ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಜವಾನ್ ಚಿತ್ರತಂಡ; ಕನ್ನಡಿಗರು ಕಿಡಿಕಾರುವುದಂತೂ ಫಿಕ್ಸ್!
ಮೊನ್ನೆ ( ಜುಲೈ 10 ) ಬಾಲಿವುಡ್ ಕಿಂಗ್ ಶಾರುಖ್ ಖಾನ್ ನಟನೆಯ ಮುಂದಿನ ಚಿತ್ರ ಜವಾನ್‌ನ ಟ್ರೈಲರ್ ಅನ್ನು ಪ್ರಿವ್ಯೂ ಹೆಸರಿನ ಅಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ತಮಿಳು ನಿರ್ದೇಶಕ ಅಟ್ಲಿ ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಾಲಿವುಡ್ ಪ್ರವೇಶ ಮಾಡಿದ್ದು, ಅತ್ತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಹ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.
ಇನ್ನು ಚಿತ್ರದ ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರಿಗೆ ಹಾಗೂ ಶಾರುಖ್ ಖಾನ್ ಅಭಿಮಾನಿಗಳಿಗೆ ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. 2 ನಿಮಿಷ 12 ಸೆಕೆಂಡುಗಳ ನಾನ್‌ಸ್ಟಾಪ್ ಗೂಸ್‌ಬಂಪ್ಸ್ ದೃಶ್ಯಗಳನ್ನೊಳಗೊಂಡ ಟ್ರೈಲರ್ ಇದಾಗಿದ್ದು ಬಿಡುಗಡೆಗೊಂಡ ಬಳಿಕ ಸಾಮಾಜಿಕ ಜಾಲತಾಣದ ತುಂಬಾ ಜವಾನ್ ಜಪ ಶುರುವಾಗಿತ್ತು.

ಈ ವರ್ಷದ ಆರಂಭದಲ್ಲಿ ಪಠಾಣ್ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಕೊಳ್ಳೆ ಹೊಡೆದ ಶಾರುಖ್ ಖಾನ್ ನಟನೆಯ ಮುಂದಿನ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಮಣಿ ಸಹ ಚಿತ್ರದ ತಾರಾಗಣದಲ್ಲಿದ್ದಾರೆ.
ಹೀಗೆ ದೊಡ್ಡ ತಾರಾಗಣ ಹಾಗೂ ವೈಭವದ ಆಕ್ಷನ್ ದೃಶ್ಯಗಳಿಂದ ಕೂಡಿದ ಟ್ರೈಲರ್‌ನಿಂದ ಸಿನಿ ರಸಿಕರ ಗಮನ ಸೆಳೆದ ಜವಾನ್ ಟ್ರೈಲರ್‌ನಲ್ಲಿನ ಕೆಲ ದೃಶ್ಯಗಳಿಂದ ಹೀನಾಯವಾಗಿ ಟ್ರೋಲ್‌ಗೂ ಸಹ ಒಳಗಾಗಿತ್ತು. ಹೌದು, ಜವಾನ್ ಚಿತ್ರದ ಟ್ರೈಲರ್‌ನಲ್ಲಿ ಈಗಾಗಲೇ ಬಂದು ಹೋಗಿರುವ ಬೇರೆ ಚಿತ್ರಗಳಿಂದ ಪ್ರೇರೇಪಿತರಾಗಿ ಚಿತ್ರೀಕರಿಸಿದ ದೃಶ್ಯಗಳಿದ್ದವು.
ಈ ಕಾರಣಕ್ಕಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಜವಾನ್ ಇದೀಗ ಮತ್ತೊಂದು ದೊಡ್ಡ ಕಾರಣಕ್ಕೆ ಟೀಕೆಗೊಳಗಾಗಿದೆ. ಹೌದು, ಜವಾನ್ ಚಿತ್ರವನ್ನು ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಲಾಗ್ತಿಲ್ಲ ಎಂಬ ವಿಷಯ ಇದೀಗ ಕನ್ನಡ ಹಾಗೂ ಮಲಯಾಳಂ ಸಿನಿ ರಸಿಕರ ಕೋಪಕ್ಕೆ ಕಾರಣವಾಗಿದೆ.
ಅಂದು ಟ್ರೈಲರ್ ಅನ್ನು ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಮಾತ್ರ ಬಿಡುಗಡೆ ಮಾಡಿದ್ದ ಜವಾನ್ ಚಿತ್ರತಂಡ ಇದೀಗ ಹೊಸದೊಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ಅನ್ನೂ ಸಹ ಕೇವಲ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇಲ್ಲಿಯೂ ಸಹ ಕನ್ನಡ ಹಾಗೂ ಮಲಯಾಳಂ ಭಾಷೆಗಳ ಕಡೆಗಣನೆ ಆಗಿದೆ ಎಂದು ಪ್ರೇಕ್ಷಕರು ಕಿಡಿಕಾರುತ್ತಿದ್ದಾರೆ.
ಇನ್ನು ಜವಾನ್ ಚಿತ್ರತಂಡ ಬಿಡುಗಡೆ ಮಾಡಿರುವ ಈ ಹೊಸ ಪೋಸ್ಟರ್‌ನಲ್ಲಿ ತಲೆಕೂದಲಿಲ್ಲದ ಶಾರುಖ್ ಖಾನ್ ಮಾಸ್ ಲುಕ್ ಅನ್ನು ಬಳಸಿ ಎಡಿಟ್ ಮಾಡಲಾಗಿದ್ದು, ಚಿತ್ರ ಸೆಪ್ಟೆಂಬರ್ 7ರಂದು ಬಿಡುಗಡೆಯಾಗಲಿದೆ ಎಂದೂ ಸಹ ಬರೆಯಲಾಗಿದೆ. ಇದಕ್ಕೂ ಸರಿಯಾಗಿ ವಾರದ ಹಿಂದೆ ಅಂದರೆ ಸೆಪ್ಟೆಂಬರ್ 1ಕ್ಕೆ ಕನ್ನಡದ ಬಹು ನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ತೆರೆಗೆ ಬರಲಿದೆ. ಹೀಗಾಗಿ ಜವಾನ್ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೇಲೆ ಪ್ರಭಾವ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಕನ್ನಡ ಸಿನಿ ರಸಿಕರು ಜವಾನ್ ಚಿತ್ರ ಕನ್ನಡದಲ್ಲಿಯೂ ಸಹ ಬಿಡುಗಡೆಗೊಳ್ಳುತ್ತಿಲ್ಲ. ಇದು ಸರಿಯಲ್ಲ, ಎಲ್ಲರೂ ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು ಬೆಂಬಲಿಸಿ, ಕನ್ನಡ ಚಿತ್ರವನ್ನು ಉಳಿಸಿ ಎಂದು ಈಗಲೇ ಎಚ್ಚರಿಸಿದ್ದಾರೆ.


Click it and Unblock the Notifications











