ಕಾಂತಾರ 2ನಲ್ಲಿ ರಜನಿಕಾಂತ್ ನಟನೆ, ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್; ಯಾವ ಪಾತ್ರ?
ಕಳೆದ ವರ್ಷ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ದೇಶಾದ್ಯಂತ ಸದ್ದು ಮಾಡಿದ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನವನ್ನು ಕಬಳಿಸಿಕೊಂಡ ಕಾಂತಾರ ಚಿತ್ರ ಭಾರತ ಸಿನಿಮಾ ರಂಗದಲ್ಲಿ ವಿಶೇಷ ದಾಖಲೆಯನ್ನು ಬರೆದ ಚಿತ್ರ ಎನಿಸಿಕೊಂಡಿದೆ. ಮೊದಲಿಗೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಿದ ಚಿತ್ರತಂಡ ಬೇರೆ ಬೇರೆ ರಾಜ್ಯಗಳ ಸಿನಿ ರಸಿಕರಿಂದ ವ್ಯಕ್ತವಾದ ಪ್ರಶಂಸೆ ಕಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಪರ ರಾಜ್ಯಗಳಲ್ಲಿಯೂ ಸಹ ಬಿಡುಗಡೆ ಮಾಡಿದರು.
ಹೀಗೆ ಪರ ರಾಜ್ಯಗಳ ಸಿನಿ ರಸಿಕರ ಬೇಡಿಕೆ ಹಾಗೂ ರೆಸ್ಪಾನ್ಸ್ ಮೇರೆಗೆ ಪ್ಯಾನ್ ಇಂಡಿಯಾ ಚಿತ್ರವಾದ ಕಾಂತಾರ ಹಿಂದಿ ಬೆಲ್ಟ್‌ನಲ್ಲಿಯೇ ನೂರು ಕೋಟಿ ಕಲೆಕ್ಷನ್ ಮಾಡಿತು. ಕರ್ನಾಟಕದಲ್ಲಿ ಕೆಜಿಎಫ್ ಚಾಪ್ಟರ್ 2 ಬಳಿಕ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನೂ ಸಹ ಬರೆಯಿತು.
ಇಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡಿದ ಕಾಂತಾರ ಚಿತ್ರದ ಎರಡನೇ ಭಾಗ ಕಾಂತಾರ 2 ಚಿತ್ರ ಸಹ ಸಿದ್ಧವಾಗಲಿದೆ ಎಂಬ ಘೋಷಣೆಯನ್ನೂ ಸಹ ಚಿತ್ರತಂಡ ಮಾಡಿದ್ದು, ಸಿನಿ ರಸಿಕರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಲಿದೆ. ಇನ್ನು ರಿಷಬ್ ಶೆಟ್ಟಿಯೇ ಹೇಳಿರುವಂತೆ ಈಗ ಬಿಡುಗಡೆಗೊಂಡು ನಾವೆಲ್ಲಾ ನೋಡಿ ರೋಮಾಂಚನಗೊಂಡಿರುವ ಕಾಂತಾರ ಚಿತ್ರ ಎರಡನೇ ಭಾಗವಾಗಿದ್ದು, ಕಾಂತಾರ 2 ಚಿತ್ರ ಇದರ ಹಿಂದಿನ ಕಥೆಯಾಗಿರಲಿದೆ. ಇಂತಹ ಹೇಳಿಕೆಯನ್ನು ನೀಡಿ ಸಿನಿ ರಸಿಕರನ್ನು ಹುಚ್ಚೆಬ್ಬಿಸಿರುವ ರಿಷಬ್ ಶೆಟ್ಟಿ ಈ ಬಾರಿ ಯಾವ ರೀತಿಯ ಕಥೆಯನ್ನು ಬಿಚ್ಚಿಡಲಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿವೆ. ಇನ್ನು ಈ ಕುರಿತಾಗಿ ಇದೀಗ ಹೊಸದೊಂದು ಸುದ್ದಿ ಹರಿದಾಡುತ್ತಿದ್ದು, ಕಾಂತಾರ 2 ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಕಾಂತಾರ 2 ಚಿತ್ರದಲ್ಲಿ ರಜನಿ ನಟನೆ?
ಹೌದು, ಕಾಂತಾರ ಚಿತ್ರತಂಡ ಕಾಂತಾರ 2 ಚಿತ್ರದಲ್ಲಿ ವಿಶೇಷ ಹಾಗೂ ಅತಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸಲು ರಜನಿಕಾಂತ್ ಅವರನ್ನು ಸಂಪರ್ಕಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಜನಿಕಾಂತ್ ಈ ಆಫರ್‌ಗೆ ಗ್ರೀನ್ ಸಿಗ್ನಲ್ ನೀಡಿದರೆ ಕಾಂತಾರ 2 ಚಿತ್ರದ ಮೂಲಕ ರಜನಿಕಾಂತ್ ಅನೇಕ ವರ್ಷಗಳ ಬಳಿಕ ಕನ್ನಡ ಚಿತ್ರವೊಂದಕ್ಕಾಗಿ ಬಣ್ಣ ಹಚ್ಚಿದಂತಾಗಲಿದೆ. ಸದ್ಯ ರಜನಿಕಾಂತ್ ಅವರದ್ದು ಚಿತ್ರದಲ್ಲಿ ಪ್ರಮುಖ ಪಾತ್ರ ಎಂಬ ಮಾಹಿತಿ ಮಾತ್ರ ಹರಿದಾಡುತ್ತಿದ್ದು, ಈ ಪಾತ್ರ ಯಾವುದು ಎಂಬುದನ್ನು ಚಿತ್ರತಂಡವೇ ಬಹಿರಂಗಪಡಿಸಬೇಕಿದೆ. ಇನ್ನು ಈ ಹಿಂದೆ ಕಾಂತಾರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಾಗ ರಜನಿಕಾಂತ್ ರಿಷಬ್ ಶೆಟ್ಟಿ ಅವರನ್ನು ತಮ್ಮ ಮನೆಗೆ ಕರೆಸಿ ಚಿತ್ರವನ್ನು ಹೊಗಳಿ, ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದರು.

