'ಸಲಾರ್' ಕನ್ನಡ ವರ್ಷನ್ ಕಥೆ ಏನಾಯ್ತು? ಹೊಂಬಾಳೆ ಫಿಲ್ಮ್ಸ್ ಮೇಲೆ ನೆಟ್ಟಿಗರ ಅಸಮಾಧಾನ
ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಸಲಾರ್' ಸಿನಿಮಾ ಈ ವಾರವೇ ತೆರೆಗಪ್ಪಳಿಸಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆಯಾಗುತ್ತಿದೆ. ಪ್ರಭಾಸ್- ಪ್ರಶಾಂತ್ ನೀಲ್ ಕಾಂಬಿನೇಷನ್ ಮ್ಯಾಜಿಕ್ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕರ್ನಾಟಕದಲ್ಲೂ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಬೆಂಗಳೂರಿನಲ್ಲಿ ಮೊದಲ ದಿನ 500ಕ್ಕೂ ಅಧಿಕ ಶೋಗಳು 'ಸಲಾರ್' ಚಿತ್ರಕ್ಕೆ ಸಿಕ್ಕಿದೆ. ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಸಾಕಷ್ಟು ಶೋಗಳು ಸೋಲ್ಡೌಟ್ ಆಗಿದ್ದು 150 ಕ್ಕೂ ಅಧಿಕ ಶೋಗಳು ಫಾಸ್ಟ್‌ಫಿಲ್ಲಿಂಗ್ ಇದೆ. ಇನ್ನು ನಗರದಲ್ಲೇ ಚಿತ್ರಕ್ಕೆ 100ಕ್ಕೂ ಹೆಚ್ಚು ಅರ್ಲಿ ಮಾರ್ನಿಂಗ್ ಶೋಗಳು ಸಿಕ್ಕಿರುವುದು ವಿಶೇಷ. ತೆಲುಗು ಜೊತೆಗೆ ಕನ್ನಡ ಹಾಗೂ ಹಿಂದಿ ವರ್ಷನ್ ಶೋಗಳನ್ನು ಹಾಕಲಾಗಿದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಇದರಿಂದಲೇ ಕೋಟಿ ಕೋಟಿ ಕಲೆಕ್ಷನ್ ಆದಂತಾಂಗಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕರ್ನಾಟಕದಲ್ಲಿ 'ಸಲಾರ್' ಚಿತ್ರವನ್ನು ವಿತರಣೆ ಮಾಡುತ್ತಿದೆ. ಹಾಗಾಗಿ ಹೆಚ್ಚು ಕನ್ನಡ ಶೋಗಳು ಸಿಗುತ್ತವೆ ಎನ್ನುವ ನಿರೀಕ್ಷೆಯಿತ್ತು. ಮೊದಲಿನಿಂದಲೂ ಕನ್ನಡ ಡಬ್ ವರ್ಷನ್ ಪ್ರದರ್ಶನಕ್ಕೆ ನಿರ್ಮಾಪಕರು, ವಿತರಕರು, ಥಿಯೇಟರ್ ಮಾಲೀಕರು ಹಿಂದೇಟು ಹಾಕುತ್ತಾ ಬರುತ್ತಿದ್ದಾರೆ. ಆದರೆ 'ಸಲಾರ್' ರೀತಿಯ ದೊಡ್ಡ ಸಿನಿಮಾ ಕರ್ನಾಟಕದಲ್ಲಿ ಡಬ್ ಸಿನಿಮಾಗಳಿಗೆ ಮಹತ್ವ ಬರುವಂತೆ ಮಾಡುತ್ತದೆ ಎನ್ನುವ ನಿರೀಕ್ಷೆಯಿದೆ.
