Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೇವರಂತೆ ಪ್ರತ್ಯಕ್ಷವಾದ ರಾಜ್ ರನ್ನು ನೋಡಿ ಈ ಹುಡುಗ ಕೈ ಸಿಕ್ಕ ಹಣವನ್ನೆಲ್ಲ ನೀಡಿದ್ದ!
'ಲೂಸಿಯಾ' ಸಿನಿಮಾದ ಜಮ್ಮ ಜಮ್ಮ ಹಾಡಿನಲ್ಲಿ ಒಂದು ಸಾಲು ಬರುತ್ತದೆ. ''ಏನು ಅಂತ ಹೇಳಲಿ, ಹೆಂಗೆ ಮಾತನಾಡಲಿ ರಜನಿಕಾಂತೆ ರಸ್ತೆಯಲ್ಲಿ ಸಿಕ್ಕಿಬಿಟ್ಟರೆ..'' ಅಂತ. ಅದೇ ರೀತಿ ಇದ್ದಕ್ಕಿದ್ದ ಹಾಗೆ ಡಾ ರಾಜ್ ಕುಮಾರ್ ಎದುರಿಗೆ ಬಂದರೇ ಏನು ಹೇಳೋದು..ಏನು ಮಾಡೋದು...
ರಾಜ್ ಕುಮಾರ್ ರನ್ನು ನೇರವಾಗಿ ನೋಡುವುದು ಇರಲಿ, ಅವರ ಸಿನಿಮಾ ನೋಡಬೇಕು ಅಂದರೆನೇ ಆಗ ಟಿಕೆಟ್ ಸಿಗುತ್ತಿರಲಿಲ್ಲ. ಇಂತಹ ಸಮಯದಲ್ಲಿ, ತನ್ನ ಪಾಡಿಗೆ ತಾನು ಅಂಗಡಿಯಲ್ಲಿ ಕೆಲಸ ಮಾಡುತ್ತ ಒಬ್ಬ ಹುಡುಗನಿಗೆ ಅಣ್ಣಾವ್ರ ದರ್ಶನ ಆಗುತ್ತದೆ. ಅಂತಹ ಭಾಗ್ಯ ಸಿಕ್ಕಿದ್ದು ನಿರ್ದೇಶಕ ಕಾಂತ ಕನ್ನಲಿ ಅವರಿಗೆ.
ಅಮ್ಮನ ನೆನಪು ತರುವ ರಾಜ್ ಸಿನಿಮಾಗಳು : 'ಪರಶುರಾಮ' ತಂದ ಜ್ವರ
'ಜಲ್ಸ' ಮತ್ತು 'ಇರುವುದೆಲ್ಲವ ಬಿಟ್ಟು' ಸಿನಿಮಾಗಳ ನಿರ್ದೇಶಕ ಕಾಂತ ಕನ್ನಲಿ, ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ತಮ್ಮ ಹಳೆಯ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ರಾಜ್ ರನ್ನು ನೋಡಿದ ಅವರು ಇಂದಿಗೂ ಆ ನಗು ಹಾಗೂ ಆ ಕಣ್ಣುಗಳನ್ನು ಮರೆತಿಲ್ಲ.
ತಮ್ಮ ಮುಂದೆ ಸಾಕ್ಷಾತ್ ದೇವರಂತೆ ಬಂದು ನಿಂತ ರಾಜ್ ಕುಮಾರ್ ಅವರ ಅಪರೂಪದ ಘಟನೆಯನ್ನು ಈ ರೀತಿ ಕಾಂತ ಕನ್ನಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ...

ಒಂದೇ ಬಾರಿ ಅವರನ್ನ ಭೇಟಿ ಮಾಡಿದ್ದು
''ಅಣ್ಣಾವ್ರ ಬಗ್ಗೆ ಬರೆಯುವಷ್ಟು ನಾನು ದೊಡ್ಡವನಲ್ಲ, ಆದರೂ ಅವರ ಕುರಿತು ಒಂದಿಷ್ಟಾದರು ಬರೆಯದಿದ್ದರೆ ಬರವಣಿಗೆ ಎಂಬ ಪದಕ್ಕೆ ಅರ್ಥವಿರುವುದಿಲ್ಲ ಎಂಬುದು ನನ್ನ ಭಾವನೆ. ಏನು ಬರೆಯುವುದು ಆ ಮಹಾನ್ ದಿವ್ಯ ಚೇತನದ ಬಗ್ಗೆ, ಭಾರತೀಯ ಚಿತ್ರರಂಗವೇ ಮೆಚ್ಚಿದ ಮೇರು ನಟ, ಅಭಿಮಾನಿಗಳನ್ನು ದೇವರು ಅಂತ ಕರೆದ ಸಾಕ್ಷಾತ್ ದೇವತಾ ಮನುಷ್ಯ. ನನ್ನ ಜೀವನದಲ್ಲಿ ಒಂದೇ ಬಾರಿ ಅವರನ್ನ ಅತ್ಯಂತ ಸನಿಹದಿಂದ ಕಂಡಿದ್ದು. ಅದೇ ಮೊದಲು-ಅದೇ ಕೊನೆ. ಆ ಘಟನೆ ನೆನೆಸಿಕೊಂಡರೆ ಈಗಲೂ ಮೈಜುಮ್ಮೆನ್ನುತ್ತದೆ. ರೋಮಾಂಚನವಾಗುತ್ತದೆ.''
ಡಾ, ರಾಜ್ ಬಗ್ಗೆ ದರ್ಶನ್, ಸೃಜನ್, ತರುಣ್ ಅಭಿಮಾನದ ನುಡಿ

