''ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು''
ನಿನ್ನೆ ನಿಗದಿಯ ದೇಹ ತೂಕಕ್ಕಿಂತ ಕೇವಲ ನೂರು ಗ್ರಾಂ, ನೂರೇ ನೂರು ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಒಲಪಿಂಕ್ಸ್‌ನಲ್ಲಿ ವಿನೇಶ್ ಫೋಗಟ್ ಅನರ್ಹವಾದ ಸುದ್ದಿ ಕೇಳಿದ ಭಾರತದ ಅಸಂಖ್ಯಾತ ಕ್ರೀಡಾ ಪ್ರೇಮಿಗಳಿಗೆ ಕಾಲಡಿಯ ನೆಲ ಕುಸಿದ ಅನುಭವವಾಗಿತ್ತು.
ಇನ್ನೂ ತಮಗೆ ಎದುರಾದ ಸವಾಲುಗಳನ್ನೆಲ್ಲ ಮೀರಿ ಫೈನಲ್ ಪ್ರವೇಶಿಸಿ, ಒಲಪಿಂಕ್ಸ್‌ನಲ್ಲಿ ಈ ಸಾಧನೆಯನ್ನು ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿ ಪಟು ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿನೇಶ್ ಫೋಗಟ್ ಅವರ ಮನದ ನೋವು ಹೇಳಲು ಅಸಾಧ್ಯ. ಆ ನೋವಲ್ಲಿಯೇ ಕುಸ್ತಿಗೆ ಇಂದು ವಿದಾಯ ಹೇಳಿರುವ ವಿನೇಶ್ ಗೆ ಅನೇಕರು ಧೈರ್ಯ ತುಂಬಿದ್ದಾರೆ. ಚಿನ್ನ ಸಿಗಲಿ ಸಿಗದೇ ಇರಲಿ ನೀವು ಭಾರತದ ಚಿನ್ನ ಎಂದು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿನೇಶ್ ಅವರನ್ನು ಬೆಂಬಲಿಸಿ ಬರಹಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ಕವಿರಾಜ್ ಕೂಡ ಒಬ್ಬರು.

ಹೌದು, ವಿನೇಶ್ ಪ್ಯಾರಿಸ್ ಒಲಪಿಂಕ್ಸ್‌ನಿಂದ ಹೊರ ಬಿದ್ದ ನಂತರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಕವಿರಾಜ್ ''ದೇಶದ ಒಲಿಂಪಿಕ್ ಇತಿಹಾಸದಲ್ಲೇ ಹಿಂದೆಂದೂ ಯಾರೂ ನೀಡಿರದ ಅತ್ಯದ್ಭುತ ಸ್ಫೂತಿಯುತ ಪ್ರದರ್ಶನ ನೀಡಿ ಒಲಿಂಪಿಕ್ ಫೈನಲ್ ತಲುಪಿದ್ಧ ಕುಸ್ತಿಪಟು ವಿನೀಶಾ ಪೋಗಟ್ ಅವರಿಗೆ ಕೇವಲ ನೂರೇ ನೂರು ಗ್ರಾಂ ಹೆಚ್ಚು ತೂಕದ ಕಾರಣಕ್ಕೆ ಸ್ಪರ್ಧೆಯಿಂದಲೇ ಅನರ್ಹಗೊಳಿಸಲಾಯಿತು ಎಂಬುದು ಒಬ್ಬ ಅಪ್ಪಟ ಕ್ರೀಡಾಪ್ರೇಮಿಯಾಗಿ ನಾನು ಅನುಭವಿಸಿದ ಅತ್ಯಂತ ದೊಡ್ಡ ಹಾರ್ಟ್ ಬ್ರೇಕ್ '' ಎಂದಿದ್ದಾರೆ.
