"ಮುಂದೊಂದು ದಿನ ಪ್ರಜಾಕೀಯ ಬರಬೇಕು" ಅಂತು ದೈವ:'ಕಾಂತಾರ' ದೃಶ್ಯ ಬಳಸಿ ಚುನಾವಣಾ ಪ್ರಚಾರ
'ಕಾಂತಾರ' ಸಿನಿಮಾ ಬಗ್ಗೆ ಇಡೀ ವಿಶ್ವಕ್ಕೂ ಗೊತ್ತು. ಆ ಮಟ್ಟಿಗೆ ಸದ್ದು ಮಾಡಿರೋ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಉತ್ತಮ ಕಮಾಯಿಯನ್ನೇ ಮಾಡಿತ್ತು. ಅದರಲ್ಲೂ ಇಡೀ ಸಿನಿಮಾದಲ್ಲಿ ಭೂತಕೋಲ, ಪಂಜುರ್ಲಿ ಸನ್ನಿವೇಶವೇ ಹೈಲೈಟ್ ಆಗಿತ್ತು.
ಈಗ ಇದೇ ದೃಶ್ಯವನ್ನು ಚುನಾವಣಾ ಪ್ರಚಾರಕ್ಕೂ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇಂತಹದ್ದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತಹದ್ದೇನಿದೆ? ತಿಳಿಯಲು ಮುಂದೆ ಓದಿ.

ಚುನಾವಣಾ ಪ್ರಚಾರಕ್ಕೆ ಇಳಿದ ಪ್ರಜಾಕೀಯ
ರಾಜ್ಯದಲ್ಲಿ ಚುನಾವಣೆಯ ಬಿಸಿ ಹೆಚ್ಚಾಗುತ್ತಿದೆ. ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿರುವಾಗಲೇ ಎಲ್ಲಾ ಪ್ರಮುಖ ಪಕ್ಷಗಳು ಪೈಪೋಟಿಗೆ ಬಿದ್ದು ಪ್ರಚಾರ ಮಾಡುತ್ತಿವೆ. ಈ ಬಾರಿ ಅಧಿಕಾರ ಚುಕ್ಕಾಣಿ ಹಿಡಿಯಲೇ ಬೇಕು ಅಂತ ವಿರೋಧ ಪಕ್ಷಗಳು ಹಠ ಮಾಡಿ ನಿಂತಿವೆ. ಇನ್ನೊಂದು ಕಡೆ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಶತ ಪ್ರಯತ್ನ ನಡೆಸುತ್ತಿದೆ. ಈ ಬೆನ್ನಲ್ಲೇ ಪ್ರಜಾಕೀಯ ಕೂಡ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುವುದಕ್ಕೆ ಮುಂದಾಗಿದೆ. ಇದರ ಪ್ರಯತ್ನವಾಗಿಯೇ ಕಾಂತಾರ ದೃಶ್ಯವನ್ನು ಬಳಸಿಕೊಂಡು ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದೆ.

'ಕಾಂತಾರ' ವಿಡಿಯೋ ವೈರಲ್
'ಕಾಂತಾರ'ದಲ್ಲಿ ರಿಷಬ್ ಶೆಟ್ಟಿ ದೈವ ನರ್ತಕನಾಗಿ ಕಾಣಿಸಿಕೊಂಡ ದೃಶ್ಯ ಸಿನಿಮಾದ ಆರಂಭದಲ್ಲಿಯೇ ಪ್ರೇಕ್ಷಕರ ಗಮನ ಸೆಳೆಯುತ್ತೆ. ಈ ದೃಶ್ಯದಲ್ಲಿ ರಿಷಬ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ನಡುವೆ ಸಂಭಾಷಣೆ ನಡೆಯುತ್ತೆ. ಅದೇ ಸಂಭಾಷಣೆಯ ದೃಶ್ಯವನ್ನು ಎಡಿಟ್ ಮಾಡಲಾಗಿದೆ. ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಆಮೀಷ ಒಡ್ಡುವುದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಡೈಲಾಗ್ ಬರೆದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.

'ಕಾಂತಾರ' ವಿಡಿಯೋದಲ್ಲಿ ಏನಿದೆ?
ಎಡಿಟ್ ಮಾಡಿದ 'ಕಾಂತಾರ' ವಿಡಿಯೋದಲ್ಲಿ ದೈವ ಹಾಗೂ ಶೈನ್ ಶೆಟ್ಟಿ ನಡುವೆ ಹೀಗೆ ಸಂಭಾಷಣೆ ನಡೆಯುತ್ತೆ. "ಸೀರೆ, ಸಾರಾಯಿ, ಹಣವನ್ನು ಈ ಜನರಿಗೆ ಹಂಚುತ್ತೇನೆ. ಅವರ ಮತವನ್ನು ನನಗೆ ಹಾಕಿಸಿಕೊಡಬೇಕು." ರಾಜಕೀಯ ಮುಖಂಡ ಹೇಳುತ್ತಾನೆ. ಅದಕ್ಕೆ ದೈವ "ಬಹಳ ಒಳ್ಳೆಯ ಪ್ರಾರ್ಥನೆ. ಈ ಊರಿನವರ ಮತವನ್ನು ನಿಮಗೆ ಹಾಕಿಸಿಕೊಡುತ್ತೇನೆ. ಆದರೆ ಇಲ್ಲಿಯವರೆಗೆ ಇವರು ಕಟ್ಟಿದ ತೆರಿಗೆ ಹಣವನ್ನು ಹಿಂದಿರುಗಿಸಿಕೊಡಬಹುದಾ ರಾಜಕೀಯ ನಾಯಕರೇ?' ಎಂದು ದೈವ ಕೇಳುತ್ತೆ. ಇಲ್ಲಿ ದೈವದ ಮೂಲಕ ರಾಜಕೀಯ ಮುಖಂಡರಿಗೆ ಚಾಟಿ ಏಟು ಬೀಸಲಾಗಿದೆ.
ಪ್ರಜಾಕೀಯ ಬರಬೇಕು
ದೈವದ ಪ್ರಶ್ನೆಗೆ ರಾಜಕೀಯ ಮುಖಂಡ (ಶೈನ್ ಶೆಟ್ಟಿ) ಒಪ್ಪುವುದಿಲ್ಲ. ಆಗ ದೈವ "ಸೀರೆ, ಸಾರಾಯಿ ಹಂಚ್ತಿ. ಆದ್ರೆ ಇದರ ತೀರ್ಮಾನವನ್ನು ಮತಗಟ್ಟಲೆಯಲ್ಲಿ ನಾನು ಮಾಡುತ್ತೇನೆ. ಈ ತೆರಿಗೆ ಹಣ ಊರಿನವರದ್ದು. ಅದರ ತೀರ್ಮಾನ ಇವತ್ತಲ್ಲ. ಮುಂದೊಂದು ದಿನ ಪ್ರಜಾಕೀಯ ಬರಬೇಕಾಗುತ್ತದೆ" ಎಂದು ಹೇಳುವಂತೆ ಸಂಭಾಷಣೆ ಸೇರಿಸಲಾಗಿದೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ಗಳಿಸುತ್ತಿದೆ.


Click it and Unblock the Notifications











