ಬ್ಯುಸಿಯಾಗೋದ್ರು ನಮ್ ಸ್ಟಾರ್ಸ್ : ಬೆಳಿತಾನೆ ಇದೆ ಸಿನಿಮಾಗಳ ಪಟ್ಟಿ
Recommended Video

ಕನ್ನಡದ ಸ್ಟಾರ್ ನಟರು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವರ ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೊಂದು ಕಡೆ ನಿರ್ಮಾಪಕರಿಗೆ ದೊಡ್ಡ ನಟರ ಕಾಲ್ ಶೀಟ್ ಸಿಗುವುದು ಬಹಳ ಕಷ್ಟವಾಗಿದೆ.
ಕನ್ನಡದ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಉಪೇಂದ್ರ, ಯಶ್ ಇವರ ಮುಂದಿನ ಚಿತ್ರಗಳ ಲಿಸ್ಟ್ ಬಹಳ ದೊಡ್ಡದಿದೆ. ಮುಂದಿನ ಎರಡ್ಮೂರು ವರ್ಷ ಈ ನಟರು ಬುಕ್ ಆಗಿದ್ದಾರೆ. ಕೆಲವು ನಟರಂತು ಇನ್ನೂ ಮೂರ್ನಾಲ್ಕು ವರ್ಷ ಯಾರ ಕೈಗು ಸಿಗೋದಿಲ್ಲ.
ಅಂದಹಾಗೆ, ಸ್ಟಾಂಡಲ್ ವುಡ್ ಸ್ಟಾರ್ ನಟರ ಮುಂದಿನ ಸಿನಿಮಾಗಳ ಪಟ್ಟಿ ಹೀಗಿದೆ. ಮುಂದೆ ಓದಿ...

ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಶಿವಣ್ಣ
ಶಿವಣ್ಣ ನಿಂತರು ಸಿನಿಮಾ ಕೂತರು ಸಿನಿಮಾ ಎನ್ನುವ ನಟ. ಯಾವಾಗಲೂ ಅವರ ಮುಂದಿನ ಚಿತ್ರಗಳ ಲಿಸ್ಟ್ ದೊಡ್ಡದಿರುತ್ತದೆ. ಸದ್ಯ, 'ದಿ ವಿಲನ್' ಶೂಟಿಂಗ್ ಮುಗಿಸಿರುವ ಶಿವಣ್ಣ 'ಕವಚ' ಹಾಗೂ 'ರುಸ್ತುಂ' ಚಿತ್ರದಲ್ಲಿ ತೊಡಗಿದ್ದಾರೆ. ಇದರ ನಂತರ 'ವೈರಮುಡಿ', 'ಖದರ್', ದ್ವಾರಕೀಶ್ ಬ್ಯಾನರ್ ನಲ್ಲಿ ಒಂದು ಸಿನಿಮಾ, ಯೋಗರಾಜ್ ಭಟ್ ಜೊತೆ ಒಂದು ಸಿನಿಮಾ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಉಪೇಂದ್ರ ಸಾಲು ಸಾಲು ಸಿನಿಮಾ
ಮತ್ತೆ ಸಿನಿಮಾಗಳ ಕೆಲಸ ಶುರು ಮಾಡಿರುವ ಉಪೇಂದ್ರ ಸಹ ಈಗ ಅನೇಕ ಚಿತ್ರಗಳಲ್ಲಿ ಬಿಜಿ ಇದ್ದಾರೆ. ಸದ್ಯ, ಅವರ 'ಹೋಮ್ ಮಿನಿಸ್ಟರ್' ಚಿತ್ರ ಬಿಡುಗಡೆ ಹಂತದಲ್ಲಿದೆ. 'ಐ ಲವ್ ಯೂ' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ನಡುವೆ ಉಪೇಂದ್ರ ಹಾಗೂ ರವಿಚಂದ್ರನ್ ಕಾಂಬಿನೇಷನ್ ಸಿನಿಮಾ ಕೂಡ ಸೆಟ್ಟೆರುತ್ತಿದೆ. 'ಉಪ್ಪಿ ರುಪ್ಪಿ' ಚಿತ್ರ ಕೂಡ ಉಪೇಂದ್ರ ಖಾತೆಯಲ್ಲಿದೆ. ಇವುಗಳ ಜೊತೆಗೆ ಮಂಜು ಮಾಂಡವ್ಯ ನಿರ್ದೇಶನದ ಒಂದು ಚಿತ್ರ ಬಾಕಿ ಇದೆ.

