ಶಿವಣ್ಣ-ಪ್ರಭುದೇವ - ಮಾರ್ಚ್ 08ಕ್ಕೆ ಬೆಳ್ಳಿ ತೆರೆ ಧಗಧಗ..!
ಡಾ.ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಮೊಟ್ಟ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಕಾರಣಕ್ಕೆ, ಆರಂಭದಿಂದ ಕುತೂಹಲ ಕೆರಳಿಸುತ್ತ ಬಂದ ಸಿನಿಮಾ ಕರಟಕ ದಮನಕ. ಯೋಗರಾಜ್ ಭಟ್ ನಿರ್ದೇಶನ, ರಾಕ್ ಲೈನ್ ವೆಂಕಟೇಶ್ ಅದ್ಧೂರಿ ನಿರ್ಮಾಣದಡಿ ಸಿದ್ಧವಾದ ಕರಟಕ ದಮನಕ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಅಸಂಖ್ಯಾತ-ಅಗಣಿತ ಅಭಿಮಾನಿಗಳ ಅಭಿಮಾನದ ಜಾತ್ರೆಗೆ ಚಿತ್ರಮಂದಿರದ ಆವರಣ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಒಂದರ್ಥದಲ್ಲಿ ಕನ್ನಡ ಚಿತ್ರರಂಗದ ಪಾಲಿಗೆ ಈ ವರ್ಷದ ಮೊದಲ ಅದ್ಧೂರಿ ಹಬ್ಬ ಇದು ಅಂದರೆ ಅದು ತಪ್ಪಾಗಲಿಕ್ಕಿಲ್ಲ.
ಶಿವರಾತ್ರಿಗೆ ಬೆಳ್ಳಿತೆರೆಯಲ್ಲಿ ಅಪೊರ್ವ ಸಂಗಮ
ಒಂದಾನೊಂದು ಕಾಲದಲ್ಲಿ ಮಾನವನ ರೂಪದಲ್ಲಿ ಇದ್ದ ಎರಡು ಕುತಂತ್ರಿ ನರಿಗಳ ಕಥೆಯನ್ನೊಂದಿರುವ ಕರಟಕ ದಮನಕ, ಶಿವರಾತ್ರಿ ಹಬ್ಬದ ಪ್ರಯುಕ್ತ ಅಂದರೆ ಮಾರ್ಚ್ 08ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಚಿತ್ರಕ್ಕೆ ಬಂಡವಾಳ ಹೂಡಿರುವುದು ರಾಕ್ ಲೈನ್ ವೆಂಕಟೇಶ್. ನಿಮಗೆ ಗೊತ್ತು.. ಸದ್ಯಕ್ಕೆ ರಾಕ್ ಲೈನ್ ಕಾಟೇರ ಚಿತ್ರಕ್ಕೆ ಸಿಕ್ಕ ಜನ ಮನ್ನಣೆಯಿಂದ ಸಂಭ್ರಮದ ಅಲೆಯಲ್ಲಿದ್ದಾರೆ. ಈ ಕಾರಣಕ್ಕೆ ಕರಟಕ ದಮನಕ ಚಿತ್ರವನ್ನ ರಾಕ್ ಲೈನ್ ವೆಂಕಟೇಶ್ ಅದ್ಧೂರಿಯಾಗಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಪರಭಾಷೆಯಲ್ಲಿಯೂ ಎರಡು ಕುತಂತ್ರಿ ನರಿಗಳ ಕಥೆ
ಸದ್ಯಕ್ಕೆ ಎಲ್ಲೆಡೆ ಪ್ಯಾನ್ ಇಂಡಿಯಾ ಜಾತ್ರೆ ನಡೆಯುತ್ತಿದೆ. ಆದರೆ.. ಕಾಟೇರ ಈ ಜಾತ್ರೆಯಲ್ಲಿ ಭಾಗಿಯಾಗಿರಲಿಲ್ಲ. ಬದಲಿಗೆ ಪರಭಾಷೆ ಸಿನಿಮಾ ಹಾವಳಿ ನಡುವೆ ಕಾಟೇರ ಕಿಚ್ಚು ಧಗಧಗಿಸಿದ್ದು ಹಾಗೂ ಮಚ್ಚು ಝಳಪಳಿಸಿದ್ದು ಕನ್ನಡದಲ್ಲಿ ಹಾಗೂ ಕರ್ನಾಟಕದಲ್ಲಿ ಮಾತ್ರ. ಹಾಗಂಥ ಕಾಟೇರ ಚಿತ್ರವನ್ನ ಬೇರೆ ಭಾಷೆಯವರು ನೋಡಲಿಲ್ಲ ಅಂತೇನ್ ಇಲ್ಲ. ಭಾಷೆಯ ಭೇದ ಭಾವ ಇಲ್ಲದೇ ಅನೇಕರು ಕಾಟೇರ ಚಿತ್ರವನ್ನ ಕನ್ನಡದಲ್ಲಿ ನೋಡಿದ್ದಾರೆ. ಮೆಚ್ಚಿದ್ದಾರೆ. ಡಬ್ ಮಾಡಿ ಬಿಡುಗಡೆ ಮಾಡಿ ಎಂಬ ಮನವಿಯನ್ನೂ ಚಿತ್ರತಂಡದ ಬಳಿ ಮಾಡಿದ್ದಾರೆ. ಈ ಕಾರಣಕ್ಕೆ ಕರಟಕ ದಮನಕ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೋಚನೆಯನ್ನ ರಾಕ್ ಲೈನ್ ವೆಂಕಟೇಶ್ ಸದ್ಯಕ್ಕೆ ಮಾಡ್ತಿದ್ದಾರೆ. ಇನ್ನೂ ಡಾ.ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಇಬ್ಬರಿಗೂ ಅವ್ರದ್ದೇ ಆದ ಅಭಿಮಾನಿಗಳು ಪರಭಾಷೆಯಲ್ಲಿದ್ದಾರೆ. ವಿಶೇಷವಾಗಿ ಜೈಲರ್ ಹಾಗೂ ಕ್ಯಾಪ್ಟನ್ ಮಿಲ್ಲರ್ ನಂತರ ಶಿವಣ್ಣ ಅವರ ಅಭಿಮಾನಿಗಳ ಸಂಖ್ಯೆ ಅಕ್ಕ ಪಕ್ಕದ ರಾಜ್ಯಗಳಲ್ಲಿ ಇನ್ನೂ ಹೆಚ್ಚಾಗಿದೆ. ಕರಟಕ ದಮನಕ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕೆಂಬ ರಾಕ್ ಲೈನ್ ವೆಂಕಟೇಶ್ ಅವರ ಆಲೋಚನೆಗೆ ಇವೆಲ್ಲವೂ ಕೂಡ ಕಾರಣ
ಕರಟಕ ದಮನಕದಲ್ಲಿ ತಾರೆಯರ ದಂಡು
ಶಿವಣ್ಣ ಹಾಗೂ ಪ್ರಭುದೇವ ಜೊತೆ ಕರಟಕ ದಮನಕ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಹಾಗೂ ಪ್ರಿಯಾ ಆನಂದ್ ತೆರೆ ಹಂಚಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಭರಣಿ, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್ ಇವರ ಜೊತೆ ಹೆಚ್ಚು ಕಡಿಮೆ 25ಕ್ಕೂ ಅಧಿಕ ರಂಗಭೂಮಿ ಕಲಾವಿದರು ಚಿತ್ರದಲ್ಲಿದ್ದಾರೆ. ಹರಿಕೃಷ್ಣ ಸಂಗೀತ ನಿರ್ದೇಶನ ಇರುವ ಚಿತ್ರದಲ್ಲಿ ಆರು ಹಾಡುಗಳಿವೆ.

ಒಟ್ಟಿನಲ್ಲಿ ಸದ್ಯಕ್ಕೆ ಕರಟಕ ದಮನಕ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 08ಕ್ಕೆ ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ. ಅದ್ಧೂರಿಯಾಗಿ ನಿರ್ಮಾಣವಾದ ಸಿನಿಮಾ ಯೋಗರಾಜ್ ಭಟ್ ವೃತ್ತಿ ಜೀವನಕ್ಕೆ ಇನ್ನೊಂದು ತಿರುವನ್ನ ನೀಡುವ ನಿರೀಕ್ಷೆ ಕೂಡ ಗಾಂಧಿನಗರಕ್ಕಿದೆ. ಕೆಲವೇ ದಿನದಲ್ಲಿ ಕರಟಕ ದಮನಕ ಚಿತ್ರದ ಪ್ರಚಾರ ಅಧಿಕೃತವಾಗಿ ಆರಂಭವಾಗಲಿದೆ.


Click it and Unblock the Notifications