ಈ ಹಿಂದೆ ರಾಜಮೌಳಿ ನಿರ್ದೇಶನದ 'RRR', ರಜನಿಕಾಂತ್ 'ಜೈಲರ್' ಹಾಗೂ ದಳಪತಿ ವಿಜಯ್ 'ಲಿಯೋ' ಚಿತ್ರಗಳ ಕನ್ನಡ ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇಂತಹ ಸಮಯದಲ್ಲಿ 'ಸಲಾರ್' ಚಿತ್ರವನ್ನು ಕನ್ನಡದಲ್ಲಿ ಹೊಂಬಾಳೆ ಸಂಸ್ಥೆ ದೊಡ್ಡದಾಗಿ ರಿಲೀಸ್ ಮಾಡಬೇಕು ಎನ್ನುವುದು ಕನ್ನಡಿಗರ ಆಗ್ರಹವಾಗಿದೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 'ಸಲಾರ್' ಚಿತ್ರವನ್ನು ಉತ್ತಮ ಗುಣಮಟ್ಟದಲ್ಲೇ ಕನ್ನಡಕ್ಕೆ ಡಬ್ ಮಾಡಲಾಗಿದೆ. ಪ್ರಭಾಸ್ ಪಾತ್ರಕ್ಕೆ ವಸಿಸ್ಠ ಸಿಂಹ ಡಬ್ ಮಾಡಿದ್ದಾರೆ. ಇಂತಹ ದೊಡ್ಡ ಸಿನಿಮಾ ದೊಡ್ಡ ಮಟ್ಟದಲ್ಲಿ ರಾಜ್ಯದ ಮೂಲೆ ಮೂಲೆ ತಲುಪುತ್ತದೆ. ಕನ್ನಡದಲ್ಲಿ ಹೆಚ್ಚು ಶೋ ಕೊಟ್ಟರೆ ಹೆಚ್ಚು ಜನ ನೋಡುವ ಸಾಧ್ಯತೆಯಿದೆ. ಆದರೆ ಸದ್ಯಕ್ಕೆ ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಬೆಂಗಳೂರಿನಲ್ಲಿ 'ಸಲಾರ್' ಕನ್ನಡ ವರ್ಷನ್‌ಗೆ 8 ಶೋಗಳು ಮಾತ್ರ ಸಿಕ್ಕಿದೆ.
ಓರಾಯನ್ ಮಾಲ್‌ನಲ್ಲಿ ಎರಡು ಶೋ ಬುಕ್ಕಿಂಗ್ ಫಾಸ್ಟ್ ಫಿಲ್ಲಿಂಗ್ ಇದೆ. ಇನ್ನು ರಾಜ್ಯದ ಎಲವೆಡೆ ಬೆರಳೆಣಿಕೆಯಷ್ಟು ಶೋಗಳನ್ನು ಕೊಡಲಾಗಿದೆ. ಹುಬ್ಬಳ್ಳಿಯಂತಹ ಕನ್ನಡಿಗರು ಹೆಚ್ಚು ಇರುವ ಭಾಗಗಳಲ್ಲೂ ತೆಲುಗು, ಹಿಂದಿ ವರ್ಷನ್ ಶೋಗಳು ಕೊಟ್ಟಿದ್ದಾರೆ. ಕನ್ನಡ ಶೋ ಯಾಕೆ ಕೊಟ್ಟಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ. ಮತ್ತೆ ಕೆಲವರು ಕನ್ನಡದಲ್ಲಿ ಬಿಡುಗಡೆ ಮಾಡಿದರೆ ಮಾತ್ರ ಸಿನಿಮಾ ನೋಡುತ್ತೇವೆ ಎಂದು ಹೇಳುತ್ತಿದ್ದಾರೆ.
'ಸಲಾರ್' ಪ್ರೀಮಿಯರ್ ಶೋ, ಮಿಡ್‌ನೈಟ್ ಶೋ ಇರುತ್ತಾ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಬೆಳಗ್ಗೆ 5 ಗಂಟೆಗೂ ಮುನ್ನ ಸಾಧ್ಯವಾದರೆ ಸಿನಿಮಾ ನೋಡಬೇಕು ಎಂದು ಕೆಲವರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
'ಉಗ್ರಂ' ಕಥೆಯನ್ನೇ ಕೊಂಚ ಬದಲಿಸಿ ದೊಡ್ಡದಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದು ಕೆಲವರ ವಾದ. ಈಗಾಗಲೇ ಚಿತ್ರದ ಸ್ಯಾಂಪಲ್ಸ್ ಹಿಟ್ ಆಗಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚುವಂತಾಗಿದೆ. ಇನ್ನು ಶಾರುಖ್ ಖಾನ್ 'ಡಂಕಿ' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದ್ದು ಬಾಕ್ಸಾಫೀಸ್‌ನಲ್ಲಿ ಎರಡೂ ಸಿನಿಮಾಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.


Click it and Unblock the Notifications











