Kantara-1 Trailer: 'ಕಾಂತಾರ' ದಂತಕಥೆ; ಶಿವನು ಬಂದು ನೆಲೆಸಿದ ಭೂಮಿಯಲ್ಲಿ ಧರ್ಮಯುದ್ಧ
ಬಹುನಿರೀಕ್ಷಿತ 'ಕಾಂತಾರ ಚಾಪ್ಟರ್-1' ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಗೆ 10 ದಿನಗಳು ಬಾಕಿ ಇರುವಾಗ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡ ನಿರೀಕ್ಷೆ ಹೆಚ್ಚಿಸಿದೆ.
ರಿಷಬ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಹೆಚ್ಚು ಕಮ್ಮಿ 3 ನಿಮಿಷದ ಟ್ರೈಲರ್ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಅಜನೀಶ್ ಹಿನ್ನೆಲೆ ಸಂಗೀತದ ನಡುವೆ ರಿಷಬ್ ಕಟ್ಟಿರುವ ದೃಶ್ಯವೈಭವ ಹುಬ್ಬೇರಿಸುವಂತಿದೆ. ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಾವಿರಾರು ವರ್ಷಗಳ ಹಿಂದಿನ ಕಥೆಯನ್ನು ಚಿತ್ರದಲ್ಲಿ ಅನಾವರಣ ಮಾಡುವ ಪ್ರಯತ್ನ ನಡೆದಿದೆ. ಮಲಯಾಳಂ ನಟ ಜಯರಾಂ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ 'ಕಾಂತಾರ- 1' ಸಿನಿಮಾ ನಿರ್ಮಾಣವಾಗಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಹೃತಿಕ್ ರೋಷನ್, ಪ್ರಭಾಸ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್ ಟ್ರೈಲರ್ ಲಿಂಕ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಕಾತುರರಾಗಿದ್ದಾರೆ.
ಅದ್ಧೂರಿ ಮೇಕಿಂಗ್, ಭಾರೀ ವಿಎಫ್‌ಎಕ್ಸ್ ಜೊತೆ ರಿಷಬ್ ಶೆಟ್ಟಿ ಆರ್ಭಟ ಮೈ ಜುಮ್ ಎನಿಸುವಂಂತಿದೆ. ರಾಣಿ ಕನಕವತಿಯಾಗಿ ರುಕ್ಮಿಣಿ ಮಿಂಚಿದ್ದಾರೆ. ಗುಲ್ಶನ್ ದೇವಯ್ಯ ನೆಗೆಟಿವ್ ರೋಲ್‌ನಲ್ಲಿ ಕಥೆಗೆ ಟ್ವಿಸ್ಟ್ ಕೊಡುವುದು ಗೊತ್ತಾಗುತ್ತಿದೆ. 'ಕಾಂತಾರ' ಚಿತ್ರದಲ್ಲಿ ಇರುವಂತೆ ಇಲ್ಲಿ ಕೂಡ ಮನುಷ್ಯ ಹಾಗೂ ಕಾಡಿನ ನಡುವಿನ ಸಂಘರ್ಷದ ಕಥೆಯಿದೆ. ಬುಡುಕಟ್ಟು ಜನ ತಮ್ಮ ಉಳಿವಿಗಾಗಿ ನಡೆಸುವ ಹೋರಾಟವಿದೆ. ಅದೇ ಸಮುದಾಯದ ನಾಯಕನಾಗಿ ರಿಷಬ್ ಶೆಟ್ಟಿ ನಟಿಸಿರುವುದು ಗೊತ್ತಾಗುತ್ತಿದೆ.
ಮೊದಲೇ ಹೇಳಿದಂತೆ ಇದು 'ಕಾಂತಾರ' ಚಿತ್ರದ ಪ್ರೀಕ್ವೆಲ್. ಅಂದರೆ ಒಂದರ್ಥದಲ್ಲಿ ಕಾಡುಬೆಟ್ಟು ಶಿವನ ಪೂರ್ವಿಕರ ಕಥೆ ಎನ್ನಬಹುದು. ಅಂದಿನಿಂದ ಜನರು ಕಾಡಿನ ಜೊತೆಗೆ ಬೆಳೆಸಿಕೊಂಡ ನಂಟು, ಹಿನ್ನೆಲೆ ಎಲ್ಲವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಬಾರಿ ಗುಳಿಗ ದೈವದ ಜೊತೆಗೆ ಬ್ರಹ್ಮ ರಾಕ್ಷಸನ ಕಥೆಯೂ ಚಿತ್ರದಲ್ಲಿದೆ. ಮೊದಲ ನೋಟದಲ್ಲೇ ಟ್ರೈಲರ್ ಗಮನ ಸೆಳೆಯುತ್ತಿದೆ.
