ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!
Recommended Video
ನಟ ಜೈಜಗದೀಶ್ ಅವರಿಗೆ ಎರಡು ಮದುವೆ ಆಗಿದೆ ಎಂಬ ವಿಚಾರ ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ಬಹಿರಂಗವಾಗಿದೆ. ಬುಧವಾರದ ಎಪಿಸೋಡ್ ನಲ್ಲಿ ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್ ವೊಂದರಲ್ಲಿ 'ಕ್ಷಮೆ ಕೇಳುವ ಅವಕಾಶ' ಮಾಡಿಕೊಡಲಾಗಿತ್ತು.
ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಸಿಂಗ್ ಜೊತೆ ಮದುವೆ ಆಗುವುದಕ್ಕೆ ಮುಂಚೆಯೇ ಇನ್ನೊಬ್ಬ ಯುವತಿ ಜೊತೆ ಪ್ರೇಮವಿವಾಹವಾಗಿತ್ತು ಎಂಬ ಅಚ್ಚರಿ ವಿಷಯವನ್ನ ಹಿರಿಯ ನಟ ಹೇಳಿಕೊಂಡಿದ್ದಾರೆ. ರೂಪಾ ಜೊತೆ ಪ್ರೇಮವಿವಾಹವಾಗಿ ಆರು ವರ್ಷ ದಾಂಪತ್ಯ ಜೀವನ ನಡೆಸಿದ್ದು, ಒಂದು ಮಗು ಕೂಡ ಇತ್ತು ಎಂದು ನೆನೆದು ಭಾವುಕರಾದರು.
ಈ ಪ್ರೇಮವಿವಾಹ ಆಗುವುದಕ್ಕೆ ಕನ್ನಡದ ಸೂಪರ್ ಸ್ಟಾರ್ ನಟರೊಬ್ಬರು ಪ್ರಮುಖ ಕಾರಣ ಎಂದು ಸ್ವತಃ ಜೈಜಗದೀಶ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಜೈಜಗದೀಶ್ ಮೊದಲ ಮದುವೆಗೆ ನೆರವಾದ ಆ ಸ್ಟಾರ್ ನಟ ಯಾರು? ಅವರ ಪಾತ್ರವೇನು? ಮುಂದೆ ಓದಿ....

ಪ್ರೇಮ ವಿವಾಹಕ್ಕೆ ವಿಷ್ಣುದಾದ ಸಹಾಯ
1980ರ ಸಮಯದಲ್ಲಿ ಯಶಸ್ವಿ ನಟನಾಗಿದ್ದ ಜೈಜಗದೀಶ್, ರೂಪಾ ಎಂಬ ಯುವತಿ ಜೊತೆ ಪ್ರೀತಿಯಲ್ಲಿದ್ದರು. ಆದರೆ, ರೂಪಾ ಅವರ ಮಾವ ಇದನ್ನ ವಿರೋಧಿಸಿದ್ದರು. ಇಬ್ಬರನ್ನು ದೂರು ಮಾಡಲು ಪ್ರಯತ್ನ ಮಾಡುತ್ತಿದ್ದರು. ಇಂತಹ ಸಮಯದಲ್ಲಿ ಜೈಜಗದೀಶ್ ಮತ್ತು ರೂಪಾ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದರು. ಆಗ ಜೈಜಗದೀಶ್ ಜೋಡಿಗೆ ಸಹಾಯ ಮಾಡಿದ್ದು ಸಾಹಸ ಸಿಂಹ ವಿಷ್ಣುವರ್ಧನ್.

