ರವಿಚಂದ್ರನ್ ಅಭಿನಯಕ್ಕೆ ಶಿವರಾಜ್‌ಕುಮಾರ್ ಧ್ವನಿ!
ಕನ್ನಡದಲ್ಲಿ ಚಿತ್ರರಂಗದಲ್ಲಿ 'ಕನ್ನಡಿಗ' ಎನ್ನುವ ಶೀರ್ಷಿಕೆಯಲ್ಲಿ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ಕನ್ನಡಿಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ನಟ ವಿ.ರವಿಚಂದ್ರನ್. ಈಗಾಗಲೇ ಕನ್ನಡಿಗ ಚಿತ್ರದಲ್ಲಿನ ರವಿಚಂದ್ರನ್ ಲುಕ್ ಅನಾವರಣಗೊಂಡಿದೆ. ವಿಶೇಷವಾದ ಲುಕ್‌ನಲ್ಲಿ ರವಿಚಂದ್ರನ್ ಗಮನ ಸೆಳೆದಿದ್ದಾರೆ.
ಚಿತ್ರದ ಟೈಟಲ್ 'ಕನ್ನಡಿಗ' ಇಲ್ಲಿ ರವಿಮಾಮ ಕನ್ನಡಿಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎನ್ನುವ ಕುತೂಹಲ ಮೂಡಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲು ಕೌತುಕತೆಯನ್ನು ಹುಟ್ಟುಹಾಕಿದೆ.
ಈಗ ಕನ್ನಡಿಗ ಸಿನಿಮಾದ ಗತ್ತು ಏನು ಎನ್ನುವುದನ್ನು ಹೇಳಲು ಹೊಸದೊಂದು ಹಾಡು ರಿಲೀಸ್ ಆಗಿದೆ. ಈ ಪವರ್ ಫುಲ್ ಹಾಡು ಸಿನಿಮಾದ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚಿಸುತ್ತದೆ.

ರವಿಚಂದ್ರನ್ ಅವರ ಚಿತ್ರಕ್ಕೆ ಹಾಡಿದ ಶಿವರಾಜ್‌ಕುಮಾರ್!
ಕನ್ನಡಿಗ ಸಿನಿಮಾ ಟೈಟಲ್ ಮೂಲಕವೇ ಗಮನ ಸೆಳೆದಿತ್ತು. ಈಗ ಪವರ್‌ಫುಲ್ ಹಾಡು ರಿಲೀಸ್ ಆಗಿದೆ. ಈ ಹಾಡು ಚಿತ್ರಕ್ಕೆ ದೊಡ್ಡ ಶಕ್ತಿ ಆಗಿ ನಿಲ್ಲುವ ಸೂಚನೆ ಕೊಟ್ಟಿದೆ. ಸದ್ಯ ಹಾಡಿನ ಲಿರಿಕಲ್ ವೀಡಿಯೋ ಮಾತ್ರ ರಿಲೀಸ್ ಆಗಿದೆ.
ಇದು ಚಿತ್ರದ ಟೈಟಲ್ ಟ್ರ್ಯಾಕ್. ಕನ್ನಡಿಗನ ಕುರಿತಾದ ಹಾಡು ಇದಾಗಿದೆ. ಕನ್ನಡಿಗನ ಬಗ್ಗೆ ಇರುವ ಈ ಹಾಡನ್ನು ನಟ ಶಿವರಾಜ್‌ಕುಮಾರ್ ಹಾಡಿದ್ದಾರೆ. ಶಿವರಾಜ್‌ಕುಮಾರ್ ಧ್ವನಿಯಲ್ಲಿ ಮೂಡಿ ಬಂದಿರೋ ಈ ಹಾಡು ಕೇಳುಗರ ಮೈ ನವಿರೇಳಿಸುವಂತಿದೆ. ಇದೇ ಮೊದಲ ಬಾರಿಗೆ ನಟ ಶಿವಣ್ಣ ಇಷ್ಟು ಅಗ್ರೆಸಿವ್ ಆಗಿ ಹಾಡಿದ್ದಾರೆ ಅನಿಸುತ್ತೆ. ಕನ್ನಡಿಗನ ಹೃದಯವನ್ನು ತಟ್ಟುವಂತಿದೆ ಹಾಡಿನ ದಾಟಿ.

