'ಕಾಂತಾರ- 1' ಆರ್ಭಟದ ಬಳಿಕ ಈ ವಾರ ತೆರೆಗಪ್ಪಳಿಸ್ತಿರೋ ಕನ್ನಡ ಚಿತ್ರಗಳ ಲಿಸ್ಟ್
ಕಳೆದೊಂದು ತಿಂಗಳಿಂದ ಎಲ್ಲೆಲ್ಲೂ 'ಕಾಂತಾರ- 1' ಸಿನಿಮಾ ದರ್ಬಾರ್ ಜೋರಾಗಿತ್ತು. ಪರಭಾಷೆ ಸಿನಿಮಾಗಳಿಗೂ ಜಗ್ಗದೇ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕರ್ನಾಟಕದಲ್ಲೇ 200 ಕೋಟಿ ರೂ. ಕಲೆಕ್ಷನ್ ಮಾಡಿ ರಿಷಬ್ ಶೆಟ್ಟಿ ಸಿನಿಮಾ ದಾಖಲೆ ಬರೆದಿದೆ. 'ಕಾಂತಾರ- 1' ಚಿತ್ರಕ್ಕೆ ಹೆದರಿ ಕನ್ನಡದ ಯಾವುದೇ ದೊಡ್ಡ ಸಿನಿಮಾ ಕಳೆದ 4 ವಾರಗಳಲ್ಲಿ ಬಿಡುಗಡೆ ಆಗ್ಲಿಲ್ಲ.
ಅಂತೂ 'ಕಾಂತಾರ- 1' ಕಿಚ್ಚು ಕಮ್ಮಿ ಆಗಿದೆ. ಈ ಶುಕ್ರವಾರವೇ(ಅಕ್ಟೋಬರ್ 31) ಸಿನಿಮಾ ಓಟಿಟಿಗೂ ಬರ್ತಿದೆ. ನಿಧಾನವಾಗಿ ಕನ್ನಡದ ಬೇರೆ ಸಿನಿಮಾಗಳು ಚಿತ್ರಮಂದಿರಗಳ ಕಡೆ ಮುಖ ಮಾಡ್ತಿವೆ. ಪರಭಾಷೆಯ ಕೆಲ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗ್ತಿವೆ. ಆ ಸಿನಿಮಾಗಳ ಲಿಸ್ಟ್ ಮುಂದೆ ಇದೆ ಓದಿ.

1. ಬ್ರ್ಯಾಟ್
ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್' ಚಿತ್ರಕ್ಕೆ ಈ ವಾರವೇ ಬಿಡುಗಡೆ ಭಾಗ್ಯ ಸಿಕ್ತಿದೆ. ಈಗಾಗಲೇ ಪೇಯ್ಡ್ ಪ್ರೀಮಿಯರ್ ಶೋಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸದಭಿರುಚಿ ಚಿತ್ರಗಳ ಸರದಾರ ಶಶಾಂಕ್ ಈ ಬಾರಿ ಮತ್ತೊಂದು ವಿಭಿನ್ನ ಕಥೆ ಹೊತ್ತು ಬರ್ತಿದ್ದಾರೆ. ಕಿಚ್ಚ ಸುದೀಪ್ ಟ್ರೈಲರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದರು. ಮನೀಷಾ, ಅಚ್ಯುತ್ ಕುಮಾರ್, ರಮೇಶ್ ಇಂದಿರಾ ಹಾಗೂ ಡ್ರಾಗನ್ ಮಂಜು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ.
'ಬ್ರ್ಯಾಟ್' ಅಂದ್ರೆ ತರ್ಲೆ, ದಾರಿ ತಪ್ಪಿದವ ಎನ್ನುವ ಅರ್ಥ ಇದೆ. ಈ ಚಿತ್ರದ ನಾಯಕನದ್ದು ಅಂಥದ್ದೇ ಪಾತ್ರ. ಶಾಲಾ ದಿನಗಳಲ್ಲಿ ಆತನನ್ನು ಶಿಕ್ಷಕಿ 'ಬ್ರ್ಯಾಟ್' ಎಂದು ಕರೆಯುತ್ತಾಳೆ. ಮುಂದೆ ಆತನ ಜರ್ನಿ ಹೇಗೆ ಸಾಗುತ್ತದೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಕ್ರಿಕೆಟ್ ಬೆಟ್ಟಿಂಗ್ ವಿಚಾರವೂ ಚಿತ್ರದಲ್ಲಿದೆ. ನಟ ಕೃಷ್ಣ ಒಳ್ಳೆ ಕ್ರಿಕೆಟ್ ಆಟಗಾರ. ಈ ಚಿತ್ರದಲ್ಲಿ ಕೂಡ ಮೈದಾನಕ್ಕಿಳಿದು ಬ್ಯಾಟ್ ಬೀಸಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