ಎರಡು ಸಾವಿರ ಇಸವಿಯ ಕೊನೆಯ ದಿನಗಳು
''ಅದು...ಎರಡು ಸಾವಿರ ಇಸವಿಯ ಕೊನೆಯ ದಿನಗಳು ನಾನು ಚಿತ್ರರಂಗಕ್ಕೆ ಬರಬೇಕೆಂದು ಕನಸು ಕಾಣುತ್ತಿದ್ದ ಸಮಯ. ಗುಜರಾತ್ ನಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಅಪಾರ ಹಾನಿಗೊಳಗಾಗಿದ್ದ ಸಂತ್ರಸ್ತರಿಗೆ ನೆರವಾಗಲು ಅಣ್ಣಾವ್ರ ಮುಂದಾಳತ್ವದಲ್ಲಿ ಕನ್ನಡ ಚಿತ್ರರಂಗದವರೆಲ್ಲ ಒಟ್ಟಾಗಿ ಹಣ ಸಂಗ್ರಹಿಸಿ ಕಳುಹಿಸುವ ಸಲುವಾಗಿ ಚಿಕ್ಕಪೇಟೆಯ ಗಲ್ಲಿಗಲ್ಲಿಗಳಲ್ಲಿ ಡಬ್ಬ ಹಿಡಿದು ಸ್ವತಃ ತಾವೇ ಬಂದಿದ್ದರು. ನಾನಾಗ ಅವೆನ್ಯೂ ರಸ್ತೆಯಲ್ಲಿನ ಸೇಠು ಅವರ (ಗಜರಾಜ್ ಎಚ್ ಜೈನ್) ಮಾಲಿಕತ್ವದ ರಾಜ್ ಕಮಲ್ ಎಂಬ ಝೆರಾಕ್ಸ್ ಅಂಗಡಿಯಲ್ಲಿ ತಿಂಗಳಿಗೆ ಸಾವಿರದ ಮುನ್ನೂರೈವತ್ತಕ್ಕೆ ಕೆಲಸಕ್ಕಿದ್ದೆ.''
ಮುತ್ತುರಾಜನ ಮುತ್ತಿನಂಥ ಮಾತುಗಳನ್ನು ಅವರ ಧ್ವನಿಯಲ್ಲೇ ಕೇಳಿ

ನಟ ನಟಿಯರು ಬರುತ್ತಿದ್ದಾರೆ ಅನ್ನೋ ವಿಷಯ ಬಂತು
''ಮಾಲೀಕರಿಗೆ ನನ್ನ ಮೇಲಿನ ನಂಬಿಕೆ ಎಷ್ಟಿತ್ತೆಂದರೆ ಅವರು ಬೆಳಿಗ್ಗೆ ಅಂಗಡಿ ತೆರೆದು ದೇವರ ಪೂಜೆ ಮಾಡಿ ಹೊರಟರೆಂದರೆ ಮರಳಿ ಬರುತ್ತಿದ್ದಿದ್ದು ಸಂಜೆಯೇ. ಈ ನಡುವಿನ ಹಣದ ವಹಿವಾಟು ಅಂಗಡಿಯ ಜವಬ್ದಾರಿಯನ್ನೆಲ್ಲ ನಾನೇ ನೋಡಿಕೊಳ್ಳೊತ್ತಿದ್ದೆ. ನಟ ನಟಿಯರು ಬರುತ್ತಿದ್ದಾರೆ ಅನ್ನೋ ವಿಷಯ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿ ತಮ್ಮ ನೆಚ್ಚಿನ ಕಲಾವಿದರನ್ನೆಲ್ಲ ಕಣ್ಣು ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಸಾವಿರಾರು ಜನರಲ್ಲಿ ನಾನು ಕೂಡ ಒಬ್ಬ.''

