'ಕಾಂತಾರ'-1 ಚಿತ್ರೀಕರಣದ ವೇಳೆ ದೋಣಿ ಮಗುಚಿ ಬಿದ್ದು ಮತ್ತೊಂದು ಅವಘಡ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ-1' ಚಿತ್ರತಂಡಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಎರಡು ದಿನಗಳ ಹಿಂದೆ ಸಹ ಕಲಾವಿದ ವಿಜು ವಿಕೆ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಚಿತ್ರೀಕರಣದ ವೇಳೆ ಬೋಟ್ ಮಗುಚಿ ಬಿದ್ದು ಎಡವಟ್ಟಾಗಿದೆ.
ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ 'ಕಾಂತಾರ'-1 ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೀತಿದೆ. ಈ ವೇಳೆ ರಿಷಬ್ ಶೆಟ್ಟಿ ಸೇರಿ 30 ಜನ ಕಲಾವಿದರಿಂದ ಬೋಟ್ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ಕಲಾವಿದರು, ತಂತ್ರಜ್ಞರು ಎಲ್ಲರೂ ಈಜಿ ದಡ ಸೇರಿದ್ದಾರೆ. ಬೋಟ್‌ನಲ್ಲಿದ್ದವರು ಬಚಾವಾದರೂ ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿದೆ ಎಂದು ಹೇಳಲಾಗ್ತಿದೆ.

ಪದೇ ಪದೆ ಸಾವು ನೋವು ಸಂಭವಿಸಿ 'ಕಾಂತಾರ'-1 ತಂಡ ಭಯಭೀತವಾಗಿದೆ. ಇಂತಹ ಸಮಯದಲ್ಲಿ ಈ ದೋಣಿ ಮಗುಚಿ ಬಿದ್ದ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನು ಘಟನೆ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಿಷಬ್ ಶೆಟ್ಟಿಗೆ ಮಂಗಳೂರಿನ ಕದ್ರಿ ಬಾರೆಬೈಲ್ ಪಂಜುರ್ಲಿ ದೈವ ಎಚ್ಚರಿಕೆ ನೀಡಿದ್ದು ಗೊತ್ತೇಯಿದೆ. ಅದರ ಬೆನ್ನಲ್ಲೇ ಮತ್ತಷ್ಟು ಅವಘಡಗಳ ಸಂಭವಿಸಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಕಾಂತಾರ'-1 ಸಿನಿಮಾ ನಿರ್ಮಾಣವಾಗುತ್ತಿದೆ. 'ಕಾಂತಾರ' ಚಿತ್ರಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಪ್ರೀಕ್ವೆಲ್ ರೂಪ ಪಡೆಯುತ್ತಿದೆ. 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ಸಾಕಷ್ಟು ಜೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ಜೂನಿಯರ್ ಆರ್ಟಿಸ್ಟ್‌ಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತಕ್ಕೀಡಾಗಿತ್ತು. ಕಪಿಲ್ ಎಂಬ ಸಹ ಕಲಾವಿದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ನಂತರ ನಟ ರಾಕೇಶ್ ಪೂಜಾರಿ ಹಾಗೂ ವಿಜು ವಿಕೆ ಹೃದಯಾಘಾತದಿಂದ ಜೀವ ಕಳೆದುಕೊಂಡಿದ್ದರು.
ಇನ್ನು ದೋಣಿ ಮುಗಿಚಿ ಬಿದ್ದ ಘಟನೆ ಬಳಿಕ ಸ್ಥಳಕ್ಕೆ ಆಂಬ್ಯುಲೆನ್ಸ್ ಕೂಡ ಬಂದಿದ್ದು ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ ಎನ್ನುವ ಊಹಾಪೋಹ ಕೂಡ ಕೇಳಿಬರ್ತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಲಭ್ಯವಿಲ್ಲ.
ವಿಜು ವಿಕೆ ನಿಧನ
ಎರಡು ದಿನದ ಹಿಂದೆ (ಜೂನ್ 12) ತೀರ್ಥಹಳ್ಳಿ ಬಳಿಕ ಹೋಂಸ್ಟೇಯಲ್ಲಿ 'ಕಾಂತಾರ-1' ಚಿತ್ರದಲ್ಲಿ ನಟಿಸುತ್ತಿದ್ದ ಕೆಲ ಸಹಕಲಾವಿದರು ಉಳಿದುಕೊಂಡಿದ್ದರು. ಈ ವೇಳೆ ವಿಜು ವಿಕೆ ಎಂಬ ಕೇರಳ ಮೂಲದ ನಟ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಮಿಮಿಕ್ರಿ ಕಲಾವಿದರಾಗಿಯೂ ಅವರು ಗುರ್ತಿಸಿಕೊಂಡಿದ್ದರು. ಎದೆ ನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆದಿತ್ತು. ಆದರೆ ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು.
ರಾಕೇಶ್ ಪೂಜಾರಿ ಹೃದಯಾಘಾತ
ತಿಂಗಳ ಹಿಂದೆ ಹಾಸ್ಯನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದರು. 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋನಲ್ಲಿ ಅವರು ಮಿಂಚಿದ್ದರು. ಬಳಿಕ ಕೆಲ ಧಾರಾವಾಹಿ, ಕಾಮಿಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. 'ಕಾಂತಾರ-1' ಚಿತ್ರದ ಸಣ್ಣ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರಿಗೆ ಬಳಿಕ ಹೃದಯಾಘಾತವಾಗಿತ್ತು.
ಸಹನಟ ಕಪಿಲ್ ಸಾವು
ಕೇರಳ ಮೂಲದ ಮತ್ತೊಂದು ಸಹ ಕಲಾವಿದ ಕಪಿಲ್ ಎಂಬಾತ ಸೌಪರ್ಣಿಕಾ ನದಿಯಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದರು. ಚಿತ್ರೀಕರಣ ಇಲ್ಲದ ವೇಳೆ ಸ್ನೇಹಿತರ ಜತೆ ನೀರಿನಲ್ಲಿ ಈಜಲು ತೆರಳಿದ್ದರು. ನದಿಯಲ್ಲಿ ನೀರಿನ ಆಳ ತಿಳಿಯದೇ ಅವರು ಮುಳುಗಿ ಸಾವನ್ನಪ್ಪಿದ್ದರು. ಮೇ 6ರಂದು ಈ ಘಟನೆ ನಡೆದಿತ್ತು.
ಮಿನಿ ಬಸ್ ಅಪಘಾತ
ನವೆಂಬರ್ 24ರಂದು 'ಕಾಂತಾರ-1' ಚಿತ್ರೀಕರಣಕ್ಕಾಗಿ ಬಂದಿದ್ದ ಸಹಕಲಾವಿದರಿದ್ದ ಮಿನಿ ಬಸ್ ಪಲ್ಟಿಯಾಗಿತ್ತು. ಐದಾರು ಮಂದಿಗೆ ಪೆಟ್ಟಾಗಿತ್ತು. ಕೊಲ್ಲೂರು ಸಮೀಪದ ಜಡ್ಕಳ್ ಎಂಬಲ್ಲಿ ಈ ಘಟನೆ ನಡೆದಿತ್ತು.


Click it and Unblock the Notifications