ಟ್ರೈಲರ್ ನೋಡಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವುದು ಗ್ಯಾರಂಟಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಅಕ್ಟೋಬರ್ 2ಕ್ಕೆ 'ಕಾಂತಾರ-1' ಸಿನಿಮಾ ತೆರೆಗೆ ಬರಲಿದೆ. ಪರಭಾಷಿಕರು ಟ್ರೈಲರ್ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ರಿಷಬ್ ಅಂಡ್ ಟೀಮ್ ಪ್ರಯತ್ನಕ್ಕೆ ಬಹುಪರಾಕ್ ಎನ್ನುತ್ತಿದ್ದಾರೆ.
ಶಿವನ ಅಂಶದಿಂದ ಹುಟ್ಟಿದ ಬೆರ್ಮೆ(ರಿಷಬ್ ಶೆಟ್ಟಿ) ಹುಲಿಯನ್ನು ಬೇಟೆ ಆಡುವಷ್ಟು ಗಟ್ಟಿಗನಾಗಿ ಬೆಳೆಯುತ್ತಾನೆ. ತನ್ನವರ ರಕ್ಷಣೆಗೆ ನಿಲ್ಲುವ ಯೋಧನಾಗುತ್ತಾನೆ. ಬುಡಕಟ್ಟು ಜನರ ವಿರುದ್ಧ ರಾಜ ಕುಲಶೇಖರ(ಗುಲ್ಶನ್ ದೇವಯ್ಯ)ನ ಉಪಟಳ ಹೆಚ್ಚುತ್ತದೆ. ಯುವರಾಣಿ ಕನಕವತಿ(ರುಕ್ಮಿಣಿ ವಸಂತ್) ಜೊತೆ ಪೆರ್ಮೆ ಪ್ರೇಮ ಪ್ರಣಯ. ಅವರಿಬ್ಬರ ವಿರುದ್ಧ ಕತ್ತಿ ಮಸೆಯುವ ಕುಲಶೇಖರ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು 'ಕಾಂತಾರ-1' ಸಿನಿಮಾ ಕಥೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಚಿತ್ರದಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ ಎಂದು ಹೇಳಲಾಗ್ತಿದೆ. ಆದರೆ ಅದನ್ನೆಲ್ಲಾ ಟ್ರೈಲರ್‌ನಲ್ಲಿ ಬಿಟ್ಟುಕೊಟ್ಟಿಲ್ಲ. ಸಿನಿಮಾ ಬಿಡುಗಡೆಯಾದ ಮೇಲೆ ತೆರೆಮೇಲೆ ಅದನ್ನೆಲ್ಲಾ ನೋಡಬೇಕಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಟ್ರೈಲರ್‌ನಲ್ಲಿ ಹೈಲೆಟ್ ಆಗಿದೆ. ಸೆಟ್‌ಗಳಲ್ಲಿ ಮಾತ್ರವಲ್ಲ ಲೈವ್ ಲೊಕೇಶನ್‌ಗಳಲ್ಲಿ ದೃಶ್ಯಗಳನ್ನು ಬಹಳ ಸೊಗಸಾಗಿ ಸೆರೆ ಹಿಡಿಸಿದ್ದಾರೆ. ಆಕ್ಷನ್ ಜೊತೆಗೆ ಒಂದೊಳ್ಳೆ ಕಥೆಯನ್ನು ಹೇಳುವ ಪ್ರಯತ್ನ ಮಾಡಿರುವುದು ಗೊತ್ತಾಗುತ್ತಿದೆ. ಚಿತ್ರದಲ್ಲಿ ಕಾಮಿಡಿ ಸನ್ನಿವೇಶಗಳು ಇರಲಿವೆ.


Click it and Unblock the Notifications