1000 ವರ್ಷಗಳ ಹಿಂದಿನ ಕಥೆ, 1000 ಜನರ ನಡುವೆ ರಿಷಬ್ ಚೇಸಿಂಗ್; 'ಕಾಂತಾರ-1' ಸೀಕ್ರೆಟ್ ರಿವೀಲ್
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ ಚಾಪ್ಟರ್-1' ಸಿನಿಮಾ ಬಿಡುಗಡೆಗೆ 18 ದಿನಗಳು ಬಾಕಿಯಿದೆ. ದಿನದಿಂದ ದಿನಕ್ಕೆ ಸಿನಿಮಾ ಬಗ್ಗೆ ಹೈಪ್ ಹೆಚ್ಚಾಗುತ್ತಿದೆ. ದೇಶ ವಿದೇಶಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರದ ಕಥೆ ಏನು? ಎನ್ನುವ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ಕಿದೆ.
'ಕಾಂತಾರ- 1' ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಭರ್ಜರಿಯಾಗಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇದೆ. ಹಾಗಾಗಿ ಭಾರೀ ಮೊತ್ತಕ್ಕೆ ರೈಟ್ಸ್ ಸೇಲ್ ಆಗಿದೆ. ಚಿತ್ರತಂಡ ಈವರೆಗೆ ಸಿನಿಮಾ ಬಗ್ಗೆ ಹೆಚ್ಚು ಮಾತನಾಡಿಲ್ಲ. ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿರುವ ಸ್ಟಂಟ್ ಮಾಸ್ಟರ್ ಅರ್ಜುನ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ಮೇಕಿಂಗ್ ಬಗ್ಗೆ ಸಾಕಷ್ಟು ಸಂಗತಿಗಳನ್ನು ಸಂದರ್ಶನವೊಂದರಲ್ಲಿ ಅವರು ಹಂಚಿಕೊಂಡಿದ್ದಾರೆ.

"ಆರಂಭದಲ್ಲಿ ನಾನು ಈ ಚಿತ್ರದಲ್ಲಿ ಕೆಲಸ ಮಾಡುವುದು ಖಚಿತವಾಗಿರಲಿಲ್ಲ. ನನಗೆ ಈ ಚಿತ್ರದಲ್ಲಿ ಅವಕಾಶ ಸಿಗಲ್ಲ ಅಂದುಕೊಂಡಿದ್ದೆ. ನಾನು ವಾರಣಾಸಿಯಲ್ಲಿದ್ದಾಗ ಕರೆ ಬಂತು. ಆರಂಭದಲ್ಲಿ ಕೇವಲ ಒಂದು ಸೀಕ್ವೆನ್ಸ್ ಕಂಪೋಸ್ ಮಾಡಲು ಕರೆದಿದ್ರು. ಬಳಿಕ ನಾಲ್ಕು ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡುವ ಅವಕಾಶ ಕೊಟ್ರು. ಸಾವಿರ ವರ್ಷ ಹಿಂದಿನ ಕಥೆ ಚಿತ್ರದಲ್ಲಿದೆ. ಬೇರೆ ಸಿನಿಮಾಗಳನ್ನು ನೋಡಿ ಕಾಪಿ ಪೇಸ್ಟ್ ಮಾಡೋಕೆ ಆಗಲ್ಲ. ಪ್ರತಿ ಕದಲಿಕೆಯು ನಮ್ಮದೇ ಎನ್ನುವಂತಿರಬೇಕು. ಸಾವಿರಕ್ಕೂ ಹೆಚ್ಚು ಜನರ ನಡುವೆ ರಿಷಬ್ ಶೆಟ್ಟಿ ಹೈ-ಸ್ಪೀಡ್ ಚೇಸಿಂಗ್ ದೃಶ್ಯವೂ ಇದೆ. ಅದು ನಾನು ಸಂಯೋಜಿಸಿದ ಅತ್ಯಂತ ಅಪಾಯಕಾರಿ ಸ್ಟಂಟ್" ಅರ್ಜುನ್ ರಾಜ್ ಹೇಳಿದ್ದಾರೆ.
ಮಾತು ಮುಂದುವರೆಸಿರುವ ಸ್ಟಂಟ್ ಮಾಸ್ಟರ್ "ಪ್ರೀ ಕ್ಲೈಮ್ಯಾಕ್ಸ್ ವಾರ್ ಸೀಕ್ವೆನ್ಸ್ ನನಗೆ ಬಹಳ ಇಷ್ಟ. ಅದು ಬರೀ ಕತ್ತಿ ವರಸೆ ಆಗಿರಲ್ಲ. ಅದರಲ್ಲಿ ಎಮೋಷನ್, ಗೆಲುವು, ನೀವು ಎಲ್ಲವೂ ಬೆರೆತಿರುತ್ತದೆ. ರಿಷಬ್ ಎನರ್ಜಿಯಿಂದ ಎಲ್ಲಾ ಆಕ್ಷನ್ ಸೀಕ್ವೆನ್ಸ್ ಅದ್ಭುತವಾಗಿ ಮೂಡಿ ಬಂದಿದೆ ಎಂದು ಅರ್ಜುನ್ ರಾಜ್ ವಿವರಿಸಿದ್ದಾರೆ. ರಿಷಬ್ ಶೆಟ್ಟಿ ಅವರಿಗೆ ಯಾವುದೇ ಡ್ಯೂಪ್ ಹಾಕಲಿಲ್ಲ. ಅವ್ರು ಬರೀ ಮೈಯಲ್ಲಿ ನಟಿಸಿದ್ದಾರೆ. ಡ್ಯೂಪ್ ಹಾಕಿದ್ರೆ ಅದನ್ನೆಲ್ಲಾ ಮಾಡೋಕ್ಕಾಗಲ್ಲ. ಚಿತ್ರಕ್ಕಾಗಿ ರಿಷನ್ ಕಳರಿಪಯಟ್ಟು, ಕುದುರೆ ಸವಾರಿ, ಕತ್ತಿವರೆಸೆ ತರಬೇತಿ ಪಡೆದಿದ್ರು" ಎಂದಿದ್ದಾರೆ.

