ಹತ್ತಿದ ಏಣಿ ಒದ್ರಾ ರಿಷಬ್? INCA ವೇದಿಕೆಯಲ್ಲೂ ಮತ್ತದೇ ಪುನರಾವರ್ತನೆ ಮಾಡಿದ ಶೆಟ್ರು
ನಟ, ನಿರ್ದೇಶಕ, ನಿರ್ಮಾಪಕರ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಅಂತರ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ವೇದಿಕೆಗಳಲ್ಲಿ ಹೊಂಬಾಳೆ ಸಂಸ್ಥೆ ಹೆಸರು ಹೇಳುವುದಕ್ಕೂ ರಿಷಬ್ ಶೆಟ್ಟಿ ಹಿಂದೇಟು ಹಾಕುತ್ತಿದ್ದಾರೆ. INCA ಅವಾರ್ಡ್ಸ್ ವೇದಿಕೆಯಲ್ಲಿ ಕೂಡ ಅದು ಮುಂದುವರೆದಿದೆ.
ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇದೇ ಕಾರಣಕ್ಕೆ ಅಂತರ ಕಾಯ್ದುಕೊಳ್ಳಲು ರಿಷಬ್ ಪ್ರಾರಂಭಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ. ವೈಮನಸ್ಸು ಇರುವುದು ನಿಜ ಎಂದು ಸ್ವತಃ ರಿಷಬ್ ಆಪ್ತ ಪ್ರಮೋದ್ ಶೆಟ್ಟಿ ಇತ್ತೀಚೆಗೆ ಹೇಳಿದ್ದಾರೆ. ಆದರೆ ಭಿನ್ನಾಭಿಪ್ರಾಯಕ್ಕೆ ಖಚಿತ ಕಾರಣ ಏನು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ವೇದಿಕೆಗೆ ರಿಷಬ್ ಶೆಟ್ಟಿ ಬಂದಿದ್ದರು. 'ಕಾಂತಾರ-1' ಚಿತ್ರಕ್ಕಾಗಿ ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದರು. ಆಗ ವೇದಿಕೆಯಲ್ಲಿ ಮಾತನಾಡುವಾಗ ಬಾಯ್ತಪ್ಪಿ ಕೂಡ ಹೊಂಬಾಳೆ ಫಿಲ್ಮ್ಸ್ ಹೆಸರು ಹೇಳಿರಲಿಲ್ಲ.

ಈ ಹಿಂದೆ ಸಂದರ್ಶನವೊಂದರಲ್ಲಿ ಪರಂವಃ ಸ್ಟುಡಿಯೋಸ್ ಹೆಸರು ಹೇಳದ ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ರಿಷಬ್ ಶೆಟ್ಟಿ ಕೂಡ ಅದೇ ತಪ್ಪು ಮಾಡುತ್ತಿದ್ದಾರಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಸದ್ಯ ಮುಂಬೈನಲ್ಲಿ ನಡೆದ INCA ಅವಾರ್ಡ್ಸ್ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಪತ್ನಿ ಸಮೇತ ಭಾಗವಹಿಸಿದ್ದರು. 'ಕಾಂತಾರ- 1' ಚಿತ್ರಕ್ಕೆ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿ ಪಡೆಯಲು 3 ಬಾರಿ ವೇದಿಕೆ ಹೋಗಿದ್ದಾರೆ ರಿಷಬ್ ಶೆಟ್ಟಿ. ಚಿತ್ರಕ್ಕಾಗಿ ಕೆಲಸ ಮಾಡಿದ ಸೆಟ್ ಬಾಯ್, ಲೈಟ್ ಬಾಯ್ ಹೀಗೆ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಆದರೆ ಹೊಂಬಾಳೆ ಫಿಲ್ಮ್ಸ್ ಹೆಸರು ಹೇಳಲೇ ಇಲ್ಲ.
ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ರಿಷಬ್ ಶೆಟ್ಟಿ ವೇದಿಕೆ ಏರಿ ಮಾತನಾಡಿದ್ದಾರೆ. ಮೊದಲಿಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆಯಲು ವೇದಿಕೆ ಏರಿದ್ದರು. ಪ್ರಶಸ್ತಿ ಪಡೆದು ಮಾತನಾಡಿದ ರಿಷಬ್ "ಎರಡು ಭಾಗಗಳು ಸೇರಿ 'ಕಾಂತಾರ' ಸಿನಿಮಾ 7 ವರ್ಷಗಳ ಪರಿಶ್ರಮ. ಇಡೀ ತಂಡದ ಪರಿಶ್ರಮ ಇದರಲ್ಲಿದೆ. ಆಕ್ಷನ್ ಕ್ರೊರಿಯೋಗ್ರಫರ್, ಪ್ರೊಡಕ್ಷನ್ ಡಿಸೈನರ್, ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಶೆಟ್ಟಿ ಕೂಡ ಇಲ್ಲಿದ್ದಾರೆ. ಎಲ್ಲರಿಗೂ ಧನ್ಯವಾದ.. ಈ ಸಿನಿಮಾ ಮಾಡಲು ಪ್ರಗತಿ ಹುರಿದುಂಬಿಸಿದಳು. ಸೆಟ್ ಬಾಯ್ ಸೇರಿ ಇಡೀ ತಂಡಕ್ಕೆ, ಕನ್ನಡ ಪ್ರೇಕ್ಷಕರು ಹಾಗೂ ನಾವು ನಂಬುವ ದೈವಕ್ಕೆ ಪ್ರಶಸ್ತಿ ಅರ್ಪಿಸುತ್ತೇನೆ" ಎಂದು ಹೇಳಿ ರಿಷಬ್ ವೇದಿಕೆ ಇಳಿದರು.

