'ಕಾಂತಾರ- 1' ನೋಡಿ ಪ್ರಭಾಸ್, ಯಶ್, ವಂಗಾ ರಿವ್ಯೂ; ರಾಕೇಶ್ ಪೂಜಾರಿ ನೆನೆದ ರಾಕಿಂಗ್ ಸ್ಟಾರ್
ದೇಶ ವಿದೇಶಗಳಲ್ಲಿ 'ಕಾಂತಾರ- 1' ದರ್ಬಾರ್ ಜೋರಾಗಿದೆ. ಎಲ್ಲಾ ಕಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಟಿಕೆಟ್ ಸಿಗದೇ ಪರದಾಡುವಂತಾಗಿದೆ. ಮೊದಲ ದಿನವೇ ಸಿನಿಮಾ 80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಪ್ರಭಾಸ್, ಯಶ್ ಕೂಡ ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ.
3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಚಿತ್ರ ಪ್ರೀಕ್ವೆಲ್ ಇದು. ಹಾಗಾಗಿ ಕನ್ನಡ ಸಿನಿರಸಿಕರು ಮಾತ್ರವಲ್ಲ, ಪರಭಾಷಾ ಪ್ರೇಕ್ಷಕರು ಹಾಗೂ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಲು ಕಾಯುತ್ತಿದ್ದರು. ಹೃತಿಕ್ ರೋಷನ್, ಪ್ರಭಾಸ್, ಶಿವಕಾರ್ತಿಕೇಯನ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದ್ದರು. ಜ್ಯೂ. ಎನ್‌ಟಿಆರ್ ಚಿತ್ರದ ತೆಲುಗು ಪ್ರೀ ರಿಲೀಸ್ ಈವೆಂಟ್‌ಗೆ ಹಾಜರಾಗಿದ್ದರು.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮಹತ್ವಾಕಾಂಕ್ಷೆಯ ಸಿನಿಮಾ ಇದು. ಮೊದಲ ದಿನ 24 ಗಂಟೆಗಳಲ್ಲಿ ಚಿತ್ರಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿ ದಾಖಲೆ ಬರೆದಿದೆ. ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ನಿರ್ದೇಶನ ಹಾಗೂ ನಟನೆ ಎರಡರಲ್ಲೂ ರಿಷಬ್ ಜಾದೂ ಮಾಡಿದ್ದಾರೆ. ಕೊನೆಯ 30 ನಿಮಿಷ ಸಿನಿಮಾ ಪ್ರೇಕ್ಷಕರನ್ನು ಹೊ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಸಾಕಷ್ಟು ತಾರೆಯರು ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ.
'ಕಾಂತಾರ- 1' ಸಿನಿಮಾ ನೋಡಿ ನಟ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಕಾಂತಾರ ಚಾಪ್ಟರ್- 1 ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಬೆಂಚ್‌ಮಾರ್ಕ್. ರಿಷಬ್ ಶೆಟ್ಟಿ ನಂಬಿಕೆ, ನಿಮ್ಮ ದೃಢನಿಶ್ಚಯ ಮತ್ತು ಭಕ್ತಿ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನಗೊಳಿಸುವ ಅನುಭವವಾಗಿ ಬದಲಾಗುತ್ತದೆ. ವಿಜಯ್ ಕಿರಗಂದೂರ್ ಸರ್ ಮತ್ತು ಹೊಂಬಾಲೆ ಫಿಲ್ಮ್ಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ನಿಮ್ಮ ದೃಷ್ಟಿಕೋನ ಮತ್ತು ಬೇಷರತ್ತಾದ ಬೆಂಬಲವು ನಿರಂತರವಾಗಿ ಉದ್ಯಮದ ಮಟ್ಟವನ್ನು ಹೆಚ್ಚಿಸುತ್ತಿದೆ" ಎಂದು ಯಶ್ ಬರೆದುಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ, ನೀವು ಅದ್ಭುತ ಪ್ರದರ್ಶನ ನೀಡಿದ್ದೀರಾ. ಅಜನೀಶ್ ನಿಮ್ಮ ಸಂಗೀತವು ಆ ಫ್ರೇಮ್‌ಗಳಿಗೆ ಜೀವ ತುಂಬುತ್ತದೆ. ಅರವಿಂದ್ ಕಶ್ಯಪ್, ನಿಮ್ಮ ಅದ್ಭುತ ಕ್ಯಾಮೆರಾ ಕೆಲಸವು ಆ ಜಗತ್ತಿಗೆ ಜೀವ ತುಂಬಿದೆ. ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಮತ್ತು ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಯ ಅತ್ಯುತ್ತಮ ಕೆಲಸ. ಈ ಚಿತ್ರಕ್ಕೆ ರಾಕೇಶ್ ಪೂಜಾರಿ ನೀಡಿದ ಬೆಳಕಿನ ಕ್ಷಣಗಳು ಈಗ ಅವರ ಪ್ರತಿಭೆಗೆ ಸೂಕ್ತವಾದ ಗೌರವವಾಗಿದೆ. ನೀವೆಲ್ಲರೂ ಒಟ್ಟಾಗಿ ಸಂಪೂರ್ಣವಾಗಿ ಅದ್ಭುತ ಸಿನಿಮಾವನ್ನು ರಚಿಸಿದ್ದೀರಿ ಎಂದು ಯಶ್ ವಿಶ್ಲೇಷಿಸಿದ್ದಾರೆ.
ತೆಲುಗು ನಟ ಪ್ರಭಾಸ್ ಕೂಡ ಸಿನಿಮಾ ನೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಕಾಂತಾರ: ಚಾಪ್ಟರ್- 1' ಒಂದು ಅದ್ಭುತ ಸಿನಿಮಾ. ಅದ್ಭುತ ನಟನೆ ಇರುವ ಸಿನಿಮಾ, ಈ ವರ್ಷದ ನಂ. 1 ಬ್ಲಾಕ್ ಬಸ್ಟರ್ ಸಿನಿಮಾ ಆಗಲಿದೆ. ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.
'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಟ್ವೀಟ್ ಮಾಡಿ "ಕಾಂತಾರ ಚಾಪ್ಟರ್- 1 ನಿಜವಾದ ಮಾಸ್ಟರ್‌ಪೀಸ್. ಭಾರತೀಯ ಚಿತ್ರರಂಗ ಈ ಹಿಂದೆ ಇಂತಹದ್ದನ್ನು ನೋಡಿರಲಿಲ್ಲ. ಇದು ಮ್ಯಾಜಿಕ್, ದೈವಿಕವಾದದ್ದು. ರಿಷಭ್ ಶೆಟ್ಟಿ ನಿಜವಾದ ಒನ್‌ಮ್ಯಾನ್ ಶೋ ಪ್ರದರ್ಶನ ನೀಡಿದ್ದಾರೆ. ಬಹಳ ಅದ್ಭುತವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.
ನಿನ್ನೆ(ಅಕ್ಟೋಬರ್ 2) ತೆಲುಗು ನಟ ಜ್ಯೂ. ಎನ್‌ಟಿಆರ್ ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದರು. "ಅದ್ಭುತ ಯಶಸ್ಸನ್ನು ಗಳಿಸಿದ ಕಾಂತಾರ-1 ತಂಡಕ್ಕೆ ಅಭಿನಂದನೆಗಳು. ರಿಷಬ್ ಶೆಟ್ಟಿ ಸರ್, ಅದ್ಭುತ ನಟ ಮತ್ತು ಅದ್ಭುತ ನಿರ್ದೇಶಕರಾಗಿ ಅನೂಹ್ಯವಾದ ಸಾಧನೆ ಮಾಡಿದ್ದಾರೆ. ಅವರ ದೃಷ್ಟಿಕೋನವನ್ನು ನಿರ್ಭಯವಾಗಿ ಬೆಂಬಲಿಸಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದರು.


Click it and Unblock the Notifications











