ಒಂದು ದಿನ ಮೊದ್ಲೆ 'ಕಾಂತಾರ- 1' ಪ್ರೀಮಿಯರ್ ಶೋ; 'ಪುಷ್ಪ'- 2 ದಾಖಲೆ ಮುರಿಯುವುದು ಕಷ್ಟ ಕಷ್ಟ!
ಅಕ್ಟೋಬರ್ 2ರಂದು ವಿಶ್ವದಾದ್ಯಂತ 'ಕಾಂತಾರ-1' ಸಿನಿಮಾ ಬಿಡುಗಡೆ ಆಗ್ತಿದೆ. ಆದರೆ ಒಂದು ದಿನ ಮೊದ್ಲೆ ಪೇಯ್ಡ್ ಪ್ರೀಮಿಯರ್ ಶೋಗಳು ಏರ್ಪಡಿಸಲಾಗುತ್ತಿದೆ. ಇತ್ತೀಚೆಗೆ ಇದು ಹೊಸ ಟ್ರೆಂಡ್ ಆಗ್ತಿದೆ. ಮೊದಲೆಲ್ಲಾ ಸ್ಟಾರ್ ನಟರ ಸಿನಿಮಾಗಳನ್ನು ಮಧ್ಯರಾತ್ರಿಯಿಂದ ಸಿನಿಮಾ ಬಿಡುಗಡೆ ಮಾಡುವ ರೂಢಿ ಇತ್ತು. ಮಧ್ಯರಾತ್ರಿ 12 ಗಂಟೆ, ಬಳಿಕ ಬೆಳಗಿನ ಜಾವ 4 ಗಂಟೆ, 5 ಗಂಟೆ ಹಾಗೂ 8 ಗಂಟೆಗೆ ಶೋಗಳನ್ನು ಹಾಕುತ್ತಿದ್ದರು. ಈಗ ಒಂದು ದಿನ ಮೊದ್ಲೆ ಶುರುವಾಗುತ್ತಿದೆ.
ಇತ್ತೀಚೆಗೆ 'ಸು ಫ್ರಂ ಸೋ' ಚಿತ್ರಕ್ಕೆ ಪ್ರೀಮಿಯರ್ ಶೋಗಳಿಂದ ಎಷ್ಟು ಬಲ ಬಂದಿತ್ತು ಎನ್ನುವುದು ಗೊತ್ತೇಯಿದೆ. ಕರಾವಳಿ ಭಾಗದಲ್ಲಿ ನಡೆದ ಪ್ರೀಮಿಯರ್ ಶೋಗಳಲ್ಲಿ ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಜನ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿದ್ದರು. ಬಳಿಕ ನೋಡಿದವರೆಲ್ಲಾ ಮೆಚ್ಚಿಕೊಳ್ಳುತ್ತಾ ಸಿನಿಮಾ ದಾಖಲೆ ಬರೆಯುವಂತಾಯಿತು. ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಪ್ರೀಮಿಯರ್ ಶೋಗಳು ಹೊಸ ಇತಿಹಾಸ ನಿರ್ಮಿಸಿತ್ತು.

ಕಳೆದ ವರ್ಷ ಡಿಸೆಂಬರ್ 5ರಂದು 'ಪುಷ್ಪ'-2 ಸಿನಿಮಾ ಬಿಡುಗಡೆ ಆಗುತ್ತು. ಆದರೆ ಅದಕ್ಕಿಂತ ಒಂದು ದಿನ ಮುನ್ನ ಅಂದ್ರೆ ಡಿಸೆಂಬರ್ 4ರಂದು ಸಂಜೆ ದೇಶ್ಯಾದ್ಯಂತ ಸಾಕಷ್ಟು ಕಡೆಗಳಲ್ಲಿ ಸ್ಪೆಷಲ್ ಶೋಗಳನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನಲ್ಲಿ ಅರ್ಲಿ ಮಾರ್ನಿಂಗ್ ಶೋಗಳಿಗೆ ಬ್ರೇಕ್ ಬಿದ್ದಿದ್ದರಿಂದ ಪ್ರೀಮಿಯರ್ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕರ್ನಾಟಕದಲ್ಲಿ ಪ್ರೀಮಿಯರ್ ಶೋಗಳಿಗೆ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಿ ಭರ್ಜರಿ ಲಾಭ ಮಾಡಿಕೊಂಡಿದ್ದರು. ಸದ್ಯ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 236 ರೂ.ಗೆ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 236 ರೂ. ಟಿಕೆಟ್ ದರ ನಿಯಮ ಜಾರಿಗೆ ಬಂದಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸಿ ಮಲ್ಟಿಪೆಕ್ಸ್ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಕೂಡ ಇದನ್ನು ಕೈ ಜೋಡಿಸಿರುವುದಾಗಿ ವರದಿಯಾಗಿದೆ. ಇದೆಲ್ಲದರ ನಡುವೆ ಅಕ್ಟೋಬರ್ 1ರಂದು ಸಂಜೆ 'ಕಾಂತಾರ-1' ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋ ಪ್ಲ್ಯಾನ್ ನಡೀತಿದೆ. 2500ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ.

30 ದೇಶಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ 'ಕಾಂತಾರ- 1' ಸಿನಿಮಾ ಬಗ್ಗೆ ಕ್ರೇಜ್ ಜೋರಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಕೆಲ ಶೋಗಳು ಸೋಲ್ಡೌಟ್ ಆಗಿದೆ. ಅಲ್ಲಿ ಕೂಡ ಒಂದು ದಿನ ಮೊದ್ಲೆ ಜನ ಸಿನಿಮಾ ಕಣ್ತುಂಬಿಕೊಳ್ಳಬಹುದು. ರಾಜ್ಯದಲ್ಲಿ ಟಿಕೆಟ್ ದರ ಕಮ್ಮಿ ಮಾಡಿರುವುದು ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಅದು ಪ್ರೀಮಿಯರ್ ಶೋಗಳಲ್ಲೇ ಗೊತ್ತಾಗಲಿದೆ.
'ಪುಷ್ಪ'-2 ಪ್ರೀಮಿಯರ್ ಶೋ ಟಿಕೆಟ್ ಬೆಲೆ ಬೆಂಗಳೂರಿನಲ್ಲಿ 5 ಪಟ್ಟು 10 ಪಟ್ಟು ಹೆಚ್ಚಾಗಿತ್ತು. ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲೇ 600 ರೂ. ಹಾಗೂ 800 ರೂ.ಗೆ ಟಿಕೆಟ್ ಮಾರಾಟವಾಗಿತ್ತು. ಇನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ 1000 ರೂ. ದಾಟಿದ್ದ ಉದಾಹರಣೆ ಕೂಡ ಇದೆ. ಟಿಕೆಟ್ ದರ ಜಾಸ್ತಿ ಅಂತ ಪ್ರೇಕ್ಷಕರು ಹಿಂದೇಟು ಹಾಕಲಿಲ್ಲ. ಹೆಚ್ಚಿನ ಹಣ ತೆತ್ತು ಸಿನಿಮಾ ವೀಕ್ಷಿಸಿದ್ದರು. ಬರೀ ಪ್ರೀಮಿಯರ್ ಶೋಗಳಿಂದಲೇ ಭಾರತದಲ್ಲಿ 'ಪುಷ್ಪ'-2 ಸಿನಿಮಾ 10.65 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು.
ಗೋಲ್ಡ್ ಕ್ಲಾಸ್ ಬಿಟ್ಟು ಬಹುತೇಕ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಈಗ ಟಿಕೆಟ್ ದರ 236 ರೂ. ನಿಗದಿಯಾಗಿದೆ. ಈ ದರದಲ್ಲಿ ಸಿನಿಮಾ ದೊಡ್ಡಮಟ್ಟದ ಕಲೆಕ್ಷನ್ ಮಾಡುವುದು ಕಷ್ಟ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಮಲ್ಟಿಪ್ಲೆಕ್ಸ್ ಮಾಲೀಕರು ಕರ್ನಾಟಕ ಸರ್ಕಾರದ ನಡೆ ಖಂಡಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ದೊಡ್ಡ ಸಿನಿಮಾಗಳ ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸುತ್ತಾ ಕಾದು ನೋಡಬೇಕಿದೆ.


Click it and Unblock the Notifications











