''ಜಾಕಿ'' ಜಾತ್ರೆ .. ''ಯುವ'' ಅಬ್ಬರ .. ಏನಾಯಿತು ''ಕರಟಕ ದಮನಕ'' ಕಥೆ..?
ಒಂದು ಕಡೆ ''ಜಾಕಿ'' .. ಮತ್ತೊಂದು ಕಡೆ ''ಯುವ'' .. ಇವೆರಡರ ನಡುವೆ ಬಂದ ಸಿನಿಮಾ ''ಕರಟಕ ದಮನಕ''. ಡಾ.ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ''ಅಪೂರ್ವ ಸಂಗಮ''ಕ್ಕೆ ಸಾಕ್ಷಿಯಾದ ಈ ಸಿನಿಮಾ ಇನ್ನೂ ಕೆಲ ದಿನಗಳ ನಂತರ ಬಂದಿದ್ದರೆ ಇನ್ನೊಂದಿಷ್ಟು ''ಕಾಸು'' ಕೈಯಲ್ಲಿ ಆಡ್ತಿತ್ತಾ ಗೊತ್ತ್ ಇಲ್ಲ.
ಯಾಕೆಂದರೆ .. ''ವಿಮರ್ಷಕ'' ಹಾಗೂ ''ಪ್ರೇಕ್ಷಕ'' ಇಬ್ಬರ ಹೃದಯವನ್ನ ಗೆದ್ದ ಈ ಸಿನಿಮಾ ''ಜಾಕಿ ಜಾತ್ರೆ'' ಹಾಗೂ ''ಯುವ ಅಬ್ಬರ''ದ ನಡುವೆ ಮಂಕಾಯಿತು. ಬಿಡುಗಡೆಗೂ ಮುನ್ನ ಇದ್ದ ಉತ್ಸಾಹ, ಚಿತ್ರತಂಡದಲ್ಲಿ ಆ ನಂತರ ''ಕಣ್ಮರೆ''ಯಾಯಿತು. ಈ ಮಾತನ್ನ ಚಿತ್ರತಂಡ ಒಪ್ಪಿಕೊಳ್ಳುತ್ತಾ ಗೊತ್ತಿಲ್ಲ. ಆದರೆ ಸಾರ್ವತ್ರಿಕ ವಲಯದಲ್ಲಿ ಈ ಅಭಿಪ್ರಾಯ ಇದ್ದೇ ಇದೆ. ರಾಂಗ್ ರಿಲೀಸ್ ಎಂಬ ಮಾತು ಕೇಳಿ ಬರುತ್ತಿದೆ.

