Kantara-1: ಕೋಲೆ ಬಸವ ನಾದಸ್ವರದಲ್ಲಿ 'ಬ್ರಹ್ಮಕಲಶ' ಹಾಡು; ಹೊಂಬಾಳೆ ಫಿಲ್ಮ್ಸ್ ಪ್ರತಿಕ್ರಿಯೆ
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ-1' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಇತ್ತೀಚೆಗೆ ಸಿನಿಮಾ ತೆರೆಕಂಡು 100 ದಿನ ಪೂರೈಸಿತ್ತು. ಶೀಘ್ರದಲ್ಲೇ ಸಿನಿಮಾ ಟಿವಿಯಲ್ಲಿ ಪ್ರೀಮಿಯರ್ ಆಗುತ್ತಿದೆ. ಇನ್ನು ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ. 'ಕಾಂತಾರ- 1' ಚಿತ್ರದ ಹಾಡುಗಳನ್ನು ಜನ ಮರೆತ್ತಿಲ್ಲ.
ಅಜನೀಶ್ ಲೋಕನಾಥ್ ಸಂಗೀತ 'ಕಾಂತಾರ' ಸರಣಿ ಚಿತ್ರಗಳ ಹೈಲೆಟ್. 'ವರಾಹ ರೂಪಂ' ಹಾಡು ಮಾಡಿದ ಮ್ಯಾಜಿಕ್ ಗೊತ್ತೇಯಿದೆ. ಪ್ರೀಕ್ವೆಲ್‌ನಲ್ಲಿ ಕೂಡ ಆ ಹಾಡನ್ನು ಕೊಂಚ ಬದಲಿಸಿ ಬಳಸಿಕೊಳ್ಳಲಾಗಿತ್ತು. ಜೊತೆಗೆ 'ಕರ್ಮ' ಹಾಡು ಹಿಟ್ ಆಗಿತ್ತು. ಇದೆಲ್ಲದರ ಜೊತೆಗೆ ಸದ್ದು ಮಾಡಿದ ಮತ್ತೊಂದು ಹಾಡು 'ಬ್ರಹ್ಮ ಕಳಶ'.

ಅಬ್ಬಿ ವಿ ಗಾಯನದಲ್ಲಿ ಮೂಡಿ ಬಂದಿದ್ದ 'ಬ್ರಹ್ಮ ಕಳಶ' ಹಾಡು 'ಕಾಂತಾರ-1' ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲಿ ಒಂದು. ಅಜನೀಶ್ ಟ್ಯೂನ್, ಶಶಿರಾಜ್ ಕಾವೂರ್ ಸಾಹಿತ್ಯ ಹಾಡಿಗೆ ಬಲ ತುಂಬಿತ್ತು. ಹಾಡು ಕೋಟಿ ಕೋಟಿ ವೀವ್ಸ್ ಸಾಧಿಸಿ ದಾಖಲೆ ಬರೆದಿತ್ತು. ಇದೇ ಹಾಡನ್ನು ಇದೀಗ ಕೋಲೆ ಬಸವ ತನ್ನ ನಾದಸ್ವರದಲ್ಲಿ ನುಡಿಸಿದ್ದು ವೀಡಿಯೋ ವೈರಲ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಹಂಚಿಕೊಂಡಿದೆ.
"ಅದಕ್ಕೆ ಹೇಳೋದು ಕಲೆ ಯಾರಪ್ಪನ ಸ್ವತ್ತಲ್ಲ" ಯಾರೋ ವೀಡಿಯೋ ತೇಲಿಬಿಟ್ಟಿದ್ದಾರೆ. ಅದನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪೋಸ್ಟ್ ಮಾಡಿದ್ದಾರೆ. ಸಾಕಷ್ಟು ಜನ ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವಿಡಿಯೋ ಹಾಕಿದ್ದಾರೆ.