ಏ ಅಲ್ ಬಂದ್ರಂತೆ..!! ಏ ಪಕ್ಕದ್ ಗಲ್ಲಿಲಿದ್ದಾರಂತೆ..!!
''ಏನು ಮಾಡೋದು ನಮ್ಮ ಅಂಗಡಿ ಇದ್ದದ್ದು ಒಂದು ಚಿಕ್ಕ ಕಾಂಪ್ಲೆಕ್ಸ್ ನ ಒಳಭಾಗದಲ್ಲಿ. ಬಂದ ಕಲಾವಿದರು ಮುಖ್ಯ ರಸ್ತೆಯಲ್ಲಿಯೇ ಬಂದು ಹಾಗೆ ಹೊರಟರೆ? ಆದಾಗ್ಯೂ ಅಷ್ಟೊಂದು ಜನಸ್ತೋಮವಿದ್ದಾಗ ನಾನು ಅಂಗಡಿ ಬಿಟ್ಟು ಹೊರಗೆ ಬರುವಂತೆಯು ಇಲ್ಲ, ಬೇಸರದಲ್ಲಿಯೇ ಅಂಗಡಿಯ ಮುಂಗಟ್ಟೆಯಲ್ಲಿ ಕಾದುನಿಂತಿದ್ದೆ. ಜನಸಾಗರದ ಸದ್ದುಗದ್ದಲದ ನಡುವಲ್ಲಿ ಏ ಅಲ್ ಬಂದ್ರಂತೆ!! ಏ ಪಕ್ಕದ್ ಗಲ್ಲಿಲಿದ್ದಾರಂತೆ!!! ಅನ್ನೋ ಮಾತುಗಳು ಕಿವಿಗೆ ಬೀಳುತ್ತಿದ್ದರೆ ಹೃದಯದ ಬಡಿತ ಹೆಚ್ಚಾಗಿ ಮನಸ್ಸು ವಿಲ ವಿಲಾಂತ ಒದ್ದಾಡತೊಡಗಿತ್ತು. ಎಲ್ಲಿ ಮಿಸ್ ಮಾಡ್ಕೊಂಡ್ಬಿಡ್ತಿನೋ ಅನ್ನೊ ಭಯದಲ್ಲೆ ಇದ್ದೆ, ಜನರ ಪ್ರವಾಹ ಮತ್ತಷ್ಟು ಹೆಚ್ಚಾಗತೊಡಗಿತ್ತು.''

ನನ್ನ ಮುಂದೆಯೇ ಅಣ್ಣಾವ್ರು ಬಂದ ಅಮೃತ ಘಳಿಗೆ
''ಅಷ್ಟೊಂದು ಜನರ ಮಧ್ಯದಲ್ಲಿ ಹೋಗಿ ಅವರ ಅಂಗ ರಕ್ಷಕನ್ನ ಭೇದಿಸಿ ಅಣ್ಣಾವರನ್ನ ನೋಡಿ ಮುಟ್ಟಿ ಮಾತನಾಡಿಸುವುದು ಅಸಾಧ್ಯದ ಮಾತೆ ಎಂದು ಅರಿತು ನನ್ನಷ್ಟಕ್ಕೆ ನಾನೇ ಸಮಾಧಾನತೆಗೆದುಕೊಂಡೆ. ಕೆಲ ಕ್ಷಣದ ನಂತರ ಇದ್ದಕ್ಕಿದ್ದಂತೆ ಕಾಂಪ್ಲೆಕ್ಸ್ ಒಳಗೆ ನೂರಾರು ಜನರ ದಂಡು ನುಗ್ಗ ತೊಡಗಿತು ನಾನು ಆಶ್ಚರ್ಯದಿಂದ ಗುಂಪಿನಲ್ಲಿ ಯಾರಾದರು ಹೀರೊ ಬಂದರಾ ಎಂದು ತಲೆ ಎತ್ತಿ ಕಣ್ ಅರಳಿಸಿ ನೋಡಿದೆ, ಒಂದು ಕ್ಷಣ ಮಿಂಚು ಕಂಡಂತಾಯ್ತು ಕಾರಣ ಸಾಕ್ಷಾತ್ ಅಣ್ಣೋರೆ ಒಂದು ಡಬ್ಬ ಹಿಡಿದು ನಡೆದು ನಾನಿದ್ದ ಅಂಗಡಿಯ ಒಳಗೆ ಸೀದಾ ಬಂದುಬಿಡೋದಾ!''

