ಮೋಹನ್ ಲಾಲ್ ಭೇಟಿಯಾದ ರಿಷಬ್ ಶೆಟ್ಟಿ; ಶುರುವಾಯ್ತು ಬಿಸಿಬಿಸಿ ಚರ್ಚೆ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ-1' ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ. ಈಗಾಗಲೇ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಆದರೆ ಇನ್ನು ಚಿತ್ರೀಕರಣ ಮಾತ್ರ ಆರಂಭವಾದಂತೆ ಕಾಣುತ್ತಿಲ್ಲ. ಇದೆಲ್ಲದರ ನಡುವೆ ರಿಷಬ್ ಶೆಟ್ಟಿ ಮಲಯಾಳಂ ನಟ ಮೋಹನ್ ಲಾಲ್ ಭೇಟಿ ಮಾಡಿದ್ದಾರೆ.
ಒಂದೂವರೆ ವರ್ಷದ ಹಿಂದೆ 'ಕಾಂತಾರ' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ತೆರೆಕಂಡು ಗೆದ್ದಿತ್ತು. ಸದ್ಯ ಚಿತ್ರದ ಹಿಂದಿನ ಕಥೆ ಹೇಳಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ. ತಮ್ಮ ಊರಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಭರ್ಜರಿ ಸೆಟ್ ನಿರ್ಮಾಣ ಕೆಲಸ ನಡೀತಿದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ 'ಕಾಂತಾರ ಚಾಪ್ಟರ್-1' ಸಿನಿಮಾ ನಿರ್ಮಾಣ, ರಿಲೀಸ್ ಪ್ಲ್ಯಾನ್ ನಡೀತಿದೆ. ಈ ವರ್ಷ ಸಿನಿಮಾ ಬರೋದು ಸಾಧ್ಯವಿಲ್ಲ ಎನ್ನಲಾಗ್ತಿದೆ. ಈಗಾಗಲೇ ಚಿತ್ರದ ಓಟಿಟಿ ರೈಟ್ಸ್ ಕೂಡ ಮಾರಾಟವಾಗಿದೆ. 150 ಕೋಟಿ ರೂ.ಗೆ ಸಿನಿಮಾ ಪೋಸ್ಟ್ ಡಿಜಿಟಲ್ ರೈಟ್ಸ್ ಡೀಲ್ ಆಗಿದೆ. ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಇನ್ನು ಚಿತ್ರದ ಸ್ಟಾರ್ ಕಾಸ್ಟ್ ಬಗ್ಗೆ ಭಾರೀ ಕುತೂಹಲವಿದೆ.
ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗುವ ಸಾಧ್ಯತೆಯಿದೆ. ಇತ್ತೀಚೆಗೆ ನಟ ರಿಷಬ್ ಶೆಟ್ಟಿ ಹಾಗೂ ಜ್ಯೂ. ಎನ್‌ಟಿಆರ್ ಭೇಟಿ ಆಗಿದ್ದರು. ಪ್ರಶಾಂತ್ ನೀಲ್ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಇಬ್ಬರು ಭಾಗಿ ಆಗಿದ್ದರು. ಈ ವೇಳೆ ಒಟ್ಟಿಗೆ ಕ್ಲಿಕ್ಕಿಸಿದ ಫೋಟೊಗಳು ವೈರಲ್ ಆಗಿತ್ತು. ತಾರಕ್ ಕೂಡ 'ಕಾಂತಾರ' ಪ್ರೀಕ್ವೆಲ್‌ನಲ್ಲಿ ನಟಿಸುತ್ತಾರಾ? ಎನ್ನುವ ಊಹಾಪೋಹ ಶುರುವಾಗಿತ್ತು.
ಸದ್ಯ ಮೋಹನ್ ಲಾಲ್ ಹಾಗೂ ರಿಷಬ್ ಶೆಟ್ಟಿ ಭೇಟಿ ಕೂಡ ಇದೇ ರೀತಿಯ ಚರ್ಚೆ ಹುಟ್ಟಾಕ್ಕಿದೆ. 'ಕಾಂತಾರ'-1 ಚಿತ್ರಕ್ಕೆ ಮೋಹನ್ ಲಾಲ್ ಆಯ್ಕೆ ಮಾಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೋಹನ್ ಲಾಲ್ ನಟಿಸಿದರೆ ಸೂಪರ್ ಆಗಿರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಸಮೇತ ರಿಷಬ್ ಶೆಟ್ಟಿ, ಮೋಹನ್ ಲಾಲ್ ಅವರನ್ನು ಭೇಟಿ ಮಾಡಿದ್ದಾರೆ.
"ಮೋಹನ್ ಲಾಲ್ ಸರ್ ಭೇಟಿ ಆಗಿದ್ದು ಹೆಮ್ಮೆ ಹಾಗೂ ಸಂತಸ ತಂದಿದೆ" ಎಂದು ಬರೆದು ರಿಷಬ್ ಶೆಟ್ಟಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬೇರೆ ಸಿನಿಮಾಗಳನ್ನೆಲ್ಲಾ ಪಕ್ಕಕ್ಕಿಟ್ಟು ರಿಷಬ್ ಶೆಟ್ಟಿ 'ಕಾಂತಾರ-1' ಸಿನಿಮಾ ಪ್ರೀ ಪ್ರೊಡಕ್ಷನ್ಸ್‌ನಲ್ಲಿ ಭಾಗಿ ಆಗಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಕೂಡ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಲಿದ್ದಾರೆ.
ಇನ್ನು 'ಕಾಂತಾರ' ಪ್ರೀಕ್ವೆಲ್‌ನಲ್ಲಿ ಸಪ್ತಮಿ ಗೌಡ ನಟಿಸುತ್ತಿಲ್ಲ. ಈ ಬಗ್ಗೆ ಆಕೆ ಇತ್ತೀಚೆಗೆ ಹೇಳಿದ್ದಾರೆ. ಪ್ರೀಕ್ವೆಲ್ ಕಥೆಯಲ್ಲಿ ನನ್ನ ಪಾತ್ರ ಇರಲ್ಲ. ಹಾಗಿರುವಾಗ ನಾನು ನಟಿಸೋಕೆ ಹೇಗೆ ಸಾಧ್ಯ? ಎಂದು ಕೇಳಿದ್ದಾರೆ. ಆದರೆ ಖ್ಯಾತ ಕಲಾವಿದರು ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ.
ಅಂದಾಜು 15 ಕೋಟಿ ರೂ. ಬಜೆಟ್‌ನಲ್ಲಿ 'ಕಾಂತಾರ' ಸಿನಿಮಾ ನಿರ್ಮಾಣವಾಗಿದೆ ಭರ್ಜರಿ ಕಲೆಕ್ಷನ್ ಮಾಡಿತ್ತು. ಹಲವು ಪಟ್ಟು ಅಧಿಕ ಲಾಭ ತಂದುಕೊಟ್ಟಿತ್ತು. ಆದರೆ ಪ್ರೀಕ್ವೆಲ್ ಬಜೆಟ್ 100 ಕೋಟಿ ರೂ. ಆಗುವ ನಿರೀಕ್ಷೆಯಿದೆ. ಮೇಕಿಂಗ್ ಕಾಸ್ಟ್ ಜೊತೆಗೆ ಕಲಾವಿದರು, ತಂತ್ರಜ್ಞರ ಸಂಭಾವನೆಯೂ ಹೆಚ್ಚಲಿದೆ. ಹಾಗಾಗಿ 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರುವ ಪ್ರಯತ್ನಗಳು ನಡೀತಿದೆ.


Click it and Unblock the Notifications











