ಮಾಸ್ ಲುಕ್‌ನಲ್ಲಿ 'ರಾನಿ'ಯಾಗಿ ಎಂಟ್ರಿ ಕೊಟ್ಟ 'ಕನ್ನಡತಿ'ಯ ಹೀರೊ ಕಿರಣ್ ರಾಜ್
ಕನ್ನಡಿಗರ ಜನಮನ ಗೆದ್ದಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದ ಕಿರಣ್ ರಾಜ್ ಈಗ ಸಿನಿಮಾಗಳಲ್ಲಿ ಫುಲ್ ಬ್ಯುಸಿ. ಕಿರಣ್ ಗ್ರೀನ್ ಸಿಗ್ನಲ್ ಕೊಟ್ಟಿರೋ ಸಿನಿಮಾಗಳು ಒಂದರ ಹಿಂದೊಂದು ಸೆಟ್ಟೇರುತ್ತಿವೆ. ಈಗ ಹೊಸ ಸಿನಿಮಾವೊಂದು ಹೊಸ ಪೋಸ್ಟರ್‌ನಿಂದ ಸದ್ದು ಮಾಡುತ್ತಿದೆ. ಅದುವೇ 'ರಾನಿ'.
'ಕನ್ನಡತಿ' ಸೀರಿಯಲ್ ಮುಗಿಯುತ್ತಿದ್ದಂತೆ ಕಿರಣ್ ರಾಜ್ ಸಿನಿಮಾಗಳಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರೋ ಕಿರಣ್ ರಾಜ್ ಈಗ 'ರಾನಿ'ಯಾಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರಾ? ಅನ್ನೋ ಕುತೂಹಲವಿದೆ.
'ರಾನಿ' ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ಹೊಚ್ಚ ಹೊಸ ಸಿನಿಮಾ. ಈ ಚಿತ್ರದಲ್ಲಿ ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಟೈಟಲ್ ಲಾಂಚ್‌ಗಾಗಿ ಕಿರಣ್ ರಾಜ್ ಹೊಸ ಸಾಹಸ ಮಾಡಿದ್ದರು. ದುಬೈಗೆ ಹೋಗಿ ಸ್ಕೈ ಡೈವ್ ಮಾಡುವ ಮೂಲಕ ಟೈಟಲ್ ಲಾಂಚ್ ಮಾಡಿದ್ದರು. ಈಗ ಇದೇ ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ.

ಕಿರಣ್ ರಾಜ್ 13,000 ಅಡಿ ಎತ್ತರದಿಂದ ಜಿಗಿದು ಟೈಟಲ್ ರಿಲೀಸ್ ಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿದ್ದರು. ಈಗ ರಿಲೀಸ್ ಆಗಿರುವ ಮಾಸ್ ಲುಕ್ ಪೋಸ್ಟರ್ ಕೂಡ ಎಲ್ಲೆಡೆ ಸದ್ದು ಮಾಡುತ್ತಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಈ ಮಾಸ್ ಲುಕ್ ಅನ್ನು ರಿಲೀಸ್ ಮಾಡಿದ್ದರು.
ಮಾಸ್ ಲುಕ್‌ನಲ್ಲಿ ಗಮನ ಸೆಳೆದಿರೋ ಕಿರಣ್ ರಾಜ್ ಈ ಸಿನಿಮಾದಲ್ಲಿ ಭರ್ಜರಿ ಫೈಟ್ಸ್ ಮಾಡಿದಾರೆ ಎನ್ನಲಾಗಿದೆ. ಅಂದ್ಹಾಗೆ 'ರಾನಿ' ಸಿನಿಮಾದಲ್ಲಿ ಸುಮಾರು 6 ಆಕ್ಷನ್ ಸೀಕ್ವೆನ್ಸ್ ಇವೆ. ಹೀಗಾಗಿ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಅಂತ ಗೆಸ್ ಮಾಡಬಹುದು.
'ರಾನಿ' ಸಿನಿಮಾಗಾಗಿ ಚಿತ್ರತಂಡ ಬೃಹತ್ ಆದ 7 ಸೆಟ್‌ಗಳನ್ನು ಹಾಕಿದ್ದಾರೆ. ಈಗಾಗಲೇ ಸುಮಾರು 5 ಸೆಟ್‌ಗಳಲ್ಲಿ ಚಿತ್ರಿಕರಣ ಕೂಡ ಮುಗಿದಿದೆಯಂತೆ. ಸುಮಾರು 60ರಷ್ಟು ಶೂಟಿಂಗ್ ಮುಗಿಸಿರೋ ಚಿತ್ರತಂಡ ಮುಂದಿನ ಹಂತದ ಚಿತ್ರೀಕರಣಕ್ಕೆ ರೆಡಿಯಾಗುತ್ತಿದೆ.
ಈ ಸಿನಿಮಾ ಕಿರಣ್ ರಾಜ್ ಜೊತೆ ರವಿಶಂಕರ್, ಮೈಕೋ ನಾಗರಾಜ್, ನಾಗತಿಹಳ್ಳಿ ಚಂದ್ರಶೇಖರ್, ಬಿ ಸುರೇಶ್, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪೃಥ್ವಿರಾಜ್, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೆಂದ್ರ ಆರಸ್, ಮನಮೋಹನ್ ರೈ ಮುಂತಾದವರ ನಟಿಸಿದ್ದಾರೆ.

"ಸಿಂಗಾರ ಸಿರಿಯೆ.." ಹಾಡು ಬರೆದಿರುವ ಪ್ರಮೋದ್ ಮರವಂತೆ ಈ ಸಿನಿಮಾದ ನಾಲ್ಕು ಹಾಡುಗಳನ್ನು ರಚಿಸಿದ್ದಾರೆ. ಮಣಿಕಾಂತ್ ಕದ್ರಿ ಟ್ಯೂನ್ ಹಾಕುತ್ತಿದ್ದಾರೆ. ಸೂಕ್ಷ್ಮ ಕಥೆಯುಳ್ಳ, ಪಕ್ಕ ಆಕ್ಷನ್ ಚಿತ್ರ ಇದಾಗಿದ್ದು, ಎಲ್ಲಾ ರಾಜ್ಯದಲ್ಲೂ ಕನ್ನಡದಲ್ಲೇ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.


Click it and Unblock the Notifications