ಕೈಗೆ ಸಿಕ್ಕಷ್ಟು ಹಣ ಅಣ್ಣೋರ ಡಬ್ಬಕ್ಕೆ ಹಾಕಿದೆ
''ಅಣ್ಣಾವ್ರನ್ನು ಅಷ್ಟು ಹತ್ತಿರದಿಂದ ನೋಡಿ ಹೇಗಾಗಬೇಡ, ಕೈಕಾಲೆ ಆಡುತ್ತಿಲ್ಲ ಅವರ ಜೊತೆಗೆ ಅಂಬರೀಷಣ್ಣ, ಮಾಲಾಶ್ರಿ ಮೇಡಮ್ ಎಲ್ಲರೂ ಒಟ್ಟಿಗೆ ಇದ್ದರು. ನಂಬಿ ಆಗ ನನ್ನ ಜೇಬಿನಲ್ಲಿ ಐವತ್ತು ರೂ ಚಿಲ್ಲರೆ ಬಿಟ್ಟರೆ ಬೇರೆನು ಇರಲಿಲ್ಲ. ಸಾಕ್ಷಾತ್ ಅಣ್ಣಾವ್ರೆ ಹಣ ಸಂಗ್ರಹ ಮಾಡಲು ಬಂದಾಗ ನಾನು ಆ ಪುಡಿಗಾಸನ್ನ ಹಾಕಲು ಮನಸ್ಸಾಗುತ್ತಿಲ್ಲ, ನನಗಾಗುತ್ತಿದ್ದ ಸಂತೋಷಕ್ಕೆ ಏನು ಮಾಡಬೇಕೆಂದೆ ತೋಚದಾದೆ, ನನ್ನದೆ ಅಂಗಡಿ ಎಂಬಂತೆ ತಟ್ಟನೆ ಗಲ್ಲಾಪೆಟ್ಟಿಗೆಗೆ ಕೈಹಾಕಿ ಕೈಗೆ ಸಿಕ್ಕಷ್ಟು ಬಾಚಿ ಅಣ್ಣೋರ ಡಬ್ಬಕ್ಕೆ ಹಾಕುತ್ತಾ ತಡವರಿಸುತ್ತಲೇ ಅಣ್ಣಾ ನಾನು ನಿಮ್ಮ ದೊಡ್ಡ ಅಭಿಮಾನಿ ಅಂದೆ.''

ನನ್ನಂತವನಿಗೂ ಒಂದು ನಗು ಕೊಟ್ಟರಲ್ಲ ವಾವ್
''ನನ್ನ ಮಾತಿಗೆ ಅವರು ನಗುತ್ತಾ ಕಣ್ಣುಬ್ಬೇರಿಸಿ ಮಗುತರ ಹೌದಾ! ಎನ್ನುವಂತೆ ತಲೆಯಾಡಿಸಿದರು ಅಷ್ಟೊತ್ತಿಗಾಗಲೇ ಅದೆಷ್ಟು ಸಾವಿರ ಜನರ ಕೈಕುಲಿಕಿದ್ದರೋ, ಅದೆಷ್ಟು ಪೋಟೋಗೆ ಫೋಸು ಕೊಟ್ಟಿದ್ದರೋ, ಆದರು ನನ್ನಂತವನಿಗೂ ಒಂದು ನಗು ಕೊಟ್ಟರಲ್ಲ ವಾವ್!!!. ಅವರ ಜೊತೆಗಿದ್ದವರೆಲ್ಲರೂ ಬಳಲಿದಂತಿದ್ದರು. ಆದರೆ, ನನಗೀಗಲೂ ನೆನಪಿದೆ ಅಣ್ಣಾವ್ರ ಮುಖದಲ್ಲಿ ಮಾತ್ರ ಲವಲೇಷವೂ ಆಯಸದ ಸುಳಿವಿರಲಿಲ್ಲ.''

ಇದೊಂದು ನೆನಪು ಸಾಕು ಆಗಾಗ ನಾನು ಸಂಭ್ರಮಿಸಲು
''ಸ್ಪುರದ್ರೂಪಿ ಯುವಕನಂತಿದ್ದ ಅಣ್ಣಾವರನ್ನ ತುಂಬಾ ಹತ್ತಿರದಿಂದ ಕಣ್ತುಂಬಿ ಕೊಂಡೆ. ಯಪ್ಪಾ ಈಗಲೂ ಆ ಒಂದು ಸನ್ನಿವೇಷವನ್ನ ನೆನೆದರೆ ಸಾಕು ಮೈಯ್ಯಲ್ಲಿ ಕರೆಂಟ್ ಪಾಸಾದಂತಾಗುತ್ತದೆ. ಇದೊಂದು ನೆನಪು ಸಾಕು ಆಗಾಗ ಸಂಭ್ರಮಿಸಲು ನಾನು. ಅಂದಹಾಗೆ ಇಂದು ಅಣ್ಣೋರ ಜನುಮದಿನ ಎಂದೆಂದಿಗೂ ನೀವು ನಮ್ಮೊಂದಿಗೆ.. ಜನುಮದಿನದ ಶುಭಾಶಯಗಳು ಅಣ್ಣ''