2. ಕೋಣ
ಕೋಮಲ್ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ಸಿನಿಮಾ ಇದು. ತನಿಷಾ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಹ ಸಿಕ್ಕಿದೆ. ಕೀರ್ತಿರಾಜ್, ತುಕಾಲಿ ಸಂತು, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಮಂಜು ಪಾವಗಢ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ನೈಜ ಘಟನೆ ಆಧರಿಸಿ ಹರಿಕೃಷ್ಣ ಎಂಬುವವರು 'ಕೋಣ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ, ವೀನಸ್ ನಾಗರಾಜಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಈ ಚಿತ್ರದಲ್ಲಿದೆ.
3. ಬಾಹುಬಲಿ: ದಿ ಎಪಿಕ್
ದಶಕದ ಹಿಂದೆ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಎರಡು ಭಾಗಗಳಾಗಿ ತೆರೆಗೆ ಬಂದು ಗೆದ್ದಿತ್ತು. ಇದೀಗ ಎರಡೂ ಚಿತ್ರವನ್ನು ಒಟ್ಟಿಗೆ ಸೇರಿಸಿ ಎಡಿಟ್ ಮಾಡಿ ಮತ್ತೆ ಬಿಡುಗಡೆ ಮಾಡುತ್ತಿದ್ದಾರೆ. 'ಬಾಹುಬಲಿ: ದಿ ಎಪಿಕ್' ಹೆಸರಿನಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ವಿದೇಶಗಳಲ್ಲಿ ಪ್ರೀಮಿಯರ್ ಶುರುವಾಗಿದೆ.
'ಬಾಹುಬಲಿ: ದಿ ಬಿಗಿನಿಂಗ್' ಹಾಗೂ 'ಬಾಹುಬಲಿ: ದಿ ಕನ್‌ಕ್ಲೂಷನ್' ಚಿತ್ರಗಳನ್ನು ಒಟ್ಟಿಗೆ ಸೇರಿಸಿದರೆ 5 ಗಂಟೆ 27 ನಿಮಿಷ ಕಾಲಾವಧಿ ಇದೆ. ಅದನ್ನು ರಾಜಮೌಳಿ 3 ಗಂಟೆ 43 ನಿಮಿಷಕ್ಕೆ ಎಡಿಟ್ ಮಾಡಿದ್ದಾರೆ. ಕೆಲ ಹಾಡುಗಳನ್ನು ಸನ್ನಿವೇಶಗಳನ್ನು ಕತ್ತರಿಸಿದ್ದಾರೆ. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.
10 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆ ಅವಕಾಶ ಇರಲಿಲ್ಲ. ಹಾಗಾಗಿ ಬಾಹುಬಲಿ ಸರಣಿ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿರಲಿಲ್ಲ. ಆದರೆ ಈಗ ಡಬ್ಬಿಂಗ್ ಮಾಡಿ ರಿಲೀಸ್ ಮಾಡಬಹುದು. 'ಬಾಹುಬಲಿ: ದಿ ಎಪಿಕ್' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ತೆರೆಗೆ ತರುತ್ತಿರುವುದು ವಿಶೇಷ.


Click it and Unblock the Notifications











