ಬೆಳ್ಳಿತೆರೆಯಲ್ಲಿ ಈ ದಿನದಿಂದ ಧಗಧಗಿಸಲಿದೆ ಕಾಂತಾರ ಚಾಪ್ಟರ್ 1, ರಿಷಬ್ ಶೆಟ್ಟಿಯ ಹೊಸ ಅವತಾರ ನೋಡಿದ್ರಾ ?
ಸದಾ ಹೊಸತನವನ್ನೇ ಪ್ರಯತ್ನಿಸುವ ರಿಷಬ್ ಶೆಟ್ಟಿ, ಚುರುಕುತನ, ವ್ಯಾವಹಾರಿಕ ಚತುರತೆಯನ್ನು ಹೊಂದಿರುವ ಪ್ರತಿಭೆಯೂ ಹೌದು. ಕಲಾತ್ಮಕ ಚೌಕಟ್ಟಿನಲ್ಲಿಯೇ ಸರ್ಕಾರಿ ಶಾಲೆಯಂತಾ ಸಿನಿಮಾವನ್ನೂ ಜನ ಮುಗಿಬಿದ್ದು ನೋಡುವಂತೆ ಮಾಡಿ ಗೆಲ್ಲಿಸಿದ ಹೆಗ್ಗಳಿಕೆಯನ್ನೂ ಹೊಂದಿರುವ ರಿಷಬ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಕಾಂತಾರ ಚಿತ್ರದ ಹೊಚ್ಚ ಹೊಸ ಪೋಸ್ಟರ್‌ನ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಮೂಲಕ ಬರ್ತ್‌ಡೇ ಗಿಫ್ಟ್ ನೀಡಿದೆ.
ಇದರ ಜೊತೆಯಲ್ಲಿ ಕೆಲವರಲ್ಲಿ ಇದ್ದ ಆತಂಕವನ್ನು ಕೂಡ ಹೊಂಬಾಳೆ ಸಂಸ್ಥೆ ದೂರ ಮಾಡಿದೆ. ಹೌದು, ಅಸಲಿಗೆ ಎಲ್ಲರಿಗೆ ಗೊತ್ತಿರುವಂತೆ ಕಾಂತಾರ ಸುತ್ತ ಮುತ್ತ ಸಾಲು ಸಾಲು ಅವಘಡಗಳು ಸಂಭವಿಸಿದ್ದವು. ಸಾವು ನೋವುಗಳಾಗಿದ್ದವು. ಹೀಗಾಗಿ ಕಾಂತಾರ ಚಿತ್ರದ ಮೊದಲ ಭಾಗ ಅಂದುಕೊಂಡ ದಿನದಂದು ಬಿಡುಗಡೆಯಾಗುವುದಿಲ್ಲ ಎಂದೇ ಕೆಲವರು ಅಂದುಕೊಂಡಿದ್ದರು. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಮಾಡಿದ್ದರು.

