'ಕಾಂತಾರ- 1' ಸ್ಕ್ರೀನ್‌ಗಳ ಸಂಖ್ಯೆ ಎಷ್ಟು? ಪ್ರಮೋಷನ್ ಹೇಗೆ? ಅಡ್ವಾನ್ಸ್ ಬುಕ್ಕಿಂಗ್ ಯಾವಾಗ?
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಎಷ್ಟು ಸ್ಕ್ರೀನ್‌ಗಳ ಮೇಲೆ ಅಪ್ಪಳಿಸುತ್ತೆ? ಸಿನಿಮಾ ಪ್ರಮೋಷನ್ ಪ್ಲ್ಯಾನ್ ಏನು? ಎನ್ನುವುದನ್ನು ಚಿತ್ರತಂಡ ಬಹಿರಂಗಪಡಿಸಿದೆ.
ಟ್ರೈಲರ್ ಬಿಡುಗಡೆ ಬೆನ್ನಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ನಿರ್ಮಾಪಕರಾದ ವಿಜಯ್ ಕಿರಗಂದೂರ್, ನಟ- ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್, ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಶೆಟ್ಟಿ ಸೇರಿ ಚಿತ್ರತಂಡದ ಹಲವರು ಸುದ್ದಿಗೋಷ್ಠಿಯಲ್ಲಿ ಭಾಗಿವಹಿಸಿದ್ದರು. ಕೆಲ ಅನುಮಾನಗಳಿಗೆ ತೆರೆ ಎಳೆದಿದ್ದು ಮಾತ್ರವಲ್ಲ ಅದೊಂದು ವಿವಾದಕ್ಕೂ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಅಕ್ಟೋಬರ್ 1ರಂದು ದೇಶಾದ್ಯಂತ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲು ಚಿತ್ರತಂಡ ಮುಂದಾಗಿದೆ.

ನಿರ್ಮಾಪಕ ವಿಜಯ್ ಕಿರಗಂದೂರ್ ಮಾತನಾಡಿ "ಮೊದಲ ದಿನವೇ 7 ಸಾವಿರ ಸ್ಕ್ರೀನ್‌ಗಳಲ್ಲಿ ದೇಶಾದ್ಯಂತ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗಲಿದೆ. ಓವರ್‌ಸೀಸ್‌ನಲ್ಲಿ ಸ್ಕ್ರೀನ್ ಲೆಕ್ಕ ಬರಲ್ಲ, ಶೋಗಳ ಸಂಖ್ಯೆ ಲೆಕ್ಕ ಹಾಕಬಹುದು. 30 ದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಮೆಕ್ಸಿಕೋ, ಸೌಥ್ ಅಮೇರಿಕಾದಲ್ಲಿ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಮಾಡ್ತಿದ್ದೀವಿ. ಸ್ಪ್ಯಾನಿಶ್ ಭಾಷೆಗೆ ಸಿನಿಮಾ ಡಬ್ ಆಗ್ತಿದೆ. ಮೊದಲ ಬಾರಿಗೆ ಸೌತ್ ಅಮೇರಿಕಾದಲ್ಲಿ ಭಾರತದ ಸಿನಿಮಾವೊಂದು ಸ್ಪ್ಯಾನಿಶ್ ಭಾಷೆಯಲ್ಲಿ ರಿಲೀಸ್ ಆಗುವ ದಾಖಲೆ ಬರೆಯುತ್ತದೆ" ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮುಗೀತು. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬೇರೆ ರಾಜ್ಯಗಳಲ್ಲಿ ಪ್ರಚಾರ ಯಾವಾಗ ಎನ್ನುವ ಪ್ರಶ್ನೆಗೆ "ಸೆಪ್ಟೆಂಬರ್ 27ರಿಂದ ಶುರುವಾಗುತ್ತದೆ. ರಿಷಬ್ ನಟಿಸಿ, ನಿರ್ದೇಶಿಸಿರುವ ಸಿನಿಮಾ. ಹಾಗಾಗಿ ರಿಷಬ್ ಸಿನಿಮಾ ಕೆಲಸ ಬಿಟ್ಟು ಹೋಗಲು ಸಾಧ್ಯವಿಲ್ಲ. ಹಾಗಾಗಿ 27ರಂದು ಕೊಚ್ಚಿ, 28ರಂದು ಚೆನ್ನೈ, 29 ಹೈದರಾಬಾದ್ ಹಾಗೂ 30ರಂದು ಉತ್ತರ ಭಾರತಕ್ಕೆ ತೆರಳಿ ಸಿನಿಮಾ ಪ್ರಚಾರ ಮಾಡಲಿದ್ದಾರೆ" ಎಂದು ವಿಜಯ್ ಕಿರಗಂದೂರ್ ತಿಳಿಸಿದ್ದಾರೆ.