ಮುಂದುವರೆದು ''ಈಗಲೂ ನಂಬಲಾಗುತ್ತಿಲ್ಲ , ಪದೇ ಪದೇ ಅದು ಸುಳ್ಳಾಗಲಿ ಎಂಬ ಹಪಾಹಪಿಯಿದೆ. ಆದರೆ ಅದಕ್ಕಿಂತಾ ಆಘಾತಕಾರಿ ವಿಚಾರವೆಂದರೆ ನಮ್ಮದೇ ದೇಶದ ಕೆಲವರು ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಈ ಸುದ್ದಿಯನ್ನು ಸಂಭ್ರಮಿಸಿ ಪೋಸ್ಟ್ ಹಾಕುತ್ತಿದ್ದಾರೆ . ನನ್ನ ಪೋಸ್ಟಿನಲ್ಲೇ ನಿನ್ನೆ ರಾತ್ರಿಯೇ ( ಡಿಸ್ ಕ್ವಾಲಿಫೈ ಆಗುವ ಮೊದಲೇ ) ಅವಳು ಸೋಲಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದರು ಎಂದರೆ ಅದೆಂತಾ ವಿಕೃತ/ಹೀನಾಯ ಮನಸ್ಥಿತಿಗೆ ತಲುಪಿದ್ದಾರೆ ಕೆಲವರು . ಅತ್ಯಂತ ದೊಡ್ಡ ದುರಂತವೆಂದರೆ ಆ ಜನಗಳು ತಮ್ಮನ್ನು ದೇಶಪ್ರೇಮಿಗಳು ಎಂದು ಕ್ಲೈಮ್ ಮಾಡುತ್ತಾರೆ . ಅವರ ದ್ವೇಷಕ್ಕೆ ಕಾರಣ ವಿನೇಶ್ ಅವರ ಪಕ್ಷದ ಅತ್ಯಾಚಾರಿ ಸಂಸದನೊಬ್ಬನ ವಿರುದ್ಧದ ಪ್ರತಿಭಟನೆಗೆ ಕುಳಿತದ್ದಳು ಎಂಬುದಷ್ಟೇ. ಇದಕ್ಕಿಂತಾ ಕೀಳು ನೈತಿಕ ಪತನ ಸಾಧ್ಯವೇ ಇಲ್ಲ. ಏನೇ ಆದರೂ ವಿನೇಶ್ ಅದ್ವಿತೀಯ ಚಾಂಪಿಯನ್ , ಕರಿಯರ್ ಪೂರ್ತಿ ಒಂದು ಸೋಲು ಕಾಣದ ಚಾಂಪಿಯನ್ ಕುಸ್ತಿಪಟುವನ್ನು ಮೊದಲ ಸುತ್ತಲ್ಲೆ ಮಣ್ಣು ಮುಕ್ಕಿಸಿದ್ದೇ ದೇಶವೇ ಹೆಮ್ಮೆ ಪಡುವ ಐತಿಹಾಸಿಕ ಸಾಧನೆ. ಫೈನಲ್ ತನಕ ಆಕೆ ಬರುವವರೆಗೂ ಆಕೆಯ ತೂಕ ಅರ್ಹವಾಗಿಯೇ ಇತ್ತು . ಪ್ರತಿಯೊಂದು ಪಂದ್ಯದಲ್ಲೂ ಆಕೆ ತೋರಿಸಿದ ತಾಕತ್ತು , ಛಲ ರೋಮಾಂಚಕಾರಿ. Whatever , She is a BEAST she is the BEST''. ಎಂದು ಕವಿರಾಜ್ ಬರೆದುಕೊಂಡಿದ್ದಾರೆ.
ಇನ್ನೂ ಚೇತನ್ ಅಹಿಂಸಾ ಕೂಡ ತಲೆಯನ್ನು ಮೇಲಕ್ಕೆತ್ತಿ, ವಿನೇಶ್ ಎಂದಿದ್ದಾರೆ. ''ಕ್ರೂರ ತಿರುವಿನಲ್ಲಿ, ವಿನೇಶ್ ಫೋಗಟ್ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ ಮತ್ತು 150 ಗ್ರಾಂ ಅಧಿಕ ತೂಕದ ಕಾರಣ ಅವರ ಬೆಳ್ಳಿ ಪದಕವನ್ನು ಬಹುಶಃ ತೆಗೆದುಹಾಕಲಾಗುತ್ತದೆ. ಪದಕವಿರಲಿ ಅಥವಾ ಇಲ್ಲದಿರಲಿ, ಕುಸ್ತಿಪಟುಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳದ ವಿರುದ್ಧ ಚಳವಳಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕೆ ಫೋಗಟ್ ಮಾದರಿಯಾಗಿದ್ದಾರೆ.ತಲೆಯನ್ನು ಮೇಲಕ್ಕೆತ್ತಿ, ವಿನೇಶ್'' ಎಂದು ಬರೆದುಕೊಂಡಿದ್ದಾರೆ.