ಆದರೆ. ಈಗ ಈ ಅಂತೆ-ಕಂತೆಗಳಿಗೆಲ್ಲ ಚಿತ್ರತಂಡ ಬ್ರೇಕ್ ಹಾಕಿದ್ದು, ಬಿಡುಗಡೆಯ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಈ ಮೊದಲು ನಿರ್ಧಾರವಾದಂತೆ ಚಿತ್ರ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಪ್ರಯುಕ್ತ ಬಿಡುಗಡೆಯಾಗಲಿದೆ ಎಂಬ ಸಂದೇಶವನ್ನು ತಮ್ಮ ಈ ಹೊಸ ಪೋಸ್ಟರ್ ಮೂಲಕ ನೀಡಿದೆ.
ಇನ್ನು ಬಿಡುಗಡೆಯಾದ ಹೊಸ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ರಕ್ತ ಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕೊಡಲಿ ಮತ್ತು ಗುರಾಣಿಯನ್ನು ರಿಷಬ್ ಹಿಡಿದಿದ್ದು, ಗುರಾಣಿಗೆ ಬಾಣಗಳು ಚುಚ್ಚಿವೆ. ಹಿಂಭಾಗದಲ್ಲಿ ಬೆಂಕಿ ಧಗಧಗಿಸುತ್ತಿದ್ದು, ರಿಷಬ್ ಮುಖದಲ್ಲಿ ಕೆಂಡದಂತಹ ಕೋಪ ಇದೆ. ಸದ್ಯ ಈ ಪೋಸ್ಟರ್ ಡಿವೈನ್ ಸ್ಟಾರ್ ಅಭಿಮಾನಿಗಳಿಗೆ ಸಖತ್ ಖುಷಿಯನ್ನು ನೀಡುತ್ತಿದೆ. ಚಿತ್ರದ ಮೇಲಿನ ನಿರೀಕ್ಷೆಗಳನ್ನು ಕೂಡ ಈ ಪೋಸ್ಟರ್ ಹೆಚ್ಚಿಸಿದೆ.
ಪೋಸ್ಟರ್ ಜೊತೆ ದಂತಕಥೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ ಎಂಬ ಸಾಲುಗಳನ್ನು ಬರೆದು, ಹೊಂಬಾಳೆ ಸಂಸ್ಥೆ ರಿಷನ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ.
ಅಂದ್ಹಾಗೇ ಈ ಬಾರಿ ಗಾಂಧಿ ಜಯಂತಿ ಗುರುವಾರ ಬಂದಿದೆ. ಇನ್ನು ಕೇವಲ ಕನ್ನಡ ಮಾತ್ರವಲ್ಲ ಈ ಬಾರಿ ಕಾಂತಾರ 7 ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಎಲ್ಲಾ ಭಾಷೆಯ ಚಿತ್ರ ಪ್ರೇಮಿಗಳಿಗೆ ಕೂಡ ಈ ಚಿತ್ರದ ಮೇಲೆ ವ್ಯಾಪಕವಾದ ನಿರೀಕ್ಷೆಗಳಿವೆ. ಈ ಹಿನ್ನೆಲೆ ಗುರುವಾರ.. ಶುಕ್ರವಾರ.. ಶನಿವಾರ ಮತ್ತು ಭಾನುವಾರ.. ಬಾಕ್ಸಾಫೀಸ್‌ನಲ್ಲಿ ಕಾಂತಾರ ಧಗಧಗಿಸುವುದು ಗ್ಯಾರಂಟಿ.

ಇನ್ನು ಅಕ್ಟೋಬರ್ ಮೂರನೇ ವಾರದಲ್ಲಿ ದೀಪಾವಳಿ ಹಬ್ಬ ಕೂಡ ಇದೆ. ಹೀಗಾಗಿಯೇ ವ್ಯವಹಾರದ ದೃಷ್ಟಿಯಿಂದ ಎಲ್ಲ ಲೆಕ್ಕಾಚಾರ ಹಾಕಿಕೊಂಡೇ ಗಾಂಧಿ ಜಯಂತಿಯನ್ನು ತಮ್ಮ ಚಿತ್ರದ ಬಿಡುಗಡೆಗೆ ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಇನ್ನುಳಿದಂತೆ ಬರೋಬ್ಬರಿ 25 ಎಕರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ, "ಕಾಂತಾರ ಚಾಪ್ಟರ್ 1" ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಭಾರತೀಯ ಹಾಗೂ ಅಂತರರಾಷ್ಟ್ರೀಯ ತಂತ್ರಜ್ಞರೂ ಕೂಡ ಕೈ ಜೋಡಿಸಿದ್ದಾರೆ. 45 ರಿಂದ 50 ದಿನಗಳ ಕಾಲ 3000ಕ್ಕೂ ಹೆಚ್ಚು ಜೂನಿಯರ್ ಆರ್ಟಿಸ್ಟ್‌ಗಳು ಈ ಚಿತ್ರಕ್ಕೆ ಹಗಲಿರುಳು ಬೆವರು ಸುರಿಸಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಕಟ್ಟಿಕೊಡಗಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿವೆ.


Click it and Unblock the Notifications