ಕರ್ನಾಟಕದ ಜಾನಪದ ಕಲೆ ಕೋಲೆ ಬಸವ. ಎತ್ತು ಅಥವಾ ಹೋರಿಯೊಂದಿಗೆ ವೇಷಭೂಷಣ ಧರಿಸಿದ ವ್ಯಕ್ತಿ ಮನೆ ಮನೆಗೆ ಹೋಗಿ ಹಾಡು ಹೇಳಿ, ಜನರನ್ನು ರಂಜಿಸಿ, ದವಸ-ಧಾನ್ಯ, ಹಣವನ್ನು ಸಂಗ್ರಹಿಸುತ್ತಾರೆ. ನಗರದಲ್ಲಿ ಆಗಾಗ್ಗೆ ಮನೆಗಳ ಬಳಿ ಕೋಲೆ ಬಸವನನ್ನು ಕರೆದುಕೊಂಡು ಬರ್ತಾರೆ. ಸಿನಿಮಾ ಗೀತೆಗಳನ್ನು ನಾದ ಸ್ವರದಲ್ಲಿ ನುಡಿಸುತ್ತಾರೆ. ಅದೇ ರೀತಿ 'ಬ್ರಹ್ಮ ಕಲಶ' ಹಾಡನ್ನು ನುಡಿಸಿರುವ ವಿಡಿಯೋ ಗಮನ ಸೆಳೆಯುತ್ತಿದೆ.
ಅಕ್ಟೋಬರ್ 1ರಂದು 'ಕಾಂತಾರ-1' ಸಿನಿಮಾ ಬಿಡುಗಡೆ ಆಗಿತ್ತು. ಹೊಂಬಾಳೆ ಫಿಲ್ಮ್ಸ್ ಸಿನಿಮಾ ನಿರ್ಮಿಸಿ ಸಕ್ಸಸ್ ಕಂಡಿತ್ತು. 800 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಕಳೆದ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು. 'ಕಾಂತಾರ- 2' ಸಿನಿಮಾ ಮಾಡುವುದಾಗಿ ಕೂಡ ಚಿತ್ರತಂಡ ಘೋಷಿಸಿದೆ.
ತೆರೆಕಂಡ ತಿಂಗಳಿಗೆ 'ಕಾಂತಾರ-1' ಸಿನಿಮಾ ಓಟಿಟಿಗೆ ಬಂದು ಅಚ್ಚರಿ ಮೂಡಿಸಿತ್ತು. ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿತ್ತು. 125 ಕೋಟಿ ರೂ.ಗೆ ರೈಟ್ಸ್ ಮಾರಾಟವಾಗಿತ್ತು ಎನ್ನುವ ಅಂದಾಜಿದೆ. ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಸಿನಿಮಾ ಪ್ರಸಾರ ಆಗಲಿದೆ.
ಅಜನೀಶ್ ಲೋಕನಾಥ್ ಕನ್ನಡ ಚಿತ್ರರಂಗದ ಬಹುಬೇಡಿಕೆ ಸಂಗೀತ ನಿರ್ದೇಶಕರಾಗಿ ಗುರ್ತಿಸಿಕೊಂಡಿದ್ದಾರೆ. 'ಕಾಂತಾರ' ಸರಣಿ ಸಕ್ಸಸ್ ಅವರಿಗೆ ನೇಮು ಫೇಮು ತಂದುಕೊಟ್ಟಿದೆ. ಪರಭಾಷೆಗಳಿಂದ ಅವಕಾಶಗಳು ಸಿಗುತ್ತಿದೆ. ಕನ್ನಡದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. 'ಕಾಂತಾರ-1' ಬಳಿಕ ದರ್ಶನ್ ನಟನೆಯ 'ಡೆವಿಲ್', ಸುದೀಪ್ ನಟನೆಯ 'ಮಾರ್ಕ್' ಚಿತ್ರಕ್ಕೆ ಮ್ಯೂಸಿಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಮುಂದಿನ ವಾರ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ಬಿಡುಗಡೆ ಆಗಲಿದೆ. ಆ ಚಿತ್ರಕ್ಕೂ ಅಜನೀಶ್ ಟ್ಯೂನ್ ಹಾಕಿದ್ದಾರೆ. ಹೀಗೆ ಸಾಲು ಸಾಲು ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಅಜ್ಜು ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಮುಂದೆ 'ಬಿಲ್ಲ ರಂಗ ಬಾಷ' ಹಾಗೂ 'ರಿಚರ್ಡ್ ಆಂಟನಿ' ರೀತಿಯ ದೊಡ್ಡ ಚಿತ್ರಗಳಿಗೆ ಕೆಲಸ ಮಾಡಬೇಕಿದೆ.


Click it and Unblock the Notifications











