'ಕಾಂತಾರ- 1' ಚಿತ್ರದಲ್ಲಿ ರಿಷಬ್ ದ್ವಿಪಾತ್ರ? ಬೆರ್ಮೆ ಜೊತೆ ಮತ್ತೊಂದು ಪಾತ್ರ ಯಾವ್ದು?
ರಿಷಬ್ ಶೆಟ್ಟಿ ನಟ ವಿಶ್ವರೂಪ ದರ್ಶನ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಸೋಮವಾರ(ಅಕ್ಟೋಬರ್ 6) ಕೂಡ ಆರ್ಭಟ ಜೋರಾಗಿದೆ. ರಿಷಬ್ ನಿರ್ದೇಶನ ಹಾಗೂ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ ಚಿತ್ರದಲ್ಲಿ ಡಿವೈನ್ ಸ್ಟಾರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ.
3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಇತಿಹಾಸ ನಿರ್ಮಿಸಿತ್ತು. 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಆದರೆ 'ಕಾಂತಾರ- 1' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲೇ 300 ಕೋಟಿ ರೂ. ಕೊಳ್ಳೆ ಹೊಡೆದಿದೆ. ರಿಷಬ್ ಶೆಟ್ಟಿ ನಟನೆ ಬಗ್ಗೆ ಪರಭಾಷಿಕರು ಮಾತನಾಡುತ್ತಿದ್ದಾರೆ. ನಿಜಕ್ಕೂ ದೇವರಂತೆ ನಟಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಗುಳಿಗ ಹಾಗೂ ಚಾವುಂಡಿ ದೈವದ ನಟನೆಯಲ್ಲಿ ರಿಷಬ್ ಶೆಟ್ಟಿ ನಟನೆ ಕಂಡು ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಕೊನೆಯ ಅರ್ಧ ಗಂಟೆ ಸಿನಿಮಾ ಉಂಟು ಮಾಡುವ ಭಾವತೀವ್ರತೆಯನ್ನು ಪ್ರೇಕ್ಷಕರು ಅನುಭವಿಸಿ ಚಿತ್ರಮಂದಿರಗಳಿಂದ ಹೊರ ಬರುತ್ತಿದ್ದಾರೆ. ಬೆರ್ಮೆ ಮಾತ್ರವಲ್ಲ ಎಲ್ಲಾ ಪಾತ್ರಗಳಿಗೂ ಚಿತ್ರದಲ್ಲಿ ಪ್ರಾಮುಖ್ಯತೆ ಇದೆ. ಆ ಪಾತ್ರಗಳಲ್ಲಿ ಕಲಾವಿದರು ಅಷ್ಟೇ ಚೆನ್ನಾಗಿ ಮುಳುಗಿ ಹೋಗಿದ್ದಾರೆ. ಕನಕವತಿಯಾಗಿ ರುಕ್ಮಿಣಿ ವಸಂತ್, ಕುಲಶೇಖರನಾಗಿ ಗುಲ್ಶನ್ ದೇವಯ್ಯ, ಭೋಗೇಂದ್ರ ಆಗಿ ಪ್ರಮೋದ್ ಶೆಟ್ಟಿ, ರಾಜಶೇಖರನಾಗಿ ಜಯರಾಂ, ಪೆಪ್ಪೆ ಆಗಿ ರಾಕೇಶ್ ಶೆಟ್ಟಿ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ರಿಷಬ್ ಶೆಟ್ಟಿ ಅದ್ಭುತ ನಟನೆಯ ನಡುವೆಯೂ ಇವರೆಲ್ಲರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ.
