ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ್ ವಿಧಿವಶ
Recommended Video

ವಯಸ್ಸಾದ ತಂದೆ, ಸ್ವಾತಂತ್ರ್ಯ ಹೋರಾಟಗಾರ, ಬಡ ಮೇಷ್ಟ್ರು, ಅಸಹಾಯಕ ಅಜ್ಜ, ದೇವಸ್ಥಾನದ ಪೂಜಾರಿ, ನೀತಿ ಪಾಠ ಹೇಳುವ ಪ್ರಾಮಾಣಿಕ ರಾಜಕಾರಣಿ.. ಹೀಗೆ ಬಹುತೇಕ ಎಲ್ಲ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಕಲಾವಿದ ಸದಾಶಿವ ಬ್ರಹ್ಮಾವರ್ ವಿಧಿವಶರಾಗಿದ್ದಾರೆ.
ಮನೆ, ಮಕ್ಕಳನ್ನ ಬಿಟ್ಟು ಸದಾಶಿವ ಬ್ರಹ್ಮಾವರ್ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ಕಳೆದ ವರ್ಷ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ನಂತರ ಮನೆಯವರ ಜೊತೆ ಮನೆಗೆ ತೆರಳಿದ ಬ್ರಹ್ಮಾವರ್ ಅವರ ಬಗ್ಗೆ ಇಂದು ಸಾವಿನ ಸುದ್ದಿ ಬಂದು ತಲುಪಿದೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರ್ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಸೆಪ್ಟೆಂಬರ್ 19) ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಾವಿನ ಸುದ್ದಿಯನ್ನ ಕುಟುಂಬದವರಿಗೆ ಹೊರತು ಬೇರೆ ಯಾರಿಗೂ ಗೊತ್ತಾಗಬಾರದು ಎಂದು ಬ್ರಹ್ಮಾವರ್ ಅವರು ಮಕ್ಕಳಿಗೆ ಹೇಳಿದ್ದ ಹಿನ್ನೆಲೆಯಲ್ಲಿ, ಅವರ ಮಾತಿನಂತೆ ಇಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮುಗಿಸಿದೆ ಕುಟುಂಬ.
ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಸದಾಶಿವ ಬ್ರಹ್ಮಾವರ್ ಅವರು ಬಣ್ಣ ಹಚ್ಚಿದ್ದಾರೆ. ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್ಕುಮಾರ್, ಸುದೀಪ್, ದರ್ಶನ್.. ಹೀಗೆ ಕನ್ನಡ ಚಿತ್ರರಂಗದ ಈಗಿನ ಜನರೇಷನ್ ಸ್ಟಾರ್ಗಳೊಂದಿಗೆ ಈ ಹಿರಿಯ ಕಲಾವಿದ ಅಭಿನಯಿಸಿದ್ದರು.
ಒಂದು ಕಾಲದಲ್ಲಿ ಬಹುತೇಕ ಸಿನಿಮಾಗಳಿಗೆ ಖಾಯಂ ನಟನಾಗಿದ್ದ ಹಿರಿಯ ಕಲಾವಿದ, ಇಂದು ಯಾರು ಹಂಗು ಬಯಸದೇ, ಯಾವ ನೆರವು ಕೋರದೆ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗಕ್ಕೆ ಕಲಾಸೇವೆ ನೀಡಿದ ಇಂತಹ ಕಲಾವಿದನಿಗೆ ಚಿತ್ರರಂಗ ಕೊನೆಯ ಘಳಿಗೆಯಲ್ಲಿ ಏನು ಕೊಟ್ಟಿದೆ ಎಂಬುದನ್ನ ಪ್ರಶ್ನಿಸಿಕೊಳ್ಳಬೇಕಿದೆ.?


Click it and Unblock the Notifications