"ನಾನು ಸಾಕಷ್ಟು ನಟರೊಟ್ಟಿಗೆ ಕೆಲಸ ಮಾಡಿದ್ದೀನಿ, ಆದ್ರೆ ರಿಷಬ್ ಎಲ್ಲರಿಗಿಂತ ಭಿನ್ನ. 'ಯಾರೇ ಆದ್ರು ನನ್ನ ಕೈಲಾಗುವಷ್ಟು ಕಷ್ಟಬಿದ್ದು ಕೆಲಸ ಮಾಡ್ತೀನಿ ಎನ್ನುತ್ತಾರೆ. ಆದ್ರೆ ರಿಷಬ್ 'ನಾನು ಜೀವಂತವಾಗಿರುವವರೆಗೂ ಇದನ್ನು ಮಾಡ್ತೀನಿ ಅನ್ನುತ್ತಿದ್ರು' ಅವರ ಈ ಮನೋಭಾವ ಎಲ್ಲವನ್ನೂ ಬದಲಿಸಿತ್ತು. ಪ್ರತಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಕ್ಕೂ ಮುನ್ನ ಒಂದು ವಾರ ರಿಹರ್ಸಲ್ ಮಾಡ್ತಿದ್ವಿ. ಸಾಕಷ್ಟು ಖರ್ಚಾಗುತ್ತಿತ್ತು. ದಿನಕ್ಕೆ ಕೋಟಿ ರೂ. ವ್ಯಯಿಸಿದ್ದು ಇದೆ. ಕ್ಯಾರೇಜ್ ಫೈಟ್ ಚಿತ್ರೀಕರಣಕ್ಕೆ 25 ದಿನ ತಗೊಂಡ್ವಿ. 15 ದಿನ ರಿಹರ್ಸಲ್ಸ್, ಒಂದು ವಾರ ಹೆಚ್ಚು ಅದನ್ನು ಚಿತ್ರೀಕರಿಸಿದ್ವಿ" ಎಂದು ಅರ್ಜುನ್ ಹಂಚಿಕೊಂಡಿದ್ದಾರೆ.
'ಕಾಂತಾರ- 1' ಚಿತ್ರದಲ್ಲಿ ರಾಮ್-ಲಕ್ಷ್ಮಣ್ ಮಾಸ್ಟರ್ಸ್ ಒಂದು ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ. ಇನ್ನು ಹಾಲಿವುಡ್ ಆಕ್ಷನ್ ನಿರ್ದೇಶಕ ಟೋಡರ್ ಲಜರೋವ್ ಮತ್ತೊಂದು ಸ್ಟಂಟ್ ನಿರ್ದೇಶನ ಮಾಡಿದ್ದಾರೆ. ಅವರೊಂದಿಗೆ ಕೂಡ ಅರ್ಜುನ್ ಕೆಲಸ ಮಾಡಿದ್ದಾರೆ. 25 ಎಕರೆ ಜಾಗದಲ್ಲಿ ದೊಡ್ಡದಾಗಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ತರಬೇತಿ ಹೊಂದಿದ 500 ಫೈಟರ್ಸ್ ಜೊತೆ 3000 ಜನ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಇದೆ ಎಂದು ವರದಿಯಾಗಿದೆ.


Click it and Unblock the Notifications