ಹಾಗಂಥ ಸಿನಿಮಾ ಸೋತಿದೆ. ನಷ್ಟ ಆಗಿದೆ ಅಂತ ಅಲ್ಲ. ಇವತ್ತು ಕೂಡ ''ಕರಟಕ ದಮನಕ'' ಚಿತ್ರ ಚಿತ್ರಮಂದಿರದಲ್ಲಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹೀಗೆ ಅನೇಕ ಕಡೆ ಚಿತ್ರ ಯಶಸ್ವಿ ಪ್ರದರ್ಶನವನ್ನೂ ಕಾಣುತ್ತಿದೆ. 25 ದಿನಗಳನ್ನೂ ಕೂಡ ಪೂರೈಸಿದೆ. ಒಂದು ವಾರ ಚಿತ್ರಮಂದಿರದಲ್ಲಿ ಚಿತ್ರವೊಂದು ನೆಲೆಯೂರುವುದು ಕಷ್ಟ ಅನ್ನುವ ಈ ಕಾಲದಲ್ಲಿ ಕರಟಕ ದಮನಕ ಚಿತ್ರದ ಈ ಸಾಧನೆ ಮೆಚ್ಚುವಂತಹದ್ದೇ.
ಆದರೆ ಬಿಡುಗಡೆ ವಿಚಾರದಲ್ಲಿ ರಾಕ್ ಲೈನ್ ವೆಂಕಟೇಶ್ ಹಾಗೂ ಯೋಗರಾಜ್ ಭಟ್ ಇನ್ನೂ ಸ್ವಲ್ಪ ಮುತುವರ್ಜಿ ವಹಿಸಿದ್ದರೆ ಸಂಭ್ರಮ ಇನ್ನೂ ಹೆಚ್ಚಾಗುತ್ತಿತ್ತು. ಬಿಸಿಲೂರಿಗೆ ಉಸಿರು ನೀಡುವ ''ಕರಟಕ ದಮನಕ'' ಇನ್ನೂ ಹೆಚ್ಚೆಚ್ಚು ಜನರಿಗೆ ತಲುಪುತ್ತಿತ್ತು. ಇದಕ್ಕೆ ಇನ್ನೊಂದು ಸಾಕ್ಷಿ ಅನ್ನುವಂತೆ ''ಜಾಕಿ'' ಹಾಗೂ ''ಯುವ'' ನಡುವೆ ''ಕರಟಕ ದಮನಕ'' ಚಿತ್ರವನ್ನ ಮರೆತು, ಚಿತ್ರಮಂದಿರದಲ್ಲಿ ನೋಡುವ ಅವಕಾಶದಿಂದ ವಂಚಿತರಾದ ಕನ್ನಡ ಕಲಾರಸಿಕರು ಹಿತ್ಲಕ ಕರಿಬ್ಯಾಡ ಮಾವ ಹಾಡನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹತ್ ಹತ್ರ ಹನ್ನೆರಡುವರೆ ಲಕ್ಷದ ಅಂಕಿ-ಸಂಖ್ಯೆ ಯುಟ್ಯೂಬ್ ನಲ್ಲಿ ಕಣ್ಣಿಗೆ ಕಾಣಿಸುತ್ತೆ.
ಕರಟಕ ದಮನಕ ಚಿತ್ರದ ಕಥೆ ಏನು..?
ಕಳ್ಳತನ ಮಾಡುವುದೇ ಶ್ರೇಷ್ಠ, ಪಂಗನಾಮ ಹಾಕುವುದು ಪರಮಶ್ರೇಷ್ಠ ಎಂದು ನಂಬಿರುವ ವಿರೂಪಾಕ್ಷಿ (ಶಿವರಾಜ್‌ಕುಮಾರ್) ಮತ್ತು ಬಾಲರಾಜು (ಪ್ರಭುದೇವ) ಮಾತಲ್ಲಿಯೇ ಮನೆ ಕಟ್ಟುವ ಕಲೆಯನ್ನೂ ಕೂಡ ಕರಗತ ಮಾಡಿಕೊಂಡವರು. ಇಂತಹ ಕಿಲಾಡಿ ಜೋಡಿಯನ್ನ ಅದೊಂದು ದಿನ ಜೈಲರ್ ರುದ್ರೇಶ್ (ರಾಕ್‌ಲೈನ್ ವೆಂಕಟೇಶ್) ಒಂದು ಕೆಲಸ ಒಪ್ಪಿಸುತ್ತಾರೆ. ಮಳೆಯನ್ನೇ ನೋಡದ ನಂದಿಕೋಲೂರಿಗೆ ಈ ಇಬ್ಬರನ್ನ ಕಳುಹಿಸುತ್ತಾರೆ. ಅಷ್ಟಕ್ಕೂ ವಿರೂಪಾಕ್ಷಿ & ಬಾಲರಾಜು ನಂದಿಕೋಲೂರಿಗೆ ಹೋಗಿದ್ದೇಕೆ? ರುದ್ರೇಶ್ ಒಪ್ಪಿಸಿದ ಕೆಲಸವೇನು ಅನ್ನೋದೇ ''ಕರಟಕ ದಮನಕ'' ಚಿತ್ರದ ತಿರುಳು

ಒಟ್ನಲ್ಲಿ ''ಕರಟಕ ದಮನಕ'' ಚಿತ್ರಕ್ಕೆ ಕನ್ನಡದ್ದೇ ಸಿನಿಮಾಗಳಾದ ''ಜಾಕಿ'' ಹಾಗೂ ''ಯುವ'' ಅಡ ತಡೆಯಾಗಿದ್ದು ಸುಳ್ಳಲ್ಲ. ಇನ್ನೂ ಪರಭಾಷೆ ಸಿನಿಮಾಗಳ ಹಾವಳಿಯಂತೂ ಇದ್ದೇ ಇದೆ. ಆದರೆ ಆ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಬೀಳುವುದು ಇಲ್ಲ. ಎಲ್ಲವನ್ನೂ ಆಲೋಚಿಸಿ, ಅಳೆದು ತೂಗಿ ಚಿತ್ರವನ್ನ ಬಿಡುಗಡೆ ಮಾಡಿದ್ದರೆ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ''ಕರಟಕ ದಮನಕ'' ಚಿತ್ರ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಬಹುದಿತ್ತು ಅನ್ನುವುದು ಅನೇಕರ ಆಲೋಚನೆ ಹಾಗೂ ಅಭಿಪ್ರಾಯ.


Click it and Unblock the Notifications