ಮೂರ್ನಾಕ್ಕು ಚಿತ್ರಗಳಿಗೆ ದರ್ಶನ್ ಬುಕ್
'ಕುರುಕ್ಷೇತ್ರ' ನಟ ದರ್ಶನ್ ಅವರ 50ನೇ ಸಿನಿಮಾ. ಈ ಚಿತ್ರದ ಆಡಿಯೋ ಆಗಸ್ಟ್ 28ಕ್ಕೆ ಬಿಡುಗಡೆಯಾಗಲಿದೆ. ಇದರ ಜೊತೆ ಜೊತೆಗೆ 'ಯಜಮಾನ' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆ ಬಳಿಕ ದರ್ಶನ್ 53ನೇ ಸಿನಿಮಾವನ್ನು ತರುಣ್ ಸುಧಿರ್ ನಿರ್ದೇಶನ ಮಾಡಲಿದ್ದಾರೆ. ಇವುಗಳ ಜೊತೆಗೆ 'ಒಡೆಯರ್' ಸಿನಿಮಾ ಮಾಡುತ್ತಿದ್ದಾರೆ.

ಪರಭಾಷೆಯಲ್ಲಿಯೂ ಸುದೀಪ್ ಸಿನಿಮಾ
ಕಿಚ್ಚ ಸುದೀಪ್ 'ದಿ ವಿಲನ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಟಿಸುತ್ತಿದ್ದಾರೆ. 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದಲ್ಲಿ ಅಂಬರೀಶ್ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಎರಡು ಚಿತ್ರಗಳ ಶೂಟಿಂಗ್ ಮುಗಿದಿದೆ. ಇನ್ನೊಂದು ಕಡೆ 'ಕೋಟಿಗೊಬ್ಬ 3' ಮತ್ತು 'ಪೈಲ್ವಾನ್' ಚಿತ್ರದ ಚಿತ್ರೀಕರಣ ನೆಡೆಯುತ್ತಿದೆ. ಟಾಲಿವುಡ್ ನಲ್ಲಿ 'ಸೈರಾ' ಚಿತ್ರದಲ್ಲಿ ಸಹ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ.

ಯಶ್ ಕೈ ತುಂಬ ಸಿನಿಮಾಗಳು
ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುವ ಯಶ್ ಸದ್ಯ 'ಕೆ.ಜೆ.ಎಫ್' ತಯಾರಿಯಲ್ಲಿ ಇದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಅದರ ನಂತರ 'ರಾಣಾ' ಸಿನಿಮಾ ಶುರು ಆಗಲಿದೆ. ಬಳಿಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಯಶ್ ನಟಿಸಲಿದ್ದಾರೆ. ಇದರೊಂದಿಗೆ ಜಯಣ್ಣ ಬ್ಯಾನರ್ ನಲ್ಲಿ ಯಶ್ ಇನ್ನೊಂದು ಸಿನಿಮಾ ಮಾಡಬೇಕಿದೆ.

ಪುನೀತ್ ಮುಂದಿನ ಪ್ರಾಜೆಕ್ಟ್ ಗಳು
ನಟ ಪುನೀತ್ ರಾಜ್ ಕುಮಾರ್ ಅವರ 'ನಟ ಸಾರ್ವಭೌಮ' ಸಿನಿಮಾ ಅಕ್ಟೋಬರ್ 5 ರಂದು ಬಿಡುಗಡೆಯಾಗಲಿದೆ. ಅದರ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ಮತ್ತೆ ಒಂದಾಗಲಿದ್ದಾರೆ. ಬಳಿಕ ಶಶಾಂಕ್ ಡೈರೆಕ್ಷನ್ ನಲ್ಲಿ ಅಪ್ಪು ಒಂದು ಚಿತ್ರ ಮಾಡುತ್ತಾರೆ.

ವಿಭಿನ್ನ ಪಾತ್ರಗಳಲ್ಲಿ ರವಿಚಂದ್ರನ್
ರವಿಚಂದ್ರನ್ ನಟಿಸಿರುವ 'ಪಡ್ಡೆಹುಲಿ' ಹಾಗೂ 'ಕುರುಕ್ಷೇತ್ರ' ಚಿತ್ರಗಳು ಸದ್ಯದಲ್ಲಿಯೇ ರಿಲೀಸ್ ಆಗಲಿದೆ. ಉಳಿದಂತೆ, 'ರಾಜೇಂದ್ರ ಪೊನ್ನಪ್ಪ' ಚಿತ್ರವನ್ನು ಕ್ರೇಜಿಸ್ಟಾರ್ ನಿರ್ದೇಶನ ಮಾಡುತ್ತಿದ್ದಾರೆ. ಬಳಿಕ ಉಪೇಂದ್ರ ಜೊತೆಗೆ ರವಿಚಂದ್ರನ್ ಒಂದು ಸಿನಿಮಾ ಮಾಡುತ್ತಾರೆ. ಜೊತೆಗೆ ಶಿವಗಣೇಶ್ ನಿರ್ದೇಶನದ ಹೊಸ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕ್ರೇಜಿಸ್ಟಾರ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