ವಿಷ್ಣು ಮನೆಯಲ್ಲಿ ವಾಸ
ಮದುವೆಯಾಗಬೇಕು ಎಂದು ನಿರ್ಧರಿಸಿ ಮನೆಯವರನ್ನೆಲ್ಲಾ ಬಿಟ್ಟು ಬಂದಿದ್ದ ಜೈಜಗದೀಶ್ ಮತ್ತು ರೂಪಾ ಅವರಿಗೆ ಆಶ್ರಯ ಕೊಟ್ಟಿದ್ದು ಸಾಹಸ ಸಿಂಹ ವಿಷ್ಣುವರ್ಧನ್. ಜೈಜಗದೀಶ್ ಅವರನ್ನ ಎರಡು ದಿನಗಳವರೆಗೂ ತಮ್ಮ ಮನೆಯಲ್ಲೇ ಇಟ್ಟುಕೊಂಡು ಮದುವೆ ತಯಾರಿ ನಡೆಸಿದ್ದರು. ಇಬ್ಬರು ಮದುವೆಯಾಗಲು ಸಹಕಾರ ನೀಡಿ ಖುದ್ದು ತಾವೇ ಮುಂದೆ ನಿಂತು ಮದುವೆ ಮಾಡಿಸಿದರು.

ಅಭಿಮಾನ್ ಸ್ಟುಡಿಯೋ ಬಳಿ ಮದುವೆ
ಈಗಿನ ಅಭಿಮಾನ್ ಸ್ಟುಡಿಯೋದಲ್ಲಿ ಆಗೊಂದು ದೇವಸ್ಥಾನವಿತ್ತು. ಆ ದೇವಸ್ಥಾನದಲ್ಲಿ ವಿಷ್ಣುವರ್ಧನ್, ಭಾರತಿ ಮತ್ತು ಆತನ ಸ್ನೇಹಿತರು ಮುಂದೆ ನಿಂತು ಜೈಜಗದೀಶ್ ಮತ್ತು ರೂಪಾ ಅವರಿಗೆ ಮದುವೆ ಮಾಡಿಸಿದರು. ವಿಧಿಯ ಆಟ ಇಂದು ಅದೇ ಜಾಗದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ಆಗಿದೆ.

'ಬಂಧನ' ಚಿತ್ರದಲ್ಲಿ ವಿಷ್ಣು-ಜೈಜಗದೀಶ್
ಡಾ ವಿಷ್ಣುವರ್ಧನ್ ಅವರ ನಟಿಸಿರುವ ಬಹುತೇಕ ಚಿತ್ರಗಳಲ್ಲಿ ಜೈಜಗದೀಶ್ ನಟಿಸಿದ್ದಾರೆ. ಸ್ನೇಹಿತನಾಗಿ, ಖಳನಾಯಕನಾಗಿ, ಸಹೋದರನಾಗಿ ಅಭಿನಯಿಸಿದ್ದಾರೆ. ಜೈಜಗದೀಶ್ ಮತ್ತು ವಿಷ್ಣುವರ್ಧನ್ ಅಂದಾಕ್ಷಣ ಥಟ್ ಅಂತ ನೆನಪಾಗುವುದು ಬಂಧನ ಸಿನಿಮಾ. ಈ ಚಿತ್ರವನ್ನ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿರುವುದು ವಿಶೇಷ.

ಜೈಜಗದೀಶ್, ಬಾಬು, ವಿಷ್ಣು ಸ್ನೇಹಿತರು
80ರ ದಶಕದಲ್ಲಿ ವಿಷ್ಣುವರ್ಧನ್, ಜೈಜಗದೀಶ್, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಎಲ್ಲರೂ ಆಪ್ತ ಸ್ನೇಹಿತರು. ಮೊದಲ ಮದುವೆ ಮುರಿದು ಬಿದ್ದ ಬಳಿಕ, ಜೈಜಗದೀಶ್ ಅವರು, ರಾಜೇಂದ್ರ ಸಿಂಗ್ ಬಾಬು ಅವರ ಸಹೋದರಿ ವಿಜಯಲಕ್ಷ್ಮಿ ಸಿಂಗ್ ಅವರನ್ನ ಮದುವೆ ಆದರು. ಈ ದಂಪತಿಗೆ ವೈಭವಿ, ವೈನಿಧಿ, ವೈಸಿರಿ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ.


Click it and Unblock the Notifications











