ಅಕ್ಕನ ಹಾದಿಯ ಹಿಡಿಯೆನು ನಾನು
ಬಾಲಿವುಡ್ ತಾರೆ ಕರೀನಾ ಕಪೂರ್‌ಗೆ ಕಂಪ್ಯೂಟರ್ ಕಂಡರಾಗದು. ಎಲ್ಲಾದರೂ ಈಕೆಗೆ ಇ- ಮೇಲ್ ಕಳಿಸುವ ಅವಕಾಶವಿದ್ದರೆ, ನೀವು ಮೋಸ ಹೋಗಬೇಡಿ. ಅದನ್ನು ಕರೀನಾ ಖಂಡಿತ ನೋಡುವುದಿಲ್ಲ !
ಕಂಪ್ಯೂಟರ್ ಹೆಸರು ಕೇಳುತ್ತಲೇ ಮುಖ ಸಿಂಡರಿಸುವ ಕರೀನಾ ಈಗ ಬಾಲಿವುಡ್‌ನ ನಂಬರ್ ಒನ್ ನಾಯಕಿ. ಚಾಲ್ತಿಯಲ್ಲಿರುವ ನಾಯಕಿಯರ ಪೈಕಿ ಅತಿ ಕಿರಿಯಳೂ ಕೂಡ. ನಾಲ್ಕೈದು ವರ್ಷಗಳ ಹಿಂದೆ ಅಕ್ಕನ ಮಸಾಲೆ ಸಿನಿಮಾ ಶೂಟಿಂಗ್‌ಗಳನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದ ಕರೀನಾ ಚಿತ್ರರಂಗ ಪ್ರವೇಶಿಸಿದ್ದು ರೆಫ್ಯೂಜಿ ಚಿತ್ರದ ಮೂಲಕ. ಒಂದೇ ವರ್ಷದಲ್ಲಿ ಉತ್ತುಂಗಕ್ಕೇರಿ, ಅಕ್ಕನಿಗೇ ಕೊಕ್ ಕೊಟ್ಟ ಅಗ್ಗಳಿಕೆ ಈಕೆಯದು. ಈಕೆಯ ಇ- ಮೇಲ್ ಅಕೌಂಟುಗಳೆಲ್ಲಾ ಬಹು ದಿನಗಳಿಂದ ಬಳಸದೇ ಇರುವ ಕಾರಣ ತಂತಾವೇ ಮುಚ್ಚಿಹೋಗಿವೆ!
ಒಂದು ಕಾಲದಲ್ಲಿ ಅಕ್ಕನ ನಟನೆ ಮೆಚ್ಚುತ್ತಿದ್ದ ಕರೀನಾ ಈಗ ಪ್ರಬುದ್ಧಳಾಗಿದ್ದಾಳೆ. 'ಅಕ್ಕನಂತೆ ಬುರ್ನಾಸು ಮಸಾಲೆ ಪಾತ್ರಗಳನ್ನು ನಾನು ಆಯುವುದಿಲ್ಲ. ತೂಕ ಇದ್ದರೆ ಮಾತ್ರ ಅದು ನನ್ನ ಪಾತ್ರ. ಇಲ್ಲವಾದರೆ ಸುಳಿಯುವುದಿಲ್ಲ ಅದರ ಹತ್ರ. ಮಸಾಲೆಗೆ ಮೊರೆಹೋಗಿದ್ದಕ್ಕೇ ಅಕ್ಕ ಬಕ್ಕಾ ಬೋರಲು ಬಿದ್ದದ್ದು. ನಾನು ಚೂಸಿ ಆದ್ದರಿಂದಲೇ ಬೇಗ ಮೇಲಕ್ಕೆ ಎದ್ದಿದ್ದು..." ಕರೀನಾ ಸಂದರ್ಶನವೊಂದಕ್ಕೆ ಪಟಪಟನೆ ಹೇಳುತ್ತಿದ್ದರೆ, ಅನತಿ ದೂರದಲ್ಲೇ ಕೂತಿದ್ದ ಕರಿಷ್ಮಾಗೆ ಇರುಸು ಮುರುಸು.
ಸಿನಿಮಾ ಏಣಿ ಹತ್ತಿ ಆಕಾಶ ಮುಟ್ಟುವ ಯತ್ನದಲ್ಲಿರುವ ಕರೀನಾ ವರ್ಷ ಕಾಲದಲ್ಲೇ ಅನುಭವಸ್ಥೆ. 'ನಾನು ಅಬ್ಬಬ್ಬಾ ಅಂದರೆ ಇನ್ನು ಐದು ಅಥವಾ ಆರು ವರ್ಷ ಅಷ್ಟೇ ಈ ಉದ್ದಿಮೆಯಲ್ಲಿರುವುದು. ಜಾಣೆಯಾಗಿದ್ದಲ್ಲಿ ಮಾತ್ರ ಬೆಳೆಯಲು ಸಾಧ್ಯ. ಅಂಥಾದರಲ್ಲಿ ಹೊಸ ಸೋಮಾರಿ ಪೆಟ್ಟಿಗೆ ಕಂಪ್ಯೂಟರ್ ಮುಂದೆ ಕಾಲ ಕಳೆಯೋದಕ್ಕಾಗುತ್ತದೆಯೇ", ಗಂಭೀರವಾಗಿ ಪ್ರಶ್ನಿಸುತ್ತಾರೆ ಕರೀನಾ.
ಅಂದಹಾಗೆ, ಕೆಲವೇ ವರ್ಷಗಳ ಹಿಂದೆ ಕಂಪ್ಯೂಟರ್ ಕಲಿಯಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಬೇಕೆಂದು ಇದೇ ಕರೀನಾ ಅಪ್ಪ- ಅಮ್ಮನ ಮುಂದೆ ಕಾಲು ಮಸೆದಿದ್ದರು. ಮಗಳ ಹಟಕ್ಕೆ ಅಪ್ಪ- ಅಮ್ಮ ಮಣಿಯಲೇ ಬೇಕಾಯಿತು. ಕಂಪ್ಯೂಟರ್ ಎಂಜಿನಿಯರಾಗುವ ಕನಸು ಹೊತ್ತಿದ್ದ ಕರೀನಾಗೆ ಆಗ ಸಿನಿಮಾ ಅಂದರೆ ಅಷ್ಟಕ್ಕಷ್ಟೆ . ಈಗ ಕಂಪ್ಯೂಟರ್ ಎಣ್ಣೆ, ಕರೀನಾ ಸೀಗೆ!
ತಮ್ಮ ಮನೆಯ ಹೆಣ್ಣು ಮಕ್ಕಳು ತೆರೆ ಮೇಲೆ ಬರಕೂಡದೆಂದು ತಾಕೀತು ಮಾಡುತ್ತಿದ್ದ ರಾಜ್‌ಕಪೂರ್ ಬೇರೆ ಹೆಣ್ಣು ಮಕ್ಕಳನ್ನು ತೆರೆಗೆ ಪರಿಚಯಿಸಿದ ಪರಿ ಜಗಜ್ಜಾಹೀರು. ಆದರೆ ಆ ತಾಕೀತು ರಾಜ್‌ಕಪೂರ್ ಜೊತೆಯಲ್ಲೇ ಹೊರಟುಹೋಯಿತು. ರಣಧೀರ್ ಕಪೂರ್ ಮಾತಿಗೆ ಕರಿಷ್ಮಾ ಕಿವಿಗೊಡಲಿಲ್ಲ. ನಟನೆಗೇ ಸೈ ಎಂದರು. ಹಾರ್ವರ್ಡ್‌ಗೆ ಹೋಗಿ ಬಂದರೂ, ಕರೀನಾ ಹಿಡಿದದ್ದೂ ಅದೇ ಹಾದಿ. ಈಗ ಅಪ್ಪ ಇನ್ನೊಂದು ವಿಷಯಕ್ಕೆ ಮಕ್ಕಳ ಜೊತೆ ಅಖಾಡಕ್ಕಿಳಿದಿದ್ದಾರೆ. ಮದುವೆ ಆಗಿ ಅನ್ನುವುದು ರಣಧೀರ್ ಕೋರಿಕೆ. ನಮಗೆ ಮದುವೆ ಬೇಡ ಸ್ವಾಮಿ ಅನ್ನುವುದು ಮಕ್ಕಳ ಹಟ.


Click it and Unblock the Notifications