Year Ender 2025: ಈ ವರ್ಷ ಹಸೆಮಣೆ ಏರಿ ಸಂಭ್ರಮಿಸಿದ ಕನ್ನಡ ಕಿರುತೆರೆ, ಸಿನಿಮಾ ತಾರೆಯರಿವರು
ಮದುವೆ ಎನ್ನುವುದು ಎಲ್ಲರ ಜೀವನದಲ್ಲಿಯೂ ಬರುವ ಒಂದು ಮಹತ್ವದ ಘಟ್ಟ. ಜವಾಬ್ದಾರಿಗಳು, ಸಂತೋಷ, ಮತ್ತು ಸವಾಲುಗಳಿಂದ ಕೂಡಿದ ಬಂಧ. ಎರಡು ಜೀವಗಳು ಒಂದಾಗಿ, ಜೀವನದ ಏರಿಳಿತಗಳನ್ನು ಎದುರಿಸುತ್ತಾ, ಪರಸ್ಪರ ಬೆಂಬಲವಾಗಿ ನಿಂತು ಸಾಧಿಸು ಹಾದಿ. ಈ ವರ್ಷ ಕನ್ನಡದ ಕೆಲ ಕಿರುತೆರೆ ಹಾಗೂ ಸಿನಿಮಾ ತಾರೆಯರು ಹೊಸ ಬಾಳಿಗೆ ಕಾಲಿಟ್ಟರು.
ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಕೆಲವರು ಮದುವೆ ಆಗಿದ್ದಾರೆ. ಮತ್ತೆ ಕೆಲವರು ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಸರಳವಾಗಿ ವಿವಾಹ ಆಗಿರುವವರು ಇದ್ದಾರೆ. ಅದ್ಧೂರಿಯಾಗಿ ಮದುವೆಯನ್ನು ಸಂಭ್ರಮಿಸಿದವರ ಪಟ್ಟಿ ಕೂಡ ದೊಡ್ಡದಿದೆ. ಈ ವರ್ಷ ಹಸೆಮಣೆ ಏರಿದವರಲ್ಲಿ ಕಿರುತೆರೆ ತಾರೆಯರೇ ಹೆಚ್ಚು.

ಧನಂಜಯ್- ಧನ್ಯತಾ
ಕಳೆದ ವರ್ಷವೇ ಎಂಗೇಜ್‌ಮೆಂಟ್ ಮಾಡಿಕೊಂಡು ನಟ ಧನಂಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು. ಈ ವರ್ಷ ಮೈಸೂರಿನಲ್ಲಿ ಅದ್ಧೂರಿಯಾಗಿ ಡಾಲಿ ಮದುವೆ ನಡೆಯಿತು. ವೈದ್ಯೆ ಧನ್ಯತಾ ಅವರನ್ನು ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಧನು ಮದುವೆಯಾಗಿದ್ದಾರೆ. ಫೆಬ್ರವರಿ 16, 2025 ರಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಕಲ್ಯಾಣ ಮಹೋತ್ಸವ ನೆರವೇರಿತ್ತು.
ಅನುಶ್ರೀ- ರೋಷನ್
ನಟಿ, ಜನಪ್ರಿಯ ನಿರೂಪಕಿ ಅನುಶ್ರೀ ಕೂಡ ಈ ವರ್ಷ ಹಸೆಮಣೆ ಏರಿದ್ದಾರೆ. ರೋಷನ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ನಗರದ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಆಗಸ್ಟ್ 28, 2025 ರಂದು ಸರಳವಾಗಿ ಮದುವೆ ನಡೆಯಿತು. ಮೊದಲಿಗೆ ಮಂತ್ರಮಂಗಲ್ಯಕ್ಕೆ ಬಯಸಿದ್ದ ಅನುಶ್ರೀ ಬಳಿಕ ಕೊಂಚ ಅದ್ಧೂರಿಯಾಗಿ ಮದುವೆಗೆ ಒಪ್ಪಿದ್ದರು.

ಲೇಖಾಚಂದ್ರ ಮದುವೆ
'ವಜ್ರಕಾಯ', 'ಕೃಷ್ಣ ರುಕ್ಕು', 'ನಮೋ ಭೂತಾತ್ಮ 2', 'ಫೈಟರ್', 'ಅಬ್ಬರ' ಸಿನಿಮಾಗಳಲ್ಲಿ ನಟಿಸಿದ್ದ ನಟಿ ಲೇಖಾಚಂದ್ರ ಕೂಡ ಇದೇ ವರ್ಷ ಹೊಸಬಾಳಿಗೆ ಕಾಲಿಟ್ಟರು. ನಿರ್ಮಾಪಕ ಶ್ರೇಯಸ್ ದರ್ಶನ್ ಜೊತೆ ಅಕ್ಟೋಬರ್ 19ರಂದು ಲೇಖಾ ಮದುವೆ ನಡೆದಿತ್ತು.
ನಟ ಶ್ರೀರಾಮ್ ಮದುವೆ
'ಹೊಂದಿಸಿ ಬರೆಯಿರಿ' ಕೆಲ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ನಟ ಶ್ರೀರಾಮ್ ಕೂಡ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದಾರೆ. ನವೆಂಬರ್ 30ರಂದು ಸ್ಫೂರ್ತಿ ಎಂಬುವವರ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.
ಅರ್ಚನಾ ಕೊಟ್ಟಿಗೆ ಮದುವೆ
ಕ್ರಿಕೆಟಿಗ ಬಿ. ಆರ್ ಶರತ್ ಜೊತೆ ಕನ್ನಡ ಸಿನಿಮಾ ನಟಿ ಅರ್ಚನಾ ಕೊಟ್ಟಿಗೆ ಮದುವೆ ಕೂಡ ಇದೇ ವರ್ಷ ನೆರವೇರಿತ್ತು. ಏಪ್ರಿಲ್ 23ರಂದು ಜೋಡಿ ಸಪ್ತಪದಿ ತುಳಿದಿತ್ತು. ಅರಣ್ಯಕಾಂಡ, ವಾಸು ನಾನ್ ಪಕ್ಕಾ ಕಮರ್ಷಿಯಲ್, ಡಿಯರ್ ಸತ್ಯಾ, ಯೆಲ್ಲೋ ಗ್ಯಾಂಗ್ಸ್, ವಿಜಯಾನಂದ ಚಿತ್ರಗಳಲ್ಲಿ ಅರ್ಚನಾ ನಟಿಸಿದ್ದಾರೆ.
ವೈಷ್ಣವಿ- ಅನುಕೂಲ್ ಮಿಶ್ರಾ
ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿಗಳ ಖ್ಯಾತಿಯ ನಟಿ ವೈಷ್ಣವಿ ಗೌಡ ಜೂನ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉತ್ತರ ಭಾರತ ಮೂಲದ ಅನುಕೂಲ್ ಮಿಶ್ರಾ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಕಲ್ಯಾಣ ಮಹೋತ್ಸವ ನೆರವೇರಿತ್ತು.
ರಜಿನಿ- ಅರುಣ್
'ಅಮೃತವರ್ಷಿಣಿ' ಧಾರಾವಾಹಿ ಖ್ಯಾತಿಯ ನಟಿ ರಜನಿ ಹಾಗೂ ಜಿಮ್ ಕೋಚ್ ಅರುಣ್ ವೆಂಕಟೇಶ್ ನವೆಂಬರ್ 10ರಂದು ಸಪ್ತಪದಿ ತುಳಿದರು. 7 ವರ್ಷಗಳ ಕಾಲ ಇಬ್ಬರೂ ಪ್ರೀತಿಸಿ ಕೊನೆಗೆ ಪೋಷಕರ ಒಪ್ಪಿಗೆ ಪಡೆದು ಪರಸ್ಪರ ಕೈ ಹಿಡಿದರು. ಇಬ್ಬರೂ ರೀಲ್ಸ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ಇನ್ನುಳಿದಂತೆ 'ಪದ್ಮಾವತಿ' ಧಾರಾವಾಹಿ ನಟಿ ದೀಪ್ತಿ ಮಾನೆ, 'ಅಮೃತಧಾರೆ' ಧಾರಾವಾಹಿ ಖ್ಯಾತಿಯ ಮೇಘಾ ಶೆಣೈ, ನಾಗಿಣಿ ಧಾರಾವಾಹಿಯ ನಟ ಅರುಣ್‌ಕುಮಾರ್, ಮಿಥುನರಾಶಿ ಧಾರಾವಾಹಿ ನಟ ಯದುಶ್ರೇಷ್ಟ, ಲಕ್ಷ್ಮಿಬಾರಮ್ಮ ಧಾರಾವಾಹಿಯ ನಟ 'ಶಮಂತ್ ಗೌಡ', ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಸೇರಿ ಹಲವು ಕಿರುತೆರೆ ನಟ, ನಟಿಯರು ಈ ವರ್ಷ ಮದುವೆ ಸಂಭ್ರಮದಲ್ಲಿ ಮಿಂದೆದ್ದರು.


Click it and Unblock the Notifications