ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿರಸಿಕರಿಗೆ ಹೊಂಬಾಳೆ ಫಿಲ್ಮ್ಸ್ ಸಿಹಿಸುದ್ದಿ
'ಕಾಂತಾರ- 1' ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆದು ಪ್ರೇಕ್ಷಕರನ್ನು ರಂಜಿಸ್ತಿದೆ. ಸದ್ಯ ಸ್ಪ್ಯಾನಿಷ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಈ ವಾರ ಸಿನಿಮಾ ತೆರೆಗಪ್ಪಳಿಸುತ್ತಿದೆ. ಇದೆಲ್ಲದರ ನಡುವೆ ಓಟಿಟಿಯಲ್ಲಿ(ಅಕ್ಟೋಬರ್ 31) ಕೂಡ ಸಿನಿಮಾ ಸ್ಟ್ರೀಮಿಂಗ್ ಆರಂಭಿಸುತ್ತಿದೆ.
ಸಿನಿಮಾ ತೆರೆಕಂಡು 27 ದಿನ ಕಳೆದರೂ ಕ್ರೇಜ್ ಕಮ್ಮಿ ಆಗಿಲ್ಲ. ಇನ್ನು ಜನ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಈ ಕ್ಷಣಕ್ಕೂ ಗಂಟೆಗೆ ಸಾವಿರಾರು ಟಿಕೆಟ್‌ಗಳು ಬುಕ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್ ಮಾತ್ರ ಸದ್ಯಕ್ಕೆ ಓಟಿಟಿಗೆ ಬರ್ತಿದೆ. ಹಿಂದಿ ವರ್ಷನ್ ಇನ್ನು 4 ವಾರಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಿದೆ. ಇದೆಲ್ಲದರ ನಡುವೆ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸುವವರಿಗೆ ಚಿತ್ರತಂಡ ಸಿಹಿಸುದ್ದಿ ಕೊಟ್ಟಿದೆ.

ನಾಳೆಯಿಂದ ಅಂದರೆ ಅಕ್ಟೋಬರ್ 31ರಿಂದ 'ಕಾಂತಾರ- 1' ಸಿನಿಮಾ ಟಿಕೆಟ್ ದರ ಕಮ್ಮಿಯಾಗಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ (ಏಕಪರದೆ) ಕೇವಲ ₹99 ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ₹150 ಪಾವತಿಸಿ ಪ್ರೇಕ್ಷಕರು ಸಿನಿಮಾ ವೀಕ್ಷಿಸಬಹುದು. 'ಕಾಂತಾರ-1' ತನ್ನ ಮಣ್ಣಿನ ಕಥೆ, ಅದ್ಭುತ ದೃಶ್ಯ ವೈಭವ ಹಾಗೂ ಶಕ್ತಿಯುತ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಈ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಕರ್ನಾಟಕದ ಅಭಿಮಾನಿಗಳು ಕಡಿಮೆ ಬೆಲೆಯಲ್ಲಿ, ನಮ್ಮ ನಾಡಿನ ಕಲೆ-ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾದ 'ಕಾಂತಾರ'ದ ಲೋಕವನ್ನು ಮತ್ತೊಮ್ಮೆ ಸವಿಯಬಹುದು" ಎಂದು ಚಿತ್ರತಂಡ ಹೇಳಿದೆ.
ಓಟಿಟಿಯಲ್ಲಿ ಬಂದರೂ ಚಿತ್ರದ ದೃಶ್ಯವೈಭವವನ್ನು ತೆರೆಮೇಲೆ ಕಣ್ತುಂಬಿಕೊಳ್ಳಬೇಕು ಎಂದು ಕೆಲವರು ಬಯಸುತ್ತಾರೆ. ಈ ಹಿಂದೆ ಕೂಡ ಓಟಿಟಿಗೆ ಬಂದ ಬಳಿಕ ಕೂಡ ಕೆಲ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿರುವ ಉದಾಹರಣೆಯಿದೆ. ದೊಡ್ಡ ಪರದೆಯಲ್ಲಿ 'ಕಾಂತಾರ- 1' ಚಿತ್ರವನ್ನು ನೋಡುವ ಆಸೆ ಇರುವವರು ಈ ವಾರ ಚಿತ್ರಮಂದಿರಕ್ಕೆ ಹೋಗಿ ಎಂಜಾಯ್ ಮಾಡಿ. ಟಿಕೆಟ್ ದರ ಕಮ್ಮಿಯಾಗುತ್ತದೆ ಎನ್ನುವ ಸುದ್ದಿ ಕೇಳಿ ಕೆಲವರು ಬುಕ್‌ಮೈ ಶೋನಲ್ಲಿ ಚೆಕ್ ಮಾಡುತ್ತಿದ್ದಾರೆ. ಸದ್ಯಕ್ಕೆ ಟಿಕೆಟ್ ದರದಲ್ಲಿ ಬದಲಾವಣೆಯಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಅಕ್ಟೋಬರ್ 2ರಂದು ತೆರೆಗೆ ಬಂದಿದ್ದ 'ಕಾಂತಾರ- 1' ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಬರೀ ಕರ್ನಾಟಕದಲ್ಲಿ 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ ಯಶ್, ಪ್ರಭಾಸ್, ಅಲ್ಲು ಅರ್ಜುನ್, ಸಂದೀಪ್ ರೆಡ್ಡಿ ವಂಗಾ ಸೇರಿ ಸಾಕಷ್ಟು ತಾರೆಯರು ಸಿನಿಮಾ ನೋಡಿ ಕೊಂಡಾಡಿದ್ದಾರೆ.
ಬಹಳ ಹಿಂದೆಯೇ ಓಟಿಟಿ ರೈಟ್ಸ್ ಒಪ್ಪಂದವಾಗಿತ್ತು. ಹಾಗಾಗಿ ಚಿತ್ರವನ್ನು 4 ವಾರಕ್ಕೆ ಓಟಿಟಿಗೆ ತರಲಾಗ್ತಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಅಂದಾಜು 120 ಕೋಟಿ ರೂ.ಗೆ ಪ್ರೈಂ ವೀಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಭಾರೀ ಮೊತ್ತದ ಹಣ ಕೊಟ್ಟಿರುವುದರಿಂದ ಬೇಗ ಓಟಿಟಿ ಬಿಡುಗಡೆಗೆ ಪ್ರೈಂ ಮುಂದಾಗಿದೆ.
ಕಳೆದೊಂದು ವಾರದಿಂದ 'ಕಾಂತಾರ- 1' ಟಿಕೆಟ್ ದರ ಕೊಂಚ ಕಮ್ಮಿ ಆಗಿದೆ. ಇದೀಗ ರಾಜ್ಯೋತ್ಸವ ಸಂಭ್ರಮದಲ್ಲಿ ಟಿಕೆಟ್ ದರ ಮತ್ತಷ್ಟು ತಗ್ಗಿಸುತ್ತಿದ್ದಾರೆ. ಓಟಿಟಿಗೆ ಬಂದಮೇಲೆ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ರಿಷಬ್ ಶೆಟ್ಟಿ ಸಾರಥ್ಯದ 'ಕಾಂತಾರ- 1' ಸಿನಿಮಾ ನೋಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