ಚಿತ್ರದಲ್ಲಿ ಮಾಯಕಾರ ಎನ್ನುವ ಪಾತ್ರವೊಂದಿದೆ. ಈಶ್ವರನ ಹೂದೋಟ ಕಾಂತಾರದಲ್ಲಿ ಬುಡಕಟ್ಟು ಜನರಿಗೆ ಒಳ್ಳೆಯದನ್ನು ಬಯಸುವ, ಕಡಪ ಬುಡಕಟ್ಟು ಜನಾಂಗದವರಿಂದ ಕಾಂತಾರ ಬುಡಕಟ್ಟು ದೇವತೆಗಳನ್ನು ರಕ್ಷಿಸುವ ಪಾತ್ರ ಅದು. ಈ ಪಾತ್ರವನ್ನು ಕೂಡ ರಿಷಬ್ ಶೆಟ್ಟಿ ನಿಭಾಯಿಸಿದ್ದಾರೆ. ಆದರೆ ಮೇಕಪ್‌ನಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವುದು, ತುಂಬಾ ತೆಳ್ಳಗೆ ಆ ಪಾತ್ರ ತೋರಿಸಿರುವುದರಿಂದ ಸಾಕಷ್ಟು ಜನರಿಗೆ ಅದು ಗೊತ್ತಾಗಲ್ಲ. ರಿಷಬ್ ಶೆಟ್ಟಿ ಡಬ್ ಮಾತ್ರ ಮಾಡಿದ್ದಾರಾ? ಎನ್ನುವ ಅನುಮಾನ ಮೂಡುವಂತಿದೆ. ಮಾಯಕಾರನಾಗಿ ರಿಷಬ್ ಶೆಟ್ಟಿ ನಟಿಸಿದ್ದಾರೆ ಎಂದು ಕೆಲವರು ಗೆಸ್ ಮಾಡುತ್ತಿದ್ದಾರೆ.

ಇದೀಗ ಸ್ವತಃ ಪ್ರಮೋದ್ ಶೆಟ್ಟಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಮಾಯಕಾರನಾಗಿ ಕೂಡ ರಿಷಬ್ ಶೆಟ್ಟಿ ನಟಿಸಿದ್ದಾರೆ ಎಂದು ಫಿಲ್ಮಿಬೀಟ್ ಕನ್ನಡಗೆ ಸ್ಪಷ್ಟಪಡಿಸಿದ್ದಾರೆ. ಈ ಪಾತ್ರಕ್ಕಾಗಿ ರಿಷಬ್ ಏಳೆಂಟು ಗಂಟೆ ಮೇಕಪ್ ಮಾಡಿಸಿಕೊಳ್ಳುತ್ತಿದ್ದರು ಎಂದು ಪ್ರಮೋದ್ ಹೇಳಿದ್ದಾರೆ. ಸಿಜಿಯಲ್ಲಿ ಮಾಯಕಾರ ರಿಷಬ್ ಶೆಟ್ಟಿಯನ್ನು ತೆಳ್ಳಗೆ ತೋರಿಸಲಾಗಿದೆ ಎಂದಿದ್ದಾರೆ.
ಟ್ರೈಲರ್‌ನಲ್ಲಿ ಹೆಚ್ಚು ವಿಚಾರಗಳನ್ನು ರಿಷಬ್ ಶೆಟ್ಟಿ ಬಿಟ್ಟುಕೊಟ್ಟಿರಲಿಲ್ಲ. ಎಲ್ಲವನ್ನು ಪ್ರೇಕ್ಷಕರು ತೆರೆಮೇಲೆ ನೋಡಬೇಕು ಎಂದುಕೊಂಡಿದ್ದರು. ಅವರ ಪ್ಲ್ಯಾನ್ ವರ್ಕ್ ಆಗಿದೆ. ಸಾಕಷ್ಟು ಸರ್‌ಪ್ರೈಸ್‌ಗಳು ಚಿತ್ರದಲ್ಲಿದ್ದು ಅದೆಲ್ಲವೂ ನೋಡುಗರಿಗೆ ಮಜಾ ಕೊಡುತ್ತಿದೆ. ಮತ್ತೆ ಮತ್ತೆ ಸಿನಿಮಾ ನೋಡುವಂತೆ ಮಾಡುತ್ತಿದೆ. 'ಕಾಂತಾರ- 2' ಕೂಡ ಮಾಡುವುದಾಗಿ ಹೇಳಿರುವುದು ಪ್ರೇಕ್ಷಕರ ಸಂತಸಕ್ಕೆ ಕಾರಣವಾಗಿದೆ. ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಓವರ್‌ಸೀಸ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ನಿಧಾನವಾಗಿ ಉತ್ತರ ಭಾರತದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅನಾಯಾಸವಾಗಿ 600-700 ಕೋಟಿ ರೂ. ಗಳಿಸುವ ಲೆಕ್ಕಾಚಾರ ಶುರುವಾಗಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟು ಗೆದ್ದಿದೆ. 'ಕಾಂತಾರ -1' ಆರ್ಭಟ ಹೀಗೆ ಮುಂದುವರೆದರೆ 1000 ಕೋಟಿ ರೂ. ಕಲೆಕ್ಷನ್ ಕೂಡ ಮಾಡಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ದುಪಟ್ಟಾಗಿದೆ.


Click it and Unblock the Notifications











