'ಕಾಂತಾರ- 1' ಸಿನಿಮಾ ನೋಡಿ ಮೈಮೇಲೆ ದೇವರು ಬಂದಂತೆ ವರ್ತಿಸಿದ ಮಹಿಳೆ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ದಾಖಲೆಯ ಪ್ರದರ್ಶನ ಕಾಣುತ್ತಿದೆ. ದೇಶವಿದೇಶಗಳಲ್ಲಿ ಪ್ರೇಕ್ಷಕರ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಎಲ್ಲೆಡೆ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಕೊನೆಯ ಅರ್ಧಗಂಟೆ ಸಿನಿಮಾ ಪ್ರೇಕ್ಷಕರ ಮೈಜುನ್ ಎನಿಸುವಂತೆ ಮಾಡುತ್ತಿದೆ. ಕೆಲವರು ಭಕ್ತಿ ಪರವಶರಾಗುತ್ತಿದ್ದಾರೆ.
ಕರಾವಳಿಯ ಭಾಗದ ದೈವಗಳ ಕಥೆಯನ್ನು ರಿಷಬ್ ಶೆಟ್ಟಿ ಮತ್ತೊಮ್ಮೆ ತೆರೆಗೆ ತಂದಿದ್ದಾರೆ. ಈ ಬಾರಿ ಕದಂಬರ ಕಾಲದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಶಿವ, ಗುಳಿಗ, ಚಾವುಂಡಿ ಹೀಗೆ ನಾನಾ ದೈವಗಳ ವಿಚಾರಗಳನ್ನು ಹೇಳಿದ್ದಾರೆ. ರುದ್ರ ಗುಳಿಗ, ನೆತ್ತರು ಕಾಣೆ ಗುಳಿಗ, ಅಗ್ನಿ ಗುಳಿಗ, ಸ್ವಾಮಿ ರಾಜ ಗುಳಿಗ ದರ್ಶನ ಮಾಡಿಸಿ ರಿಷಬ್ ಶೆಟ್ಟಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಕೆಲ ಪ್ರೇಕ್ಷಕರು ಸಿನಿಮಾ ನೋಡುತ್ತಾ ಬಹಳ ತಲ್ಲೀನರಾಗುತ್ತಿದ್ದಾರೆ. 'ಕಾಂತಾರ- 1' ಸಿನಿಮಾ ನೋಡ್ತಾ ನೋಡ್ತಾ ಹಾವೇರಿ ನಗರದ ಮಾಗಾವಿ ಚಿತ್ರಮಂದಿರದಲ್ಲಿ ಮಹಿಳೆಯೊಬ್ಬರು ಮೈಮೇಲೆ ದೇವರು ಬಂದಂತೆ ವರ್ತಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ನೋಡಿ ಕೆಲವರು ಇದೇ ರೀತಿ ವರ್ತಿಸಿದ್ದರು.
ನಿನ್ನೆ(ಅಕ್ಟೋಬರ್ 2) ಮಧ್ಯಾಹ್ನ 11 ಗಂಟೆಗೆ ಹಾವೇರಿ ನಗರದ ಮಾಗಾವಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಮಹಿಳೆ ಬಂದಿದ್ದರು. ಚಿತ್ರದಲ್ಲಿ ರಿಷಬ್ ಶೆಟ್ಟಿ ಮೇಲೆ ದೈವ ಬರುವಂತಹ ಸನ್ನಿವೇಶ ನೋಡುತ್ತಿದ್ದಂತೆ ಮಹಿಳೆ ಈ ರೀತಿ ವರ್ತಿಸಿದ್ದಾರೆ. ಬಳಿಕ ಮಹಿಳೆಗೆ ನೀರು ಕುಡಿಸಿ, ಮುಖ ತೊಳೆದು ಸಮಾಧಾನ ಮಾಡಲಾಗಿದೆ. ಒಟ್ಟಾರೆ 'ಕಾಂತಾರ- 1' ಸಿನಿಮಾ ಎಫೆಕ್ಟ್ ಜೋರಾಗಿಯೇ ಇದೆ.
ಈ ಹಿಂದೆ ಕೂಡ ಕೆಲ ಸಿನಿಮಾಗಳನ್ನು ವೀಕ್ಷಿಸುವಾಗ ಕೆಲವರು ಇದೇ ರೀತಿ ವರ್ತಿಸುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಇನ್ನು 'ಕಾಂತಾರ- 1' ಸಿನಿಮಾ ದೊಡ್ಡದಾಗಿ ಓಪನಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಕ್ಯೂ ನಿಲ್ಲುವಂತಾಗಿದೆ. ಎಲ್ಲೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಸಿನಿಮಾ 89 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ.
ಪ್ರಭಾಸ್, ಯಶ್, ಪತ್ನಿ ರಾಧಿಕಾ ಪಂಡಿತ್, ಜ್ಯೂ. ಎನ್‌ಟಿಆರ್, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಖ್ಯಾತ ತಾರೆಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಪ್ರತಿಕ್ರಿಯಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 'ಕಾಂತಾರ- 1' ಟ್ರೆಂಡ್ ಜೋರಾಗಿದೆ. ವೀಕೆಂಡ್‌ನಲ್ಲಿ ಸಿನಿಮಾ ಕ್ರೇಜ್ ಹೆಚ್ಚಾಗುವ ಸುಳಿವು ಸಿಗುತ್ತದೆ. 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಅಂದಾಜಿದೆ.
ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಖುಷಿಯಾಗಿದೆ. ಸಿನಿಮಾ ನೋಡಿ ಪೋಸ್ಟ್ ಮಾಡುತ್ತಿರುವ ತಾರೆಯರಿಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿ ಧನ್ಯವಾದ ತಿಳಿಸುತ್ತಿದ್ದಾರೆ. 9 ವರ್ಷಗಳ ಹಿಂದೆ 'ರಿಕ್ಕಿ' ಚಿತ್ರವನ್ನು ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದರು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಸರಿಯಾಗಿ ಶೋಗಳು ಸಿಕ್ಕಿರಲಿಲ್ಲ. ಆಗ ಅವರಿವರ ಕೈಕಾಲು ಹಿಡಿದು ಮಂಗಳೂರಿನಲ್ಲಿ ಒಂದು ಶೋ ಪಡೆದಿದ್ದಾರೆ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ಈಗ ವೈರಲ್ ಆಗ್ತಿದೆ.
ಅದೇ ಪೋಸ್ಟ್ ಅನ್ನು ಶೇರ್ ಮಾಡಿರುವ ರಿಷಬ್ ಶೆಟ್ಟಿ "2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು ಹೌಸ್‌ಫುಲ್ ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ" ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











