ಭಾರತದ ಅತ್ಯಂತ ದುಬಾರಿ ವಕೀಲರ ಮೊರೆ ಹೋದ ದರ್ಶನ್, ಸುಪ್ರೀಂನಲ್ಲಿ ವಾದ ಮಂಡಿಸಲಿದ್ದಾರೆ ಟಾಪ್ ಲಾಯರ್..?
ಪರಪ್ಪನ ಅಗ್ರಹಾರದಿಂದ ಮುಕ್ತಿಯನ್ನು ಪಡೆದು ಸದ್ಯ ದರ್ಶನ್ ತಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ವಹಿಸಿದ್ದಾರೆ. ಪತ್ನಿಯ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ನಡೆದ ಕಹಿಯನ್ನೆಲ್ಲ ಮರೆತು ಮನೆ-ಮಗ-ಸಂಸಾರ-ಸಿನಿಮಾ ಎಂದು ಓಡಾಡಿಕೊಂಡು ಇದ್ದಾರೆ.
ಹಾಗಂಥ ಸಮಸ್ಯೆ ಬಗೆಹರಿಯಿತು ಅಂತಲ್ಲ. ಯಾಕೆಂದರೆ.. ದರ್ಶನ್‌ಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನೇರಿದೆ. ವಕೀಲ ಅನಿಲ್ ನಿಶಾನಿ ಮುಖಾಂತರ ಮೇಲ್ಮನವಿಯನ್ನು ಸಲ್ಲಿಸಿದೆ. 1492 ಪುಟಗಳ ಕಡತಗಳನ್ನು ಸಲ್ಲಿಕೆ ಮಾಡಿದೆ. ಈ ಅರ್ಜಿಯ ವಿಚಾರಣೆ ಮಾರ್ಚ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆ ಚಿಂತಾಕ್ರಾಂತವಾಗಿರುವ ದರ್ಶನ್ ಸದ್ಯ ಭಾರತದ ಅತ್ಯಂದ ದುಬಾರಿ ವಕೀಲರಲ್ಲಿ ಒಬ್ಬರಾಗಿರುವ ಕಪಿಲ್ ಸಿಬಲ್ ಅವರನ್ನು ಸಂಪರ್ಕ ಮಾಡಿದ್ದಾರೆ. ಹೀಗೊಂದು ಸುದ್ದಿ ಸದ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಆ ಪ್ರಕಾರ ಈಗಾಗಲೇ ಕಪಿಲ್ ಸಿಬಲ್‌ರನ್ನು ಭೇಟಿಯಾಗಿ ಹೈಕೋರ್ಟ್‌ನ ವಾದ ಪ್ರತಿವಾದ ಮತ್ತು ಕೇಸ್ ಹಿಸ್ಟರಿಯನ್ನು ದರ್ಶನ್ ಅವರ ಕಾನೂನು ತಂಡ ಕಪಿಲ್ ಸಿಬಲ್ ಅವರಿಗೆ ನೀಡಿದೆ. ಇನ್ನು, ಕಪಿಲ್ ಸಿಬಲ್ ತ್ರಿವಳಿ ತಲಾಖ್, ಹವಾಲಾದಂತಹ ದೊಡ್ಡ ದೊಡ್ಡ ಪ್ರಕರಣಗಳಲ್ಲಿ ವಾದವನ್ನು ಮಂಡಿಸಿದವರು. ಇವರ ಒಂದು ದಿನದ ಫೀಸ್ 08ರಿಂದ 15 ಲಕ್ಷ ರೂಪಾಯಿ ಇದೆ ಎನ್ನುವ ಸುದ್ದಿ ಇದೆ.
ಹೀಗಾಗಿಯೇ ದರ್ಶನ್ ಪರ ವಕೀಲರು ಕಪಿಲ್ ಸಿಬಲ್ ಅವರ ಜೊತೆ ಕೋರ್ಟ್ ಶುಲ್ಕದ ಬಗ್ಗೆ ಕೂಡ ಚರ್ಚೆಯನ್ನು ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿಯನ್ನು ಮಾಡಿದೆ. ಹಾಗೊಂದು ವೇಳೆ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಪಿಲ್ ಸಿಬಲ್ ಒಪ್ಪಿಕೊಂಡಿದ್ದೇ ಆದಲ್ಲಿ ಈ ಮಾರ್ಚ್ 18ರಂದು ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.