ಇವರಷ್ಟೇ ಅಲ್ಲ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ವಿಜೇತ ನಿರ್ದೇಶಕ ಮಂಸೋರೆ ಕೂಡ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ. ವಿನೇಶ್ ಫೋಗಟ್ ಅವರನ್ನು ಬೆಂಬಲಿಸಿ ಸಾಲು ಸಾಲು ಬರಹಗಳನ್ನೂ ಹಂಚಿಕೊಂಡಿದ್ದಾರೆ. ''ಥಿಯರಿ, ರೂಲ್ಸು ಹೇಳೋದಿಕ್ಕೇನು ದಾರಿಲಿ ಹೋಗೋವರೆಲ್ಲಾ ಹೇಳ್ತಾರೆ. ಆದರೆ ಒಂದು ಘಟ್ಟವನ್ನು ತಲುಪಲು ಪಟ್ಟಿರುವ ಕಷ್ಟವೆಲ್ಲಾ ಯಾವುದೋ ಅನಿರೀಕ್ಷಿತ ಕಾರಣದಿಂದ ಕೈತಪ್ಪಿದರೆ ಆಗುವ ಆಘಾತ ಅನುಭವಿಸಿರುವವರಿಗಷ್ಟೇ ಅರ್ಥವಾಗುತ್ತದೆ . ವಿನೇಶ್ ಪೋಗಾಟ್ ಅವರು ಇಂದು ಎದುರಿಸಿದ ಅನಿರೀಕ್ಷಿತ ಆಘಾತ, ನನಗೇ ಆದಷ್ಟು ಡಿಸ್ಟರ್ಬ್ ಆಗಿದೆ'' ಎಂದು ಬರೆದುಕೊಂಡಿದ್ಧಾರೆ.
ಇನ್ನೂ, ವಿನೇಶ್ ಪೋಗಟ್ ಅನರ್ಹಗೊಳ್ಳುವ ಮುನ್ನ, ಫೈನಲ್ ತಲುಪಿದ ಸಮಯದಲ್ಲಿ, ವಿನೇಶ್ ನಿಮಗೆ ಸಲಾಂ ಎಂದು ಕಿಶೋರ್ ಹೇಳಿದ್ದರು. ''ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು'' ಎಂದು ತಮ್ಮ ಮನದ ಮಾತುಗಳನ್ನು ಅಕ್ಷರದ ಮೂಲಕ ಹಂಚಿಕೊಂಡಿದ್ದರು.
''ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ. - ಡಾ. ಬಿ.ಆರ್. ಅಂಬೇಡ್ಕರ್. ವಿನೇಶ್ ನಿಮಗೆ ಸಲಾಂ. ಇಲ್ಲಿಯ ಅಮಾನವೀಯ ವ್ಯವಸ್ಥೆ ನಿಮ್ಮನ್ನು ದೆಹಲಿಯ ಬೀದಿಗಳಲ್ಲಿ ಎಳೆದಾಡಿದ್ದರಿಂದ ಹಿಡಿದು ಒಲಿಂಪಿಕ್ ಪದಕದವರೆಗೆ, ಅಷ್ಟು ಕಹಿ ಅನುಭವಗಳ ನಂತರವೂ ನೀವು ಮಾಡಿರುವ ಈ ಸಾಧನೆ ಅಭೂತಪೂರ್ವ.ಆದರೆ ಇಂದು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಾವು ಭಾರತೀಯರು ಕಳೆದುಕೊಂಡಿದ್ದೇವೆ. ನಾವು ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು. ಧಿಕ್ಕಾರವಿರಲಿ ಮೋದಿ, ಬ್ರಿಜ್‌ಭೂಷಣ್, ಗೋದೀ ಮಾಧ್ಯಮಕ್ಕೆ ಮತ್ತು ಆ ವಿಕೃತ ಮನಸ್ಥಿತಿಯ ಸಮಾಜಕ್ಕೆ'' ಎಂದು ಬರೆದುಕೊಂಡಿದ್ದರು ಕಿಶೋರ್.


Click it and Unblock the Notifications