ಸಿನಿಮಾ ಬಿಡುಗಡೆಗೆ 10 ದಿನ ಬಾಕಿಯಿದೆ. ಆದರೆ ಯಾವುದೇ ಸಾಂಗ್ ಬಿಡುಗಡೆ ಆಗಿಲ್ಲ. ಈ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿ "ಅಜನೀಶ್ ಸುದ್ದಿಗೋಷ್ಠಿ ಬಂದಿಲ್ಲ. ಅಂದರೆ ಅವರು ಇನ್ನು ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆರೇಳು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ಹಾಗಾಗಿ ಬಹಳ ಕೆಲಸ ಇದೆ. ಹೆಚ್ಚು ಹೈಪ್ ಮಾಡುವುದು, ಹೆಚ್ಚು ಕಂಟೆಂಟ್ ಬಿಡುವುದು ಬೇಡ ಅನ್ನಿಸ್ತು. ಟ್ರೈಲರ್ ಕೂಡ ಬೇಡ ಅಂದುಕೊಂಡೆವು. ಕೊನೆಗೂ ಇರಲಿ ಎಂದು ರಿಲೀಸ್ ಮಾಡಿದ್ದೇವೆ. ಹಾಡುಗಳು ಬರಬಹುದು ನೋಡೋಣ" ಎಂದು ತಿಳಿಸಿದ್ದಾರೆ.
ಟ್ರೈಲರ್ ನೋಡಿದ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಅಲ್ಲ, ಪ್ರೀಮಿಯರ್ ಶೋನಲ್ಲೇ ಸಿನಿಮಾ ನೋಡಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಯಾವಾಗ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಭಾನುವಾರ (ಸೆಪ್ಟೆಂಬರ್ 28) ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾಗುವ ಸಾಧ್ಯತೆ ದಟ್ಟವಾಗಿದೆ.
ಬಹಳ ಅದ್ಧೂರಿಯಾಗಿ 'ಕಾಂತಾರ'-1 ಸಿನಿಮಾ ನಿರ್ಮಾಣವಾಗಿದೆ. ಟ್ರೈಲರ್ ನೋಡಿದರೆ ಅದು ಅರ್ಥವಾಗುತ್ತಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡು ಬಾಕ್ಸಾಫೀಸ್ ಶೇಕ್ ಮಾಡುವ ಲಕ್ಷಣಗಳು ಕಾಣುತ್ತಿದೆ. ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವುದು ಗ್ಯಾರಂಟಿ ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಹಿಂದಿನ ಚಿತ್ರದಲ್ಲಿ ಪಂಜುರ್ಲಿ, ಗುಳಿಗ ದೈವದ ವಿಚಾರಗಳನ್ನು ಹೇಳಿದ್ದ ರಿಷಬ್ ಶೆಟ್ಟಿ ಈ ಬಾರಿ ತುಳುನಾಡಿನ ಆದಿದೈವ 'ಬೆರ್ಮೆರ್' ವಿಚಾರಗಳನ್ನು ಹೇಳುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











