷಣದಲ್ಲಿ ಎಲ್ಲರೂ ಹ್ಯಾಪಿ ಆಗಿರುವುದೇ ಮುಖ್ಯ ಎಂದಿದ್ದಾರೆ ಚಂದನ್ ಶೆಟ್ಟಿ.
ಇನ್ನೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ದೂರವಾದ ನಂತರ ಅನೇಕರು ಇಬ್ಬರು ಮತ್ತೆ ಒಂದಾಗಿ, ಮನಸ್ತಾಪ ಬದಿಗಿಟ್ಟು ಬದುಕಿ ಎಂದು ಹೇಳುತ್ತಿದ್ಧಾರೆ. ಇಬ್ಬರನ್ನೂ ಜೊತೆಯಲ್ಲಿ ನೋಡುವ ಆಸೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆಯೂ ಮಾತನಾಡಿರುವ ಚಂದನ್ ಶೆಟ್ಟಿ ಒಂದಾಗಿ ಎಂದು ಎಲ್ಲರೂ ಒಳ್ಳೆ ಮನಸ್ಸಿಂದ ಹೇಳಿರುತ್ತಾರೆ. ಅದು ಒಳ್ಳೆಯದೇ, ಆದರೆ ನಮ್ಮ ಮನಸ್ಸಿನ ಮಾತುಗಳು, ನಮ್ಮ ಮನಸ್ಸಿನಲ್ಲಿ ಏನೇನು ಆಗುತ್ತಿರುತ್ತೆ ಈ ಗೊಂದಲಗಳು ಅವರಿಗೆ ಅರ್ಥ ಆಗುವುದಿಲ್ಲ ಎಂದಿದ್ದಾರೆ. ಬಿಡಿ ಈವಾಗೆಲ್ಲ ಮುಗೀತು. ಮತ್ತೆ ಈ ಬಗ್ಗೆ ಮಾತು ಬೇಡ. ನಾನು ಹೊಸ ಜೀವನ ಕಟ್ಟಿಕೊಳ್ಳಬೇಕು ಎಂದು ಕಾಯ್ತಾ ಇದ್ದೇನೆ. ಮತ್ತೆ ಹಳೇ ಚಂದನ್ ಶೆಟ್ಟಿ ಬೇಕು. ಎಲ್ಲೋ ಸಾಫ್ಟ್ ಆಗಿದ್ದಾನೆ ಆ ಚಂದನ್ ಶೆಟ್ಟಿ ಅನ್ನಿಸಿತ್ತು. ಹಳೆಯ ಚಂದನ್ ಆಗಿ ಬರಲು ಈಗ ಮತ್ತೆ ಕನಸು ಚಿಗುರಿದೆ ಎಂದಿದ್ದಾರೆ ಚಂದನ್ ಶೆಟ್ಟಿ


Click it and Unblock the Notifications










