ಮುಂಬೈನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಪ್ರತ್ಯಕ್ಷ, 'ಅಣ್ಣಾ ಆರಾಮಾ' ಎಂದ ಅಭಿಮಾನಿಗೆ ರಾಕಿ ಹೇಳಿದ್ದೇನು..?
'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು, 'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್. ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಮೇಲೆ ಎಲ್ಲರ ಕಣ್ಣಿದೆ. ಜಗತ್ತು ಯಶ್ ಬಗ್ಗೆ ಮಾತನಾಡುತ್ತಿದೆ.
ಆದರೆ, ಯಶ್ ಮಾತ್ರ ಮಾತನಾಡುತ್ತಿಲ್ಲ. ಅವರ ಅಭಿಮಾನಿಗಳು ಎಷ್ಟೇ ಗೋಗರೆದರೂ 'ಟಾಕ್ಸಿಕ್' ಚಿತ್ರದ ಬಗ್ಗೆ ಮೌನ ಮುರಿಯುತ್ತಿಲ್ಲ. ತಮ್ಮ ಪಾಡಿಗೆ ತಮ್ಮ ಕೆಲಸದ ಕಡೆ ಗಮನ ಕೊಡ್ತಿದ್ದಾರೆ. ಸದ್ದು ಗದ್ದಲ ಮಾಡದೇ ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ. ಇದರ ನಡುವೆ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ಧಾರೆ. ಅಲ್ಲಿಯೂ ಅಭಿಮಾನದ ಮಳೆಯಲ್ಲಿ ಮಿಂದೆದ್ದಿದ್ದಾರೆ.

ಹೌದು, ಆಗಲೇ ಹೇಳಿರುವಂತೆ ಯಶ್ ಈಗ ನ್ಯಾಷನಲ್ ಸ್ಟಾರ್. ಕೇವಲ ಕರುನಾಡಿನಲ್ಲಿ ಅಷ್ಟೇ ಅಲ್ಲ ದೇಶವ್ಯಾಪಿ ಯಶ್ ಗೆ ಇವತ್ತು ಅಭಿಮಾನಿಗಳಿದ್ದಾರೆ. ಇನ್ನೂ.. ಮುಂಬೈನಲ್ಲಿ ಕನ್ನಡಿಗರ ದೊಡ್ಡ ದಂಡು ಇದೆ. ಅಲ್ಲಿರುವ 20.000ಕ್ಕೂ ಅಧಿಕ ಹೊಟೇಲ್‌ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕನ್ನಡಿಗರ ಒಡೆತನದಲ್ಲಿವೆ.
ಹೀಗಾಗಿ ಅಲ್ಲಿ ನೆಲೆಸಿರುವ ಕನ್ನಡಿಗರಿಗೆ ಯಶ್ ತಮ್ಮೂರಿನ ಅಣ್ತಮ್ಮಾನೇ. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ವಿಮಾನ ನಿಲ್ದಾಣದಿಂದ ಆಚೆ ಬರುತ್ತಿದ್ದಂತೆ ಅಲ್ಲಿ ಬಂದು ಸೇರಿದ್ದ ಅಭಿಮಾನಿಯೊಬ್ಬರು ಯಶ್ ಅವರನ್ನು ಕನ್ನಡದಲ್ಲಿ ಮಾತನಾಡಿಸಿದ್ಧಾರೆ. ಯಶ್ ಪ್ರಯಾಣ ಮಾಡುತ್ತಿದ್ದ ಕಾರ್ ಬಳಿ ಬಂದು ಅಣ್ಣಾ ಆರಾಮಾ ಎಂದು ಕೇಳಿದ್ದಾರೆ. ಇದಕ್ಕೆ ಯಶ್ ಕೂಡ ಹೌದು ಆರಾಮ ಎನ್ನುತ್ತಾರೆ. ಮುಂದುವರೆದು ಆ ಅಭಿಮಾನಿ ಯಶ್ ಪಕ್ಕ ಕುಳಿತುಕೊಂಡಿದ್ದ ರಾಧಿಕಾ ಪಂಡಿತ್ ಅವರಿಗೆ ಕೂಡ ಮೇಡಂ ಆರಾಮಾ ಎಂದು ಕೇಳಿದ್ದಾರೆ. ಇದಕ್ಕೆ ರಾಧಿಕಾ ಮುಗುಳುನಗೆಯನ್ನು ಬೀರಿ ಆರಾಮ್ ಎಂದು ಹೇಳುತ್ತಾರೆ. ಆ ನಂತರ ಕಾರು ಮುಂದಕ್ಕೆ ಸಾಗುತ್ತೆ.
ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇವಲ ಇದೊಂದು ವಿಡಿಯೋ ಮಾತ್ರವಲ್ಲ ಯಶ್ ಮುಂಬೈನಲ್ಲಿರುವ ಇನ್ನೂ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಯಶ್ ಮುಂಬೈಗೆ ಹೋಗಲು ಕಾರಣ ಏನಿರಬಹುದು ಎನ್ನುವ ಚರ್ಚೆಯನ್ನು ಈ ವಿಡಿಯೋ ತುಣುಕುಗಳು ಹುಟ್ಟು ಹಾಕಿವೆ.
ಇದಕ್ಕೆ ಪೂರಕವಾಗಿ ಟಾಕ್ಸಿಕ್ ಚಿತ್ರದ ಕೆಲಸಕ್ಕೆ ಸಂಬಂಧಿಸಿದಂತೆ ಯಶ್ ಮುಂಬೈಗೆ ತೆರಳಿರಬಹುದು ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದರೆ, ಯಶ್ ತಮ್ಮ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಮಾತು ಕಥೆ ಮಾಡಲು ಕೂಡ ಮುಂಬೈಗೆ ತೆರಳಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಮುಂಬೈಗೆ ಹೋಗುವ ಅವಶ್ಯಕತೆಯಾದರೂ ಏನಿತ್ತು ಎಂದು ಚಕಾರ ತೆಗೆಯುತ್ತಿದ್ದಾರೆ.
ಅಂದ್ಹಾಗೇ ಟಾಕ್ಸಿಕ್ ಚಿತ್ರದಲ್ಲಿ ನಾಯಕಿ ವಿಚಾರದಲ್ಲಿ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ ಇಲ್ಲಿಯವರೆಗೆ ಗುಟ್ಟು ಕಾಪಾಡಿಕೊಂಡು ಬಂದಿದ್ಧಾರೆ. ಅದ್ಯಾಗೂ ಚಿತ್ರದಲ್ಲಿ ನಯನತಾರಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದು ಖಾತ್ರಿಯಾಗಿದೆ. ಅಮೆರಿಕಾ ಮೂಲದ ಬಾಲಿವುಡ್ ನಟ ಅಕ್ಷಯ್ ಓಬೆರಾಯ್ ಕೂಡ ಚಿತ್ರದಲ್ಲಿದ್ದಾರೆ ಎಂಬ ಸುದ್ದಿ ಇದೆ. ಉಳಿದಂತೆ ಯಶ್ ಹಾಗೂ ಕೆವಿಎನ್ ಸಂಸ್ಥೆಯ ವೆಂಕಟ್ ಕೋನಂಕಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 15 ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ.


Click it and Unblock the Notifications











