ಎರಡೂ ಕಣ್ಣು ನಮ್ಮದೇ.. 'ಕಾಂತಾರ' ಕಿಚ್ಚು ಕಮ್ಮಿ ಆಗ್ತಿಲ್ಲ: 'ಗಂಧದಗುಡಿ'ಗೆ ಸ್ಕ್ರೀನ್ಸ್ ಅಭಾವ.. 'ಹೆಡ್‌ಬುಷ್' ಕಥೆಯೇನು?
ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ. ನಮ್ಮ ಸಿನಿಮಾಗಳು ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಪರಭಾಷಿಕರು ದುಂಬಾಲು ಬಿದ್ದು ಸಿನಿಮಾ ಡಬ್ ಮಾಡಿಸಿಕೊಂಡು ನೋಡುತ್ತಿದ್ದಾರೆ. 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಇದೀಗ 'ಗಂಧದಗುಡಿ' ರಿಲೀಸ್‌ಗೆ ಸಜ್ಜಾಗಿದೆ. ಥಿಯೇಟರ್‌ಗಳ ವಿಚಾರದಲ್ಲಿ ಎರಡೂ ಸಿನಿಮಾಗಳ ಮಧ್ಯೆ ಪೈಪೋಟಿ ಏರ್ಪಡುತ್ತಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. 25 ದಿನ ಪೂರೈಸಿ ಸಿನಿಮಾ ಮುನ್ನುಗ್ಗುತ್ತಿದೆ. ಪ್ರೇಕ್ಷಕರು ಮತ್ತೆ ಮತ್ತೆ ಸಿನಿಮಾ ನೋಡಲು ಥಿಯೇಟರ್‌ಗೆ ಬರ್ತಿದ್ದು, ಸದ್ಯಕ್ಕೆ ಸಿನಿಮಾ ಹವಾ ಕಮ್ಮಿ ಆಗುವ ಸುಳಿವು ಸಿಗುತ್ತಿಲ್ಲ. ಕರ್ನಾಟಕದ ಎಲ್ಲಾ ಪ್ರಮುಖ ಥಿಯೇಟರ್‌ಗಳಲ್ಲಿ 'ಕಾಂತಾರ' ಆವರಿಸಿಕೊಂಡಿದೆ. ಇದೀಗ ಪುನೀತ್ ರಾಜ್‌ಕುಮಾರ್ ನಟನೆಯ 'ಗಂಧದಗುಡಿ' ರಿಲೀಸ್ ಆಗ್ತಿದ್ದು, ಪ್ರಮುಖ ಥಿಯೇಟರ್‌ಗಳ ಅಭಾವ ಎದುರಾಗುವ ಸುಳಿವು ಸಿಗುತ್ತಿದೆ. ಇದರ ನಡುವೆ ಕಳೆದ ವಾರ ರಿಲೀಸ್ ಆಗಿರುವ ಹೆಡ್‌ಬುಷ್' ಸಿನಿಮಾ ಒಂದೇ ವಾರಕ್ಕೆ ಕೆಲ ಥಿಯೇಟರ್‌ಗಳಿಂದ ಎತ್ತಂಗಡಿ ಆಗುವ ಸಾಧ್ಯತೆಯಿದೆ.
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಗಂಧದಗುಡಿ' ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ತಮ್ಮದೇ 'ಕಾಂತಾರ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಆಗ್ತಿದ್ದು, ಹೇಗೆ ಅದನ್ನು ತೆಗೆದು 'ಗಂಧದಗುಡಿ' ಹಾಕುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಅಪ್ಪು ಕೊನೆಯ ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗಬೇಕು ಎನ್ನುವುದು ಅಭಿಮಾನಿಗಳ ಕೋರಿಕೆ.

'ಕಾಂತಾರ' ಹವಾ ಕಮ್ಮಿ ಆಗುತ್ತಿಲ್ಲ
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ 'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದೆ. 25 ದಿನ ಕಳೆದರೂ ಸಿನಿಮಾ ಕ್ರೇಜ್ ಕಮ್ಮಿ ಆಗುತ್ತಿಲ್ಲ. ದೀಪಾವಳಿ, ವೀಕೆಂಡ್‌ನಲ್ಲಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬರ್ತಿದ್ದಾರೆ. ರಿಪೀಟ್ ಆಡಿಯನ್ಸ್ ಸಂಖ್ಯೆ ಜಾಸ್ತಿ ಆಗುತ್ತಿದ್ದು, ಸದ್ಯಕ್ಕೆ ಥಿಯೇಟರ್‌ಗಳಿಂದ ಸಿನಿಮಾ ತೆಗೆಯುವುದು ಕಷ್ಟದ ಮಾತು. ಆರಂಭದಲ್ಲಿ ಕಡಿಮೆ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ ಬೇಡಿಕೆ ಹೆಚ್ಚಾದಂತೆ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ತಂಡಕ್ಕೆ ಹಾಟ್ಯಾಪ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