ಸಂತೋಷ್ ಆನಂತ್ ರಾಮ್ ಸಾಹಿತ್ಯ, ರವಿ ಬಸ್ರೂರು ಸಂಗೀತ!
ನಿರ್ದೇಶಕ ಸಂತೋಷ್ ಆನಂದ್ ರಾಮ್ ಕನ್ನಡಿಗ ಹಾಡಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. 'ಸಿರಿಗನ್ನಡಂ ಏಳ್ಗೆ... ಕನ್ನಡಂ ಬಾಳ್ಗೆ... ಕನ್ನಡ ನಮ್ಮ ಪಾಲ್ಗೆ" ಎನ್ನುವ ಸಾಲುಗಳಿಂದ ಹಾಡು ಆರಂಭ ಆಗುತ್ತದೆ. ಈ ಸಾಲುಗಳು ಹಾಡಿನ ದೊಡ್ಡ ಶಕ್ತಿ ಆಗಿವೆ. ಇನ್ನೂ ಈ ಹಾಡಿಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತವನ್ನು ನೀಡಿದ್ದಾರೆ. ಜಾನಪದ ಸೊಗಡು ಈ ಹಾಡಿನಲ್ಲಿದೆ. ಶಿವಣ್ಣನ ಸ್ವರ, ಸಂತೋಷ್ ಆನಂದ್ ರಾಮ್ ಸಾಹಿತ್ಯ, ರವಿ ಬಸ್ರೂರು ಸಂಗೀತ, ರವಿಚಂದ್ರನ್ ಅಭಿನಯವನ್ನು ಒಳಗೊಂಡಿರುವ ಈ ಹಾಡು ಕೇಳುಗರನ್ನು ಬಡಿದೆಬ್ಬಿಸುವಂತಿದೆ.
ಕನ್ನಡದ ಕುರಿತಾಗಿ ಈ ಹಿಂದೆ ಸಾಕಷ್ಟು ಹಾಡುಗಳು ಬಂದಿವೆ. ಆ ಸಾಲಿಗೆ ಈ ಹಾಡು ಕೂಡ ಸೇರಿಕೊಳ್ಳುತ್ತದೆ. ಇದು ಕೇವಲ ಕನ್ನಡ ಭಾಷೆಗಾಗಿ ಮಾಡಿರುವ ಹಾಡು ಅಲ್ಲ. ಕನ್ನಡಿಗನಿಗಾಗಿ ಮಾಡಿರುವ ಹಾಡು ಎನಿಸುವಂತಿದೆ.

ಲಿಪಿಕಾರನ ಪಾತ್ರದಲ್ಲಿ ನಟ ರವಿಚಂದ್ರನ್!
ಇನ್ನು ಶಿವರಾಜ್‌ಕುಮಾರ್ ಅವರು ಧ್ವನಿ ನೀಡಿರೋದು ರವಿಚಂದ್ರನ್ ಅವರ ಪಾತ್ರಕ್ಕೆ. ಈ ಚಿತ್ರದಲ್ಲಿ ರವಿಚಂದ್ರನ್ ಒಬ್ಬ ಲಿಪಿಕಾರನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಿಲೀಸ್ ಆಗಿರುವುದು ಲಿರಿಕಲ್ ವೀಡಿಯೋ ಆದ ಕಾರಣ ರವಿಚಂದ್ರನ್ ಹಾಡಿನ ಕೆಲವು ಭಾಗಗಳಲ್ಲಿ ಮಾತ್ರ ಬಂದು ಹೋಗುತ್ತಾರೆ. ಇನ್ನುಳಿದಂತೆ ಶಿವರಾಜ್‌ಕುಮಾರ್ ಹಾಡಿರು ಹಾಡಿನ ಮೇಕಿಂಗ್ ಮಾತ್ರ ರಿವೀಲ್ ಮಾಡಲಾಗಿದೆ.
ಚಿತ್ರದಲ್ಲಿ ರವಿಚಂದ್ರನ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲ್ಯಾಷ್‌ಬ್ಯಾಕ್ ಕಥೆಯಲ್ಲಿ ರವಿಚಂದ್ರನ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಲಿಪಿಕಾರನಾಗಿ ರವಿಚಂದ್ರನ್ ಮೋಡಿ ಮಾಡಲು ಸಿದ್ದವಾಗಿದ್ದಾರೆ.

ಚಿತ್ರದ ಬಹುತೇಕ ಕೆಲಸಗಳು ಮುಕ್ತಾಯ!
'ಕನ್ನಡಿಗ' ಸಿನಿಮಾ ಸ್ಥಳೀಯ ಸಂಸ್ಕೃತಿಯ ಕಥಾಹಂದರವನ್ನು ಹೊಂದಿದೆ. ಚಿತ್ರಕ್ಕೆ ಸೆನ್ಸಾರ್ ಕೂಡ ಮುಗಿಸಿದೆ. ಬಿ.ಎಂ ಗಿರಿರಾಜ್ ನಿರ್ದೇಶನ, ಎನ್.ಎಸ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಮೊದಲ ಲಾಕ್ ಡೌನ್ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭಗೊಂಡಿತ್ತು. ಈಗ ಚಿತ್ರದ ಬಹುತೇಕ ಕೆಲಸಗಳು ಮುಗಿದಿವೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಲಿದೆ.


Click it and Unblock the Notifications











