ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಖ್ಯಾತ ಕಿರುತೆರೆ ನಟಿ ದುರ್ಮರಣ
ಮಂಡ್ಯ ಮೂಲದ ಕನ್ನಡ ಕಿರುತೆರೆ ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಅಪಘಾತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡಿದ್ದ ನಟಿ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಮೂಲಕ ಪವಿತ್ರಾ ಇತ್ತೀಚೆಗೆ ತೆಲುಗು ಕಿರುತೆರೆಯಲ್ಲಿ ಹೆಚ್ಚು ಗುರ್ತಿಸಿಕೊಂಡಿದ್ದರು.
ಪವಿತ್ರಾ ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ 'ತ್ರಿನಯನಿ' ಧಾರವಾಹಿಯಲ್ಲಿ ನಟಿಸಿ ಅಲ್ಲಿನ ವೀಕ್ಷಕರ ಮನಗೆದ್ದಿದ್ದರು. ಕನ್ನಡದಲ್ಲಿ 'ರೋಬೋ ಫ್ಯಾಮಿಲಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಆಕೆ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರಾಗಿದ್ದರು.

'ಜೋಕಾಲಿ', 'ನೀಲಿ', 'ರಾಧಾರಮಣ' ಎನ್ನುವ ಧಾರಾವಾಹಿಗಳಲ್ಲಿ ಕೂಡ ಪವಿತ್ರಾ ಜಯರಾಮ್ ನಟಿಸಿದ್ದರು. ಪವಿತ್ರಾ ದುರಂತ ಸಾವಿನ ವಿಚಾರ ಕಿರುತೆರೆ ಲೋಕಕ್ಕೆ ಆಘಾತ ತಂದಿದೆ. ಮೆಹಬೂಬ್ ನಗರದ ಭೂತ್ಪುರ್ ವ್ಯಾಪ್ತಿಯ ಶೇರಿಪಲ್ಲಿ ಎನ್ನುವ ಗ್ರಾಮದ ಬಳಿ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಮಂಡ್ಯದ ತಮ್ಮ ಹುಟ್ಟೂರಿಗೆ ಬಂದು ಮರಳಿ ವಾಪಸ್ ಹೈದರಾಬಾದ್‌ಗೆ ಹೋಗುವ ವೇಳೆ ರಾತ್ರಿ ಈ ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ಬಸ್‌ಗೆ ಗುದ್ದಿದೆ.
ತೆಲುಗು ಕಿರುತೆರೆಯ 'ತ್ರಿನಯನಿ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಪವಿತ್ರಾ ಜಯರಾಮ್ ನಟಿಸುತ್ತಿದ್ದರು. ಆಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಪಘಾತದಲ್ಲಿ ಆಕೆಯ ಸಂಬಂಧಿ ಅಪೇಕ್ಷಾ, ಚಾಲಕ ಶ್ರೀಕಾಂತ್, ಸಹನಟ ಚಂದ್ರಕಾಂತ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣಸ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ.
ನಟಿ ಪವಿತ್ರಾ ಜಯರಾಮ್ ಒಬ್ಬ ಮಗಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ. ಹೆಚ್ಚು ವಿದ್ಯಾಭ್ಯಾಸ ಇಲ್ಲದ ಕಾರಣ ಮನೆಗೆಲಸವನ್ನು ಮಾಡಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸೇಲ್ಸ್ ಗರ್ಲ್, ಲೈಬ್ರರಿ ಅಸಿಸ್ಟೆಂಟ್ ಆಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಆ ನಂತರ ಕನ್ನಡದ ನಿರ್ದೇಶಕರೊಬ್ಬರ ಬಳಿ ಸಹಾಯಕಿಯಾಗಿ ಸೇರಿಕೊಂಡರು. ಆ ಪರಿಚಯದೊಂದಿಗೆ, ಅವರು ಧಾರಾವಾಹಿಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಲು ಆರಂಭಿಸಿದ್ದರು.
ಆಕೆಗೆ ತೆಲುಗಿನಲ್ಲಿ 'ನಿನ್ನೇ ಪೆಲ್ಲಡತಾ' ಧಾರಾವಾಹಿಯಲ್ಲಿ ಮೊದಲಿಗೆ ಅವಕಾಶ ಸಿಕ್ಕಿತ್ತು. ಆದರೆ 'ತ್ರಿನಯನಿ' ಧಾರಾವಾಹಿಯ ತಿಲೋತ್ತಮಿ ಪಾತ್ರ ಹೆಚ್ಚು ಹೆಸರು ತಂದುಕೊಟ್ಟಿತ್ತು. ಹಾಗಾಗಿ ತೆಲುಗಿನಲ್ಲೇ ಹೆಚ್ಚು ಹೆಚ್ಚು ನಟಿಸಲು ಆರಂಭಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದ ಹೆಚ್ಚು ಜನಪ್ರಿಯತೆ ಸಾಧಿಸಿದ್ದರು.


Click it and Unblock the Notifications