ಅಂದ್ಹಾಗೇ ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ಅತ್ಯಾಪ್ತ ಸ್ನೇಹಿತೆ ಪವಿತ್ರಾ ಗೌಡ ಸೇರಿ ಉಳಿದ ಆರೋಪಿಗಳಿಗೆ ಡಿಸೆಂಬರ್ 13ರಂದು ಹೈಕೋರ್ಟ್‌ನಲ್ಲಿ ಪೂರ್ಣಾವಧಿ ಜಾಮೀನು ಮಂಜೂರಾಗಿತ್ತು. ಈ ಹಿನ್ನೆಲೆ ಹೈಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಿದ್ದ ಬೆಂಗಳೂರು ಪೊಲೀಸರು ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಪವಿತ್ರಾ ಗೌಡ, ದರ್ಶನ್, ಜಗದೀಶ್ ಜಗ್ಗ ಅಲಿಯಾಸ್ ಜಗ್ಗ, ಅನುಕುಮಾರ್ ಅಲಿಯಾಸ್ ಅನು, ಆರ್ ನಾಗರಾಜು, ಎಂ ಲಕ್ಷ್ಮಣ್, ಪ್ರದೋಶ್ ಅವರ ಜಾಮೀನು ರದ್ದು ಕೋರಿ 1492 ಪುಟಗಳ ಕಡತವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು.
ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ಆದೇಶದ ಪ್ರತಿ, ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರತಿ, ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಹೈಕೋರ್ಟ್‌ನಲ್ಲಿ ಚರ್ಚೆಗೆ ಕಾರಣವಾಗಿದ್ದ ಗ್ರೌಂಡ್ಸ್ ಆಫ್ ಅರೆಸ್ಟ್‌ನ ಪ್ರತಿಯ ಜೊತೆ ಪೋಸ್ಟ್ ಮಾರ್ಟಂ ಸಂಬಂಧ ವೈದ್ಯರಿಂದ ಪಡೆದ ಅಭಿಪ್ರಾಯದ ವರದಿ, ಎಫ್ ಎಸ್ ಎಲ್ ವರದಿಗಳ ಮೂಲ ಪ್ರತಿ, ಸಿಡಿಆರ್ ವರದಿಯ ಮೂಲ ಪ್ರತಿಗಳು, ಪಂಚನಾಮೆ ವರದಿಗಳು, ಡಿಜಿಟಲ್ ವಸ್ತುಗಳ ವಿಶ್ಲೇಷಣೆ ವರದಿ, ಜಾಮೀನು ಅರ್ಜಿ ವಜಾಗೊಳಿಸಿದ್ದ ಸೆಷನ್ಸ್ ಕೋರ್ಟ್ ಆದೇಶದ ಪ್ರತಿಯನ್ನು ಮೇಲ್ಮನವಿಯಲ್ಲಿ ಪೊಲೀಸರು ಸಲ್ಲಿಸಿದ್ದರು.
ದರ್ಶನ್ ಮಧ್ಯಂತರ ಜಾಮೀನು ಆದೇಶ ಪ್ರತಿ, ಜೈಲಿಂದ ಸಲ್ಲಿಕೆಯಾದ ವೈದ್ಯಕೀಯ ವರದಿ, ಬಿಜಿಎಸ್ ಆಸ್ಪತ್ರೆ ವೈದ್ಯರ ವರದಿ ಹೀಗೆ 15 ಅಂಶಗಳನ್ನು ಕೂಡ ಸುಪ್ರೀಂ ಕೋರ್ಟ್ ಗೆ ನೀಡಿದ್ದರು.ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದತಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜೆ.ಬಿ.ಪರಿದಿವಾಲಾ ಮತ್ತು ಆರ್ ಮಹದೇವನ್ ಅವರ ದ್ವಿಸದಸ್ಯ ಪೀಠ ವಿಚಾರಣೆಯನ್ನು ಮುಂದೂಡಿತ್ತು. ಈ ವಿಚಾರಣೆ ಈಗ ಮಾರ್ಚ್‌ನಲ್ಲಿ ನಡೆಯಲಿದ್ದು ದರ್ಶನ್ ಪರ ವಕೀಲರು ಕಪಿಲ್ ಸಿಬಲ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.


Click it and Unblock the Notifications