ಬಳಿಕ 'ಕಾಂತಾರ-1' ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಘೋಷಣೆ ಆಯಿತು. ಆದರೆ ಹೊಂಬಾಳೆ ವತಿಯಿಂದ ಯಾರು ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ. ಹಾಗಾಗಿ ರಿಷಬ್ ಶೆಟ್ಟಿ ಬಂದು ಪ್ರಶಸ್ತಿ ಸ್ವೀಕರಿಸಬೇಕು ಎಂದು ನಿರೂಪಕರು ಮನವಿ ಮಾಡಿದ್ದಾರೆ. ವೇದಿಕೆ ಏರಿ ಬಂದು ಪ್ರಶಸ್ತಿ ಪಡೆದ ರಿಷಬ್ ಆಗ ಕೂಡ ಹೊಂಬಾಳೆ ಬಗ್ಗೆ ಒಂದು ಮಾತು ಆಡಲಿಲ್ಲ. "ಮತ್ತೊಮ್ಮೆ ಧನ್ಯವಾದ, ಆಗ್ಲೇ ಮಾತನಾಡಿದ್ದನ್ನೇ ಇಲ್ಲಿ ಸೇರಿಸ್ಕೊಂಡು ಬಿಡಿ" ಎಂದು ನಕ್ಕಿದ್ದಾರೆ. ಉದ್ದೇಶಪೂರ್ವಕವಾಗಿಯೇ ಹೊಂಬಾಳೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದಾರೆ. ಈ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೂಡಲೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಿ ರಿಷಬ್ ಶೆಟ್ಟಿ ಮಾತನಾಡಲೇಬೇಕು ಎಂದು ನಿರೂಪಕರಾದ ರಾಣಾ ದಗ್ಗುಬಾಟಿ ಹಾಗೂ ಕರಣ್ ಜೋಹರ್ ಒತ್ತಾಯ ಮಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ರಿಷಬ್ ಪತ್ನಿ ಪ್ರಗತಿ ಅವರನ್ನು ವೇದಿಕೆಗೆ ಕರೆದಿದ್ದಾರೆ. "ಮೊದಲ ಬಾರಿ ನಾನು 'ಕಾಂತಾರ' ಕಥೆ ಬರೆದಾಗ ನಿರ್ದೇಶನ ಮಾತ್ರ ಸಾಕು, ನಟಿಸೋದು ಬೇಡ ಎಂದುಕೊಂಡಿದ್ದೆ. ಆದರೆ ಶಿವ ಪಾತ್ರವನ್ನು ನೀನೇ ಮಾಡಬೇಕು ಎಂದು ಪ್ರಗತಿ ಹೇಳಿದ್ಲು. ಹಾಗಾಗಿ 'ಕಾಂತಾರ' ಚಿತ್ರ ನಿರ್ದೇಶಿಸಿ, ನಟಿಸಿದೆ. ಬಳಿಕ ಅದು ಮುಂದುವರೆಯಿತು. ಹಾಗಾಗಿ ಪ್ರಗತಿಗೆ ಧನ್ಯವಾದ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
'ಕಾಂತಾರ' ಚಿತ್ರದ ಕಾರಣಕ್ಕೆ ನಮ್ಮ ಹಳ್ಳಿ ಈಗ ಸಿನಿಮಾಸಿಟಿ ಆಗಿಬಿಟ್ಟಿದೆ. ಪ್ರತಿದಿನ ನಾಲ್ಕೈದು ಚಿತ್ರಗಳ ಚಿತ್ರೀಕರಣ ಅಲ್ಲಿ ನಡೀತಿದೆ ಎಂದು ರಿಷಬ್ ಸಂತಸ ವ್ಯಕ್ತಪಡಿಸಿದ್ದಾರೆ. "ಕನ್ನಡದ ಜನತೆಗೆ ಧನ್ಯವಾದ. ನಿಮ್ಮಿಂದಲೇ ಇದೆಲ್ಲಾ ಸಾಧ್ಯವಾಯಿತು. ಅದರಿಂದ 'ಕಾಂತಾರ' ಸಿನಿಮಾ ಇಲ್ಲಿವರೆಗೆ ಬಂತು, ನಾನು ಇಲ್ಲಿವರೆಗೆ ಬಂದೆ. ಇದು ನಿಮಗೆ ಸೇರಬೇಕು" ಎಂದಿದ್ದಾರೆ.


Click it and Unblock the Notifications