Nandi Awards: ಡಿಸೆಂಬರ್ 6ಕ್ಕೆ ಕನ್ನಡದ ಮೊದಲ 'ನಂದಿ ಫಿಲ್ಮಂ ಅವಾರ್ಡ್' ಸಮಾರಂಭ
ನಂದಿ ಅವಾರ್ಡ್ಸ ಎಂದರೇ ತಕ್ಷಣ ನೆನಪಿಗೆ ಬರುವುದು ತೆಲುಗು ಚಿತ್ರರಂಗ. ಸೈಮಾ, ಫಿಲ್ಮಂಫೇರ್, ಐಫಾ, ಚಿತ್ತಾರ ಸೇರಿದಂತೆ ಹಲವು ಪ್ರಶಸ್ತಿಗಳಿದ್ದರೂ, ನಂದಿ ರಾಜ್ಯ ಪ್ರಶಸ್ತಿಗೆ ಅದರದ್ದೇ ಒಂದು ತೂಕವಿದೆ. ಆದರೆ, ಕನ್ನಡದಲ್ಲಿ ಇಂತಹ ಒಂದು ಪ್ರಶಸ್ತಿ ನೀಡುತ್ತಿಲ್ಲ ಎಂಬ ಕೊರಗು ಆಗಾಗ್ಗೆ ಕೇಳಿ ಬರುತ್ತಿತ್ತು. ಈಗ ಅದಕ್ಕೆ ಪರಿಹಾರ ಸಿಕ್ಕಿದೆ.
ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ. ನಂದಿ ಪ್ರಶಸ್ತಿ ಲಾಂಛನವನ್ನು ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದ್ದರು. ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಮಬಂಧವಿಲ್ಲ. ಎರಡು ಬೇರೆ ಬೇರೆ.

ಕನ್ನಡದ ಪ್ರಶಸ್ತಿಗೂ ನಂದಿ ಪ್ರಶಸ್ತಿ ಎನ್ನಲು ಕಾರಣ
ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ 'ನಂದಿ' ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.
ನಂದಿ ಪ್ರಶಸ್ತಿ ಪ್ರದಾನ ಸಮಾರಂಭ
ನಂದಿ ಅವಾರ್ಡ್ಸ್ ಘೊಷಣೆಯಾಗಿರುವುದು ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆಯಾಗಿದ್ದು, ಚೊಚ್ಚಲ ನಂದಿ ಪ್ರಶಸ್ತಿಯನ್ನು ಕನ್ನಡದ ಯಾವೆಲ್ಲಾ ಕಲಾವಿದರು, ತಂತ್ರಜ್ಞರು ಪಡೆಯಬಹುದು ಎಂಬ ಚರ್ಚೆ ಆರಂಭವಾಗಿದೆ. ಇನ್ನು, ನಂದಿ ಅವಾರ್ಡ್ ಯಾವಾಗ ನಡೆಯಲಿದೆ...? ಎಷ್ಟು ವಿಭಾಗಗಳಲ್ಲಿ..? ಎಷ್ಟು ಪ್ರಶಸ್ತಿ ಎನ್ನುವ ವಿವರಗಳನ್ನು 'ನಂದಿ ಫಿಲ್ಮಂ ಅವಾರ್ಡ್' ಸಂಸ್ಥಾಪಕರ ತಂಡ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ 'ನಂದಿ ಫಿಲ್ಮಂ ಅವಾರ್ಡ್' ಸಂಸ್ಥಾಪರಾಗಿದ್ದಾರೆ. ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಅಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ.
2022ನೇ ಸಾಲಿನ ಸಿನಿಮಾಗಳಿಗೆ ಚೊಚ್ಚಲ ನಂದಿ ಅವಾರ್ಡ್
"ಕರ್ನಾಟಕ ನಂದಿ ಫಿಲ್ಮಂ ಅವಾರ್ಡ್-2023, ಕಳೆದ 2022ನೇ ಸಾಲಿನ ಸಿನಿಮಾಗಳಿಗೆ ಅನ್ವಯಿಸುತ್ತದೆ. ಸೌತ್ ಇಂಡಿಯಾದಲ್ಲಿ ನಂದಿ ಅವಾರ್ಡ್ ಎಂದು ನಡೆಯುತ್ತಿತ್ತು. 2016ರಲ್ಲಿ ಅದನ್ನು ನಿಲ್ಲಿಸಲಾಗಿದೆ. ತೆಲುಗಿನಲ್ಲಿ ನಂದಿ ಫಿಲ್ಮಂ ಅವಾರ್ಡ್ ನಡೆಯುತ್ತಿದೆ. ಕನ್ನಡ ಚಿತ್ರರಂಗಕ್ಕೆ ಪ್ರತ್ಯಕ್ಷವಾಗಿ ನಂದಿ ಅವಾರ್ಡ್ಸ್ ನೀಡಲಾಗುವುದು" ಎಂದು ನಿರ್ಮಾಪಕ ನಿತ್ಯಾನಂದ ಪ್ರಭು ತಿಳಿಸಿದ್ದಾರೆ.
'ನಂದಿ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾಗಳು, ಪ್ರಾದೇಶಿಕವಾಗಿ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಈ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಾಹಿತ್ಯ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ' ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ಕನ್ನಡದ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದ್ದು, ನಂದಿ ಅವಾರ್ಡ್ ಘೋಷಣೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ಡಿಸೆಂಬರ್ 6 ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಭಾಗಿಯಾಗಲಿದ್ದಾರೆ.


Click it and Unblock the Notifications