ಚಿತ್ರತಂಡದಿಂದ ಇಲ್ಲ ಅಧಿಕೃತ ಮಾಹಿತಿ
ಇನ್ನು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚಿತ್ರತಂಡ ಮಾತ್ರ ಈ ಕುರಿತು ಯಾವುದೇ ಮಾಹಿತಿಯನ್ನೂ ಸಹ ಹಂಚಿಕೊಂಡಿಲ್ಲ. ಚಿತ್ರತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ನಂತರವಷ್ಟೇ ಈ ಸುದ್ದಿ ಪಕ್ಕಾ ಆಗಲಿದೆ. ಆದರೆ ಕಾಂತಾರ 2 ಚಿತ್ರದ ಬಗ್ಗೆ ಮಾತನಾಡಿದ್ದ ರಿಷಬ್ ಶೆಟ್ಟಿ ಚಿತ್ರದಲ್ಲಿ ನೀವು ಊಹಿಸಿದಕ್ಕಿಂತ ಹೆಚ್ಚು ದೊಡ್ಡ ಸರ್‌ಪ್ರೈಸ್‌ಗಳು ಇರಲಿವೆ ಎಂಬ ಹೇಳಿಕೆಯನ್ನು ನೀಡಿದ್ದರು. ರಿಷಬ್ ಶೆಟ್ಟಿ ಅವರ ಆ ಹೇಳಿಕೆ ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರು ನಟಿಸಲಿದ್ದಾರೆ ಎಂಬುದನ್ನು ಪರೋಕ್ಷವಾಗಿ ತಿಳಿಸಿತ್ತು. ಹೀಗಾಗಿಯೇ ರಜನಿಕಾಂತ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿದೆ.

ರಜನಿ ನಟನೆಯ ಕನ್ನಡ ಚಿತ್ರಗಳ ಪಟ್ಟಿ
1. ಕಥಾಸಂಗಮ - 1976
2. ಬಾಳು ಜೇನು - 1976
3. ಒಂದು ಪ್ರೇಮದ ಕಥೆ - 1977
4. ಸಹೋದರರ ಸವಾಲ್ - 1977
5. ಕುಂಕುಮ ರಕ್ಷೆ - 1977
6. ಗಲಾಟೆ ಸಂಸಾರ - 1977
7. ಕಿಲಾಡಿ ಕಿಟ್ಟು - 1978
8. ಮಾತು ತಪ್ಪದ ಮಗ - 1978
9. ತಪ್ಪಿದ ತಾಳ - 1978
10. ಪ್ರಿಯಾ - 1979
11. ಗರ್ಜನೆ - 1981


Click it and Unblock the Notifications











