'ಕಾಂತಾರ- 1' ಟ್ರೈಲರ್ ಬಿಡುಗಡೆ ಮಾಡುವ ಸುವರ್ಣಾವಕಾಶ; ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ತೆರೆಗಪ್ಪಳಿಸಲು 10 ದಿನಗಳು ಮಾತ್ರ ಬಾಕಿಯಿದೆ. ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹಿಂದಿ ಟ್ರೈಲರ್ ಹೃತಿಕ್ ರೋಷನ್, ತೆಲುಗು ಟ್ರೈಲರ್ ಪ್ರಭಾಸ್, ತಮಿಳು ಶಿವರಾರ್ತಿಕೇಯನ್ ಹಾಗೂ ಮಲಯಾಳಂ ಟ್ರೈಲರ್ ಲಿಂಕ್ ಪೃಥ್ವಿರಾಜ್ ಸುಕುಮಾರ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಲಿದ್ದಾರೆ.
'ಕಾಂತಾರ- 1' ಕನ್ನಡ ಟ್ರೈಲರ್ ಅನ್ನು ಕನ್ನಡ ಜನತೆ ಬಿಡುಗಡೆ ಮಾಡುತ್ತಾರೆ ಎಂದು ಚಿತ್ರತಂಡ ಹೇಳಿತ್ತು. ಅದು ಹೇಗೆ ಎನ್ನುವ ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ಒಂದು ನಿಮಿಷ ಸಮಯ ವ್ಯಯಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ನೀವು ಕೂಡ 'ಕಾಂತಾರ- 1' ಟ್ರೈಲರ್ ಅನ್ನು ಬಿಡುಗಡೆ ಮಾಡಬಹುದು. ಅದಕ್ಕೆ ನೀವು ಏನು ಮಾಡಬೇಕು ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈಗಾಗಲೇ ಸಾಕಷ್ಟು ಜನ ಈ ಬಗ್ಗೆ ಆಸಕ್ತಿ ತೋರಿಸಿದ್ದಾರೆ.

ಟ್ರೈಲರ್ ಬಿಡುಗಡೆ ಮಾಡಲು ನೀವು ಏನು ಮಾಡಬೇಕು ಎನ್ನುವ ವಿವಿಧ ಹಂತಗಳನ್ನು ಚಿತ್ರತಂಡ ಹಂಚಿಕೊಂಡಿದೆ.
1. ಮೊದಲಿಗೆ, https://kantara.world ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಅಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸಿ.
3. ನಂತರ, ನೀವು ನಿಮ್ಮ ಹೆಸರಿನಲ್ಲಿರುವ ವಿಶೇಷ ಟ್ರೇಲರ್ ಬಿಡುಗಡೆ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ಅದನ್ನು ಎಲ್ಲರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
4. ಟ್ರೇಲರ್ ಬಿಡುಗಡೆ ಮಾಡಲು ಸೆಪ್ಟೆಂಬರ್ 22 ಸೋಮವಾರದಂದು ಮಧ್ಯಾಹ್ನ 12:35ಕ್ಕೆ ವೆಬ್‌ಸೈಟ್‌ಗೆ ಭೇಟಿ ನೀಡಿ.
ಈಗಾಗಲೇ ಕೆಲವರು ತಮ್ಮ ಮಾಹಿತಿ ನಮೂದಿಸಿ ಟ್ರೈಲರ್ ಬಿಡುಗಡೆ ಕಾರ್ಡ್ ಡೌನ್‌ಲೋಡ್ ಮಾಡಿಕೊಂಡು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 12.35ಕ್ಕೆ ಸರಿಯಾಗಿ ವೆಬ್ ಸೈಟ್‌ಗೆ ಭೇಟಿ ನೀಡಲು ಮುಂದಾಗಿದ್ದಾರೆ. ಯಾವುದೇ ಕಾರ್ಯಕ್ರಮ ಇಲ್ಲದೇ ಡಿಜಿಟಲ್ ಆಗಿ 'ಕಾಂತಾರ- 1' ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಸಂಜೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿದೆ.
ಇದೇ ಮೊದಲ ಬಾರಿಗೆ 'ಕಾಂತಾರ- 1' ಚಿತ್ರದ ಬಗ್ಗೆ ಮಾತನಾಡಲು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಬರ್ತಿದೆ. ಸಂಜೆ 5. 30ಕ್ಕೆ ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್ ಸೇರಿ ಇಡೀ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದೆ.
3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಸಿನಿಮಾ ಇದು. ಈ ಬಾರಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲು ಸಜ್ಜಾಗಿದೆ. 30ಕ್ಕೂ ಅಧಿಕ ದೇಶಗಳಲ್ಲಿ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ದೊಡ್ಡ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಮಾರಾಟವಾಗಿದೆ.
ಓಟಿಟಿ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಬಿಕರಿಯಾಗಿದೆ. ಒಂದು ದಿನ ಮೊದಲೇ ವಿಶ್ವದಾದ್ಯಂತ ಪೇಯ್ಡ್ ಪ್ರೀಮಿಯರ್ ಶೋಗಳು ಆಯೋಜಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಉತ್ತರ ಭಾರತದಲ್ಲಿ ಸಿನಿಮಾ ಭಾರೀ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆಯಿದೆ. ಎಲ್ಲರ ದೃಷ್ಟಿ 'ಕಾಂತಾರ- 1' ಟ್ರೈಲರ್ ಮೇಲೆ ನೆಟ್ಟಿದೆ. ಬರೀ ಮೇಕಿಂಗ್ ವೀಡಿಯೋ ನೋಡಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ ಎನ್ನಲಾಗ್ತಿದೆ. ಆದರೆ ಸದ್ಯಕ್ಕೆ ಹಾಡುಗಳು ಬಿಡುಗಡೆ ಅನುಮಾನ ಎನ್ನುವಂತಾಗಿದೆ. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಪ್ರಮೋಷನ್ ಮಾಡಲು ಚಿತ್ರತಂಡ ತೆರಳಬೇಕಿದೆ. ಶೀಘ್ರದಲ್ಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ. ಈಗಾಗಲೇ ವಿದೇಶಗಳಲ್ಲಿ ಬುಕ್ಕಿಂಗ್ ಶುರುವಾಗಿದ್ದು ಪ್ರೇಕ್ಷಕರು ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ.


Click it and Unblock the Notifications