'ಗಂಧದಗುಡಿ' ದೊಡ್ಡದಾಗಿ ರಿಲೀಸ್ ಆಗಬೇಕು
ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ 'ಗಂಧದಗುಡಿ'. ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವ ಜತೆ ಅವುಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ 'ಗಂಧದಗುಡಿ' ಸಿನಿಮಾ ನಿರ್ಮಾಣವಾಗಿದೆ. ಅಪ್ಪು ಮೊದಲ ದರ್ಶನ ಪುಣ್ಯಸ್ಮರಣೆ ವೇಳೆಗೆ ಈ ಡಾಕ್ಯುಡ್ರಾಮ ತೆರೆಗೆ ತರುವ ಪ್ರಯತ್ನ ನಡೀತಿದೆ. ಕ್ರೇಜ್‌ಗೆ ತಕ್ಕಂತೆ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. 'ಗಂಧದಗುಡಿ' ಎಲ್ಲಾ ದಾಖಲೆಗಳನ್ನು ಮುರಿಯಬೇಕು ಎನ್ನುವುದು ಅಭಿಮಾನಿಗಳ ಆಸೆ. ಬೇಡಿಕೆಗೆ ತಕ್ಕಂತೆ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಬೇಕಿದೆ. ಸದ್ಯ 'ಕಾಂತಾರ' ಹಾಗೂ 'ಹೆಡ್‌ಬುಷ್' ಸಿನಿಮಾಗಳು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಆ ಸ್ಕ್ರೀನ್‌ಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ.

2 ಚಿತ್ರಗಳ ಮಧ್ಯೆ ನಲುಗುತ್ತಾ 'ಹೆಡ್‌ಬುಷ್'?
ಡಾಲಿ ಧನಂಜಯ ನಿರ್ಮಿಸಿ, ನಟಿಸಿರುವ 'ಹೆಡ್‌ಬುಷ್' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಬೆಂಗಳೂರು ಭೂಗತಲೋಕದ ಆ ದಿನಗಳನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಧನು ಡಾನ್ ಜಯರಾಜ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಒಂದ್ಕಡೆ 'ಕಾಂತಾರ' ಸಿನಿಮಾ ಸದ್ದು ಕಮ್ಮಿ ಆಗುತ್ತಿಲ್ಲ. ಮತ್ತೊಂದ್ಕಡೆ ಅಪ್ಪು ಸಿನಿಮಾ ಬರ್ತಿದೆ. ಹಾಗಾಗಿ 'ಹೆಡ್‌ಬುಷ್' ಸ್ಕ್ರೀನ್‌ಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗ್ತಿದೆ. 'ಕಾಂತಾರ' ಹಾಗೂ 'ಗಂಧದಗುಡಿ' ನಡುವೆ 'ಹೆಡ್‌ಬುಷ್' ಸಿನಿಮಾ ರಿಲೀಸ್ ಲೆಕ್ಕಾಚಾರ ಸರಿಯಲ್ಲ ಎಂದು ಕೆಲವರು ಹೇಳುತ್ತಾ ಬಂದಿದ್ದರು.

ಎರಡೂ ಕಣ್ಣು ನಮ್ಮದೇ
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಥಿಯೇಟರ್‌ಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಲಾಕ್‌ಡೌನ್ ಸಮಯದಲ್ಲೂ ಒಂದಷ್ಟು ಥಿಯೇಟರ್‌ಗಳು ಬಾಗಿಲು ಮುಚ್ಚುವಂತಾಗಿತ್ತು. ಇದೇ ಈಗ ಥಿಯೇಟರ್‌ಗಳ ಅಭಾವಕ್ಕೆ ಕಾರಣವಾಗಿದೆ. 'ಕಾಂತಾರ' ಹಾಗೂ 'ಗಂಧದಗುಡಿ' ಎರಡೂ ಕೂಡ ನಮ್ಮ ಸಿನಿಮಾಗಳೇ. ಹಾಗಾಗಿ ಎರಡೂ ಚಿತ್ರಕ್ಕೂ ಸಮಸ್ಯೆ ಆಗಬಾರದು. ಅಪ್ಪು ಕೊನೆ ಚಿತ್ರಕ್ಕೆ ಜಾಸ್ತಿ ಸ್ಕ್ರೀನ್‌ಗಳು ಸಿಗಬೇಕು. ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡಿ ಬಾಕ್ಸಾಫೀಸ್ ಶೇಕ್ ಮಾಡಬೇಕು ಎನ್ನುವುದು ಕನ್ನಡ ಸಿನಿರಸಿಕರ ಆಶಯ. ಅದೇ ರೀತಿ ಕನ್ನಡದ ಹೆಮ್ಮೆ 'ಕಾಂತಾರ' ಚಿತ್ರಕ್ಕೂ ಸಮಸ್ಯೆ ಆಗಬಾರದು.


Click it and Unblock the Notifications











