ಲಕ್ಕಿಡಿಪ್ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದ ವಸಿಷ್ಠ ಸಿಂಹ, ಕರಳೆ ತಂಡದಿಂದ ಐ ಫೋನ್ ಗಿಫ್ಟ್
ಸೋಲು-ಗೆಲುವಿನಾಚೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರಯತ್ನಗಳಾಗುತ್ತಿವೆ. ಪ್ರಯೋಗಗಳಾಗುತ್ತಿವೆ. ಕ್ರಿಯಾಶೀಲತೆಯಿಂದ ಕೆಲಸ ಮಾಡುವ ಹಲವರು ಈ ಪ್ಯಾನ್ ಇಂಡಿಯಾ ಎಂಬ ಭ್ರಮೆಯಲ್ಲಿ ತೇಲದೇ ತಮ್ಮ ಕಲ್ಪನೆಗೆ ಅನುಗುಣವಾಗಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಗೆಲ್ಲಲೇಬೇಕೆಂಬ ಪ್ರಾಮಾಣಿಕ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ. ಇದಕ್ಕೆ ಒಂದು ಉದಾಹರಣೆಯಂತೆ ಇರುವ '' ಕರಳೆ'' ಚಿತ್ರ ಸದ್ಯ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರಚಾರವನ್ನು ಕೂಡ ಚಿತ್ರತಂಡ ಆರಂಭಿಸಿದೆ.
ಹೌದು, ''ಕಲಿವೀರ'', ''ಕನ್ನಡ ದೇಶದೊಳ್'' ಚಿತ್ರ ಮಾಡಿದ್ದ ನಿರ್ದೇಶಕ ಅವಿರಾಮ್ ಕಂಠೀರವ ಈ ಬಾರಿ ''ಕರಳೆ'' ಎಂಬ ಚಿತ್ರವನ್ನು ಮಾಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಕೂಡ ಮುಗಿಸಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಅವಿರಾಮ್ ಕಳೆದ ಕೆಲ ದಿನಗಳ ಹಿಂದೆ ''ಚಿತ್ರದ ಹೆಸರಿನ ಅರ್ಥ ಹೇಳಿ ಐ ಫೋನ್ ಗೆಲ್ಲಿರಿ'' ಎಂಬ ಅತ್ಯಾಕರ್ಷಕ ಆಫರ್‌ನ್ನು ಕನ್ನಡ ಕಲಾರಸಿಕರಿಗೆ ನೀಡಿದ್ದರು.

ಅವಿರಾಮ್ ಅವರು ನೀಡಿದ್ದ ಈ ಆಫರ್‌ಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಸಿಕ್ಕಿದ್ದು ಸದ್ಯ ''ಕರಳೆ'' ಚಿತ್ರದ ಹೆಸರಿನ ಸರಿಯಾದ ಅರ್ಥ ಹೇಳಿದ ಅದೃಷ್ಟಶಾಲಿಗಳಿಗೆ ಕೊಟ್ಟ ಮಾತಿನಂತೆ ನಿರ್ದೇಶಕ ಅವಿರಾಮ್ ಐ ಫೋನ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಯನ್ನು ವಿಜೇತರಿಗೆ ನೀಡಲು ಕನ್ನಡ ಚಿತ್ರರಂಗದ ಕಂಚಿನ ಕಂಠದ ನಾಯಕ ''ವಸಿಷ್ಠ ಸಿಂಹ'' ಅತಿಥಿಯಾಗಿ ಬಂದಿದ್ದು ಕಾರ್ಯಕ್ರಮದ ವಿಶೇಷತೆಗಳಲ್ಲೊಂದು.
''ಅಪ್ಪು ದಡ್ಡಿ'' ಮತ್ತು ''ನಂಜರಾಜ್ ಹೆಮ್ಮೆಯ ಕನ್ನಡಿಗ'' ಎಂಬ ಅದೃಷ್ಟಶಾಲಿಗಳಿಗೆ ಐ ಫೋನ್‌ಗಳನ್ನು ವಿತರಣೆ ಮಾಡಿದ ವಸಿಷ್ಠ ಸಿಂಹ ಇದೇ ಸಮಯದಲ್ಲಿ ಒಂದು ಚಿತ್ರ ಇಂದಿನ ದಿನಮಾನದಲ್ಲಿ ಪ್ರೇಕ್ಷಕರನ್ನು ತಲುಪಬೇಕಿದ್ದರೆ ನಿರ್ಮಾಪಕರು ಮುಖ್ಯ ಎಂದು ಹೇಳಿದರು. ನಿರ್ಮಾಪಕರ ಜೇಬು ತುಂಬಿ ಮತ್ತಷ್ಟು ಪ್ರಯತ್ನ ಅವರಿಂದ ಆಗಬೇಕಿದ್ದರೆ ಅದರ ಹಿಂದೊಂದು ಗೆಲುವು ಇರಬೇಕು. ಅದು ಕಮರ್ಷಿಯಲ್ ಗೆಲುವಾಗಿರಬಹುದು ಅಥವಾ ಪ್ರೇಕ್ಷಕರ ಪ್ರೀತಿ ಮತ್ತು ವಿಮರ್ಷಕರ ಪ್ರೀತಿಯನ್ನು ಚಿತ್ರ ಗಳಿಸಿರಬಹುದು, ಒಟ್ಟಾರೆ ಹಣ ಮತ್ತು ಹೆಸರು ಬಂದಾಗ ನಾವದನ್ನು ಪರಿಪೂರ್ಣ ಗೆಲುವು ಎಂದು ಭಾವಿಸುತ್ತೇವೆ ಎಂದು ಹೇಳಿದರು.

ಮುಂದುವರೆದು ಕನ್ನಡ ಚಿತ್ರರಂಗಕ್ಕೆ ಕಳೆದ ಎರಡೂವರೆ ವರ್ಷಗಳಿಂದ ದೊಡ್ಡ ಗೆಲುವಿನ ಕೊರತೆಯೊಂದು ಕಾಡುತ್ತಿತ್ತು. ಆ ಕೊರೆತಯನ್ನು ಹೊಸಬರ ''ಸು ಫ್ರಮ್ ಸೋ'' ನೀಗಿಸಿದೆ ಎಂದ ವಸಿಷ್ಠ ಸಿಂಹ ಈ ರೀತಿಯ ಅತ್ಯಮೋಘವಾದ ಗೆಲುವು ನಿರ್ಮಾಪಕರಿಗೆ ಇನ್ನಷ್ಟು ಚಿತ್ರಗಳನ್ನು ನಿರ್ಮಾಣ ಮಾಡಲು ಪ್ರೇರೆಪಿಸುತ್ತದೆ ಎಂದು ಹೇಳಿದರು. ಈ ''ಕರಳೆ'' ಚಿತ್ರತಂಡದ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಇಡೀ ತಂಡಕ್ಕೆ ಶುಭ ಹಾರೈಸಿದರು ವಸಿಷ್ಠ ಸಿಂಹ.
ಅಂದ್ಹಾಗೇ '' ಕರಳೆ'' ಮಹಿಳಾ ಪ್ರಧಾನ ಕಥೆಯಾಗಿದ್ದು ಸಮಾಜಕ್ಕೆ ಕೈಗನ್ನಡಿ ಹಿಡಿಯುವಂತಹ ಈ ಚಿತ್ರದ ಕಥಾವಸ್ತು ಭಾರತ ಮಾತ್ರವಲ್ಲ ಚೀನಾಗೆ ಕೂಡ ಸಾಮ್ಯತೆಯನ್ನು ಹೊಂದಿದೆ. ಈ ಹಿನ್ನೆಲೆ ಚಿತ್ರವನ್ನು ಚೈನೀಸ್ ಭಾಷೆಯಲ್ಲಿ ಕೂಡ ನಿರ್ಮಾಪಕ ಪಾಲಾಕ್ಷ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿನ್ನೆಲೆ ಚೀನಾದಲ್ಲಿ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಇಲ್ಲಿಯವರೆಗೆ ಚಿತ್ರೀಕರಣವಾಗದ ಸ್ಥಳದಲ್ಲಿ ಎಲ್ಲಾ ಈ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ. ಬಾಲನಟಿಯಾಗಿ ಶ್ರಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ರಾಘವೇಂದ್ರ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ರಾಗದನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ.ಸದ್ಯ ಪ್ರಚಾರವನ್ನು ಶುರು ಮಾಡಿರುವ ಚಿತ್ರತಂಡ ಚಿತ್ರವನ್ನು ಆದಷ್ಟು ಬೇಗನೇ ತೆರೆಗೆ ತರುವ ಯೋಜನೆಯನ್ನು ಹಾಕಿಕೊಂಡಿದೆ.


Click it and Unblock the Notifications